ADVERTISEMENT

‘ಬಸವ ಜಯಂತಿ: ಹೀಗೆ ಆಚರಿಸಿ’

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2020, 14:00 IST
Last Updated 23 ಏಪ್ರಿಲ್ 2020, 14:00 IST

ಬೆಳಗಾವಿ: ‘ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಈ ಬಾರಿ ಬಸವ ಜಯಂತಿಯನ್ನು ಮನೆಗಳಲ್ಲಿ ಆಚರಿಸುವುದು ಅನಿವಾರ್ಯವಾಗಿದೆ’ ಎಂದು ಲಿಂಗಾಯತ ಧರ್ಮ ಮಹಾಸಭಾದ ಕಾರ್ಯಾಧ್ಯಕ್ಷ ಕೆ. ಬಸವರಾಜ ತಿಳಿಸಿದ್ದಾರೆ.

‘ಶುಕ್ರವಾರದಿಂದಲೇ ಮನೆ ಮೇಲೆ ಬಸವಧ್ವಜವನ್ನು ಪ್ರದರ್ಶಿಸಬೇಕು. ಮನೆ ಅಂಗಳದಲ್ಲಿ ಗುರು ಬಸವರ ಭಾವಚಿತ್ರವನ್ನು ಜಯಂತ್ಯುತ್ಸವ ಶುಭಾಶಯಗಳ ಜತೆ ವಿದ್ಯುತ್‌ ದೀಪಗಳಿಂದ ಅಲಂಕರಿಸಿ ಪ್ರದರ್ಶಿಸಬೇಕು. ದೀಪಾವಳಿಯಂತೆ ಈಗಲೂ ಆಕಾಶ ಬುಟ್ಟಿ ತೂಗು ಹಾಕಬೇಕು’ ಎಂದು ಸಲಹೆ ನೀಡಿದ್ದಾರೆ.

‘ಏ. 26ರಂದು ಮನೆಯ ಒಳಗೂ ಹೊರಗೂ ತಳಿರು– ತೋರಣಗಳಿಂದ ಅಲಂಕಾರ ಮಾಡಬೇಕು. ಮನೆಯವರೆಲ್ಲರೂ ಸೇರಿ ಇಷ್ಟಲಿಂಗ ಪೂಜೆ ನೆರವೇರಿಸಬೇಕು. ಬಸವೇಶ್ವರ ಪೂಜಾ ವ್ರತವನ್ನು ಸಂಪೂರ್ಣವಾಗಿ ಮಾಡಬೇಕು. ನಂತರ ಗುರು ಬಸವಣ್ಣನವರ ತೊಟ್ಟಿಲು ಕಾರ್ಯಕ್ರಮ ಹಮ್ಮಿಕೊಳ್ಳಬಹುದು. ಅನುಕೂಲವಿದ್ದರೆ, ಅಕ್ಕ ಪಕ್ಕದವರು ಅಥವಾ ಬಂಧುಗಳಿಗೆ ಇಷ್ಟಾರ್ಥ ನೆರವೇರಲು ಬಸವಾನುಗ್ರಹ (ಉಡಿ ಅಕ್ಕಿ) ಮಾಡಬಹುದು. ಪಕ್ಕದ ಮನೆಗಳಿಗೆ ಸಿಹಿ ಹಂಚಬೇಕು. ಬಡವರಿಗೆ ನೆರವಾಗಬೇಕು. ಸಾಮಾನ್ಯವಾಗಿ ಅಕ್ಷಯ ತೃತೀಯದಂದು ಬಂಗಾರ ಖರೀದಿಸುವ ವಾಡಿಕೆ ಇದೆ. ಆದರೆ, ಈ ಬಾರಿ ಅಂಗಡಿಗಳು ತೆರೆದಿಲ್ಲದ ಕಾರಣ ಬಸವಣ್ಣನವರ ವಚನಗಳನ್ನು ಓದಿ ಪಾಲಿಸಲು ಪ್ರಯತ್ನಿಸಬೇಕು. ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸಬೇಕು’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.