ಅಥಣಿ: ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ನಾಲ್ಕು ರಾಜ್ಯಗಳ ಜೀವನಾಡಿ ಎನಿಸಿಕೊಂಡಿರುವ ಕೃಷ್ಣಾ ನದಿಯ ನೀರನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಧಾರವಾಡದ ವಾಲ್ಮಿಯ ಮಾಜಿ ನಿರ್ದೇಶಕ ರಾಜೇಂದ್ರ ಪೋದ್ದಾರ ಹೇಳಿದರು.
ಇಲ್ಲಿನ ಎಸ್.ಎಸ್.ಎಂ.ಎಸ್ ಮಹಾವಿದ್ಯಾಲಯದ ಖೋತ ಸಭಾಂಗಣದಲ್ಲಿ ಕೃಷ್ಣಾ ಕುಟುಂಬ ಹಾಗೂ ಅಗ್ರಾಣಿ ನದಿ ಪುನಶ್ಚೇತನ ಕಾರ್ಯಪಡೆ ಹಾಗೂ ಎಸ್.ಎಸ್.ಎಂ.ಎಸ್ ಮಹಾವಿದ್ಯಾಲಯದ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಕೃಷ್ಣಾ ನದಿ ಸದ್ಭಾವನಾ ಜಲ ಯಾತ್ರೆ ಜನಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷ್ಣಾ ನದಿಯು ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಉಗಮವಾಗಿ ಆಂಧ್ರದ ಹಂಸಾದೇವಿಯಲ್ಲಿ ಬಂಗಾಳಕೊಲ್ಲಿ ಸಮುದ್ರದಲ್ಲಿ ಸೇರುತ್ತದೆ. ಈ ನಾಲ್ಕು ರಾಜ್ಯದ ಜನರು ಸೇರಿ ಕೃಷ್ಣಾ ನದಿಯ ನೀರನ್ನು ಸಂರಕ್ಷಣೆ ಮಾಡಬೇಕಾಗಿದೆ. 1400 ಕೀ. ಮೀ ಉದ್ದದ ಈ ಕೃಷ್ಣಾ ನದಿಯು ದೇಶದ ಮೂರನೆಯ ದೊಡ್ಡ ನದಿಯಾಗಿದೆ ಎಂದರು.
ಇಂದು ಕೃಷ್ಣೆ ಯ ಒಡಲಲಲ್ಲಿ ಸಕ್ಕರೆ ಕಾರ್ಖಾನೆಯಿಂದ ಹೊರ ಬರುವ ಮಾಲಿನ್ಯವನ್ನು ನದಿಗೆ ಬಿಡುವುದು, ನದಿಯಲ್ಲಿ ಮರಳುಗಾರಿಕೆ ಮತ್ತು ಮಣ್ಣು ಮಾಫಿಯಾ ದಂಧೆ ನಡೆಸುವುದು, ಗಣಿಗಾರಿಕೆ ನಡೆಸುವುದು, ಅತಿಯಾದ ಪ್ಲಾಸ್ಟಿಕ್ ಬಳಕೆ, ಚರಂಡಿ ನೀರನ್ನು ನದಿಗೆ ಬಿಡುವುದು, ನದಿಯ ಪಕ್ಕದಲ್ಲಿ ಇರುವ ಗಿಡಮರಗಳನ್ನು ನಾಶಮಾಡಿ ಕೃಷ್ಣಾ ನದಿಯನ್ನು ನಾವೆಲ್ಲರೂ ಹಾಳು ಮಾಡುತ್ತಿದ್ದೇವೆ. ಇದರಿಂದ ನದಿಯು ಮಹಾರಾಷ್ಟ್ರ ಕರ್ನಾಟಕ ಭಾಗದಲ್ಲಿ ಮೈದುಂಬಿ ಹರಿದು ಮುಂದೆ ತೆಲಂಗಾಣ ಹಾಗೂ ಆಂಧ್ರದಲ್ಲಿ ಬತ್ತಿ ಹೋಗುತ್ತಿದೆ. ಹೀಗಾಗಿ ನದಿ ನೀರಿಗೆ ಗಂಡಾಂತರ ಎದುರಾಗಿದ ಎಂದು ಹೇಳಿದರು.
ನದಿ ನೀರು ವರ್ಷದ 12 ತಿಂಗಳು ನಿರಂತರವಾಗಿ ಹರಿಯುತ್ತಿರಬೇಕು. ಆದ ಕಾರಣ ಕೃಷ್ಣಾ ನದಿಯ ತೀರದಲ್ಲಿ ಇರುವ ರೈತರು ಹಾಗೂ ನೀರಾವರಿ ತಜ್ಞರು ಸೇರಿ ಕೃಷ್ಣಾ ನದಿಯ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಈ ಜಲ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಇವತ್ತಿಗೆ ಎಲ್ಲರೂ ಕೈಜೋಡಿಸುವ ಮೂಲಕ ನದಿ ನೀರಿನ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಕರೆ ನೀಡಿದರು.
ಹೋರಾಟಗಾರ ಎ.ಟಿ.ರಾಮಸ್ವಾಮಿ ಮಾತನಾಡಿ, ಸ್ವಾರ್ಥಕ್ಕಾಗಿ ನದಿಯಲ್ಲಿನ ಮರಳು ತೆಗೆಯುವ ಕೆಲಸ ಮಾಡಬಾರದು. ನದಿಯಲ್ಲಿರುವ ಮರಳು ಹರಿಯುವ ನೀರನ್ನು ತಡೆದು, ಅಂತರ್ಜಲ ಮಟ್ಟವನ್ನು ಹೆಚ್ಚಿಸುತ್ತದೆ. ಕೈಗಾರಿಕೆಗಳು ಬೆಳೆದ ನಂತರ ಗಿಡಮರಗಳು ನಾಶವಾಗುವ ಪರಿಸರ ನಾಶವಾಗುತ್ತಿದೆ. ಆಮ್ಲಜನಕದ ಕೊರತೆಯಿಂದ ಮುಂದಿನ ದಿನಗಳಲ್ಲಿ ಜನರು ಬದುಕಲು ಆಕ್ಸಿಜನ ಸಿಲಿಂಡರ್ ಅವಲಂಬಿಸಬೇಕಾಗುತ್ತದೆ. ನಮ್ಮ ಯುವಕರು ಜಾಗೃತರಾಗಬೇಕು. ಜಲಮೂಲಗಳು ಕಲುಷಿತವಾಗದoತೆ ಸಂರಕ್ಷಣೆ ಮಾಡಬೇಕು. ಈ ಬಗ್ಗೆ ಜನರಲ್ಲಿ ಜನಜಾಗ್ರತಿ ಮೂಡಿಸಬೇಕು ಎಂದು ಹೇಳಿದರು.
ಮಹಾರಾಷ್ಟ್ರದ ಜಲತಜ್ಞ ನರೇಂದ್ರ ಚೂಘ ಮಾತನಾಡಿ, ಕೃಷ್ಣಾ ನದಿಯು ಚಿಕ್ಕ ಚಿಕ್ಕ ಉಪನದಿಗಳ ಪುನಶ್ಚೇತನ ಮತ್ತು ಒತ್ತುವರಿ ತಡೆಗಟ್ಟುವುದು ಅಷ್ಟೇ ಅಗತ್ಯ. ಮುಂದಿನ ಪೀಳಿಗೆಗಾಗಿ ನದಿ ನೀರನ್ನು ಸಂರಕ್ಷಣೆ ಮಾಡುವುದು ಅಗತ್ಯವಾಗಿದೆ. ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಎದುರಾದರೂ ಬೇಸಿಗೆ ಕಾಲದಲ್ಲಿ ನದಿ ನೀರು ಬತ್ತುವ ಸಾಧ್ಯತೆ ಅಧಿಕವಾಗಿದೆ ಎಂದರು.
ಉಗ್ರಾಣಿ ನದಿ ಪುನಶ್ಚೇತನ ಕಾರ್ಯಪಡೆಯ ಸಂಯೋಜಕ ಅಣ್ಣಾಸಾಹೇಬ ಅಡಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಆಗ್ರಾಣಿ ನದಿಯು ಕೂಡ ಮಹಾರಾಷ್ಟ್ರದಲ್ಲಿ ಉಗಮವಾಗಿ ಖಿಳೇಗಾವಿಯಲ್ಲಿ ಅಥಣಿ ತಾಲ್ಲೂಕಿನಲ್ಲಿ ಪ್ರವೇಶಗೊಂಡು ಹುಲಗಬಾಳಿ ಹತ್ತಿರ ಕೃಷ್ಣಾ ನದಿಯ ಸಂಗಮವಾಗುತ್ತದೆ. ತಾಲ್ಲೂಕಿನ ಆಗ್ರಾಣಿ ನದಿಯು ಕೂಡ ಪುನಶ್ಚೇತನ ಹಂತದಲ್ಲಿದ್ದು, ಅವರ ಸಂರಕ್ಷಣೆ ಕೂಡ ಅಷ್ಟೇ ಅಗತ್ಯವಾಗಿದೆ. ರಾಜೇಂದ್ರ ಸಿಂಗ್ ಅವರ ನೇತೃತ್ವದಲ್ಲಿ ಈಗಾಗಲೇ ಅಗ್ರಾಣಿ ನದಿಯ ಸ್ವಚ್ಛತೆ, ಹಾಗೂ ಬಾಂದಾರ ನಿರ್ಮಾಣ ಕಾರ್ಯ ಜರುಗಿವೆ. ಮುಂದಿನ ದಿನಮಾನಗಳಲ್ಲಿ ಈ ನದಿಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವುದು ಅಗತ್ಯವಾಗಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಗಚ್ಚಿನ ಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ನಾಲ್ಕು ರಾಜ್ಯಗಳ ಜೀವನಾಡಿಯಾಗಿರುವ ಕೃಷ್ಣಾ ನದಿಯನ್ನು ಸಂರಕ್ಷಣೆ ಮಾಡುವಲ್ಲಿ ಪಕ್ಷಾತೀತವಾಗಿ ಹಮ್ಮಿಕೊಂಡಿರುವ ಸದ್ಭಾವನಾ ಜಲಯಾತ್ರೆ ಇಂದಿನ ದಿನಗಳಲ್ಲಿ ಅತ್ಯಂತ ಪ್ರಸ್ತುತವಾಗಿದೆ. ನದಿ ನೀರಿನ ಸಂರಕ್ಷಣೆಗಾಗಿ ಹಮ್ಮಿಕೊಳ್ಳುವ ಪ್ರತಿಯೊಂದು ಕಾರ್ಯಕ್ರಮಕ್ಕೆ ಶ್ರೀಮಠದಿಂದ ಅಗತ್ಯ ಸಹಕಾರ ನೀಡುವುದಾಗಿ ಹೇಳಿದರು.
ಆಂಧ್ರಪ್ರದೇಶದ ಜಲತಜ್ಞ ಬಿ.ಸತ್ಯನಾರಾಯಣ, ತೆಲಂಗಾಣ ರಾಜ್ಯದ ಜಲಮಂಡಳಿಯ ಮಾಜಿ ನಿರ್ದೇಶಕ ವಿ. ಪ್ರಕಾಶ ರಾವ್, ಅಪ್ಪಾಸಾಹೇಬ ಯರನಾಳ, ಹಿಪ್ಪರಗಿಯ ಇಂಚಗೇರಿ ಆಶ್ರಮದ ಪ್ರಭು ಚನ್ನಳ್ಳಿ ಮಹಾರಾಜರು, ಪರಿಸರ ಪ್ರೇಮಿ ಆರ್.ಪಿ ಹುಬ್ಬಳ್ಳಿ, ಮಹಾವಿದ್ಯಾಲಯದ ಪ್ರಾಚಾರ್ಯ ಪ್ರಶಾಂತ ಮಗದುಮ, ನಿವೃತ್ತ ಎಂಜಿನಿಯರ್ ಅರುಣ ಯಲಗುದ್ರಿ, ಶ್ರೀಕಾಂತ್ ಮಾಕಾಣಿ, ಶಂಭು ಮಮದಾಪುರ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.