ADVERTISEMENT

ಅಲೆಮಾರಿಗಳನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿ: ಹೆಚ್ಚುವರಿ ಡಿಸಿ ಅಶೋಕ

ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 15:34 IST
Last Updated 5 ಫೆಬ್ರುವರಿ 2020, 15:34 IST
ಬೆಳಗಾವಿಯಲ್ಲಿ ಬುಧವಾರ ನಡೆದ ಅಲೆಮಾರಿ, ಅರೆ ಅಲೆಮಾರಿ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಮಾಹಿತಿ ಪಡೆದರು
ಬೆಳಗಾವಿಯಲ್ಲಿ ಬುಧವಾರ ನಡೆದ ಅಲೆಮಾರಿ, ಅರೆ ಅಲೆಮಾರಿ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಮಾಹಿತಿ ಪಡೆದರು   

ಬೆಳಗಾವಿ: ‘ಹಿಂದುಳಿದ ವರ್ಗಗಳಲ್ಲಿನ ಅಲೆಮಾರಿ ಸಮುದಾಯದ ಜನರಿಗೆ ಸರ್ಕಾರಿ ಕಾರ್ಯಕ್ರಮಗಳ ಲಾಭ ತಲುಪಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳೂ ಕರ್ತವ್ಯ ನಿರ್ವಹಿಸಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಹೇಳಿದರು.

ಬುಧವಾರ ನಡೆದ ಅಲೆಮಾರಿ, ಅರೆ ಅಲೆಮಾರಿ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಬಹುತೇಕ ಇಲಾಖೆಗಳಲ್ಲಿ ಪ್ರತ್ಯೇಕ ಕೋಟಾ ನಿಗದಿಯಾಗಿಲ್ಲವಾದರೂ ಅಲೆಮಾರಿ ಸಮುದಾಯದ ಅರ್ಜಿದಾರರನ್ನು ಆದ್ಯತೆಯ ಮೇರೆಗೆ ನಿಯಮಾನುಸಾರ ಪರಿಗಣಿಸಿ ಹೆಚ್ಚಿನ ಪ್ರಗತಿ ಸಾಧಿಸಬೇಕು’ ಎಂದರು.

ADVERTISEMENT

ಹಾಜರಿದ್ದ ಅಧಿಕಾರೇತರ ಸದಸ್ಯರು ಹಾಗೂ ಸಮುದಾಯದ ಪ್ರಮುಖರ ಸಮಸ್ಯೆಗಳನ್ನು ಆಲಿಸಿ ನಿವೇಶನ ಒದಗಿಸುವ ಕಾರ್ಯವನ್ನು ಕಾನೂನಿನ ಪ್ರಕಾರ ಮಾಡಲಾಗುವುದು ಎಂದು ತಿಳಿಸಿದರು.

‘ಈಗಾಗಲೇ ಪ್ರಸಕ್ತ ಸಾಲಿನಲ್ಲಿ ನಿವೇಶನ ದಾಖಲೆ ಸಲ್ಲಿಸಿದ 105 ಅರ್ಹ ಅಲೆಮಾರಿ ಕುಟುಂಬಗಳಿಗೆ ಮನೆ ಒದಗಿಸಲು ರಾಜೀವ್‌ಗಾಂಧಿ ಹೌಸಿಂಗ್ ಕಾರ್ಪೊರೇಷನ್‌ಗೆ ಜಿಲ್ಲಾಧಿಕಾರಿಗಳಿಂದ ಪ್ರಸ್ತಾವ ಸಲ್ಲಿಸಲಾಗಿದೆ. ಇನ್ನೂ ಅರ್ಹರ ಅರ್ಜಿಗಳು ಬಂದಲ್ಲಿ ಅದನ್ನೂ ಪರಿಗಣಿಸಲಾಗುತ್ತದೆ’ ಎಂದರು.

ಅಲೆಮಾರಿ ಕಾಲೊನಿಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಗರಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಾಮನಗೌಡ ಕನ್ನೊಳ್ಳಿ, ದೇವರಾಜ ಅರಸು ಅಭಿವೃದ್ದಿ ನಿಗಮದ ವ್ಯವಸ್ಥಾಪಕ ಎಸ್.ಎನ್. ಬಾನ್ಸಿ, ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನೀಕೇರಿ, ಸಮಿತಿಯ ನಾಮನಿರ್ದೇಶನ ಸದಸ್ಯರಾದ ಉದ್ದಪ್ಪ ಹೆಳವರ, ರಾಜಶೇಖರ ವಾಕೂಡೆ, ಅಮೃತ ದಪ್ಪಿನವರ ‍ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.