ADVERTISEMENT

ಕಾನನದ ನಡುವೆ ‘ಕಲ್ಯಾಣ’ದ ದೇಗುಲ

ಚಾಲುಕ್ಯರು, ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಿತವಾದ ಸವದಿಯ ಐತಿಹಾಸಿಕ ದೇವಸ್ಥಾನ

ಪರಶುರಾಮ ನಂದೇಶ್ವರ
Published 10 ಸೆಪ್ಟೆಂಬರ್ 2022, 19:30 IST
Last Updated 10 ಸೆಪ್ಟೆಂಬರ್ 2022, 19:30 IST
ಅಥಣಿ ತಾಲ್ಲೂಕು ಸವದಿಯ ತ್ರಿಕುಟೇಶ್ವರ ದೇವಸ್ಥಾನದ ಇಂದಿನ ಸ್ಥಿತಿ   / ಪ್ರಜಾವಾಣಿ ಚಿತ್ರ:ಪರಶುರಾಮ ನಂದೇಶ್ವರ
ಅಥಣಿ ತಾಲ್ಲೂಕು ಸವದಿಯ ತ್ರಿಕುಟೇಶ್ವರ ದೇವಸ್ಥಾನದ ಇಂದಿನ ಸ್ಥಿತಿ   / ಪ್ರಜಾವಾಣಿ ಚಿತ್ರ:ಪರಶುರಾಮ ನಂದೇಶ್ವರ   

ಅಥಣಿ: ತಾಲ್ಲೂಕಿನ ಕೃಷ್ಣಾ ನದಿದಡದಲ್ಲಿರುವಸವದಿಗ್ರಾಮಕ್ಕೆ ಬರಬೇಕು ನೀವು. ಅತ್ಯಂತ ರಮಣೀಯವಾದ, ಐತಿಹಾಸಿಕ ಮಹತ್ವ ಪಡೆದ, ವಾಸ್ತುಶಿಲ್ಪ ಶ್ರೀಮಂತಿಕೆಯಿಂದ ಕೂಡಿದ ದೇವಸ್ಥಾನವಿದೆ ಇಲ್ಲಿ. ಪುರಾತತ್ವ ಇಲಾಖೆಯ ನಿರ್ಲಕ್ಷ್ಯ ಹಾಗೂ ಗ್ರಾಮ ಪಂಚಾಯಿತಿಯ ಧೋರಣೆಯ ಕಾರಣ; ಕಾನನದ ಮಧ್ಯೆ ಈ ಸುಂದರ ಇತಿಹಾಸದ ಪುಟ ಕಮರಿಹೋಗುತ್ತಿದೆ. ಈ ದೇವಸ್ಥಾನದ ಇಂದಿನ ಸ್ಥಿತಿ ಕಂಡು ಮಮ್ಮಲ ಮರುಗದವರೇ ಇಲ್ಲ.

ಹೌದು. ಅಂದಾಜು 10ರಿಂದ 12ನೇ ಶತಮಾನದಲ್ಲಿ ಕಲ್ಯಾಣದ ಚಾಲುಕ್ಯರು ಹಾಗೂ ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಿಸಿದ ಈ ದೇವಸ್ಥಾನ ಶಿಲ್ಪಸೌಂದರ್ಯದ ಖನಿಯಾಗಿದೆ. ಆದರೆ, ದಟ್ಟ ಕಾಡಿನ ಮಧ್ಯೆ ದಾತಕರೇ ಇಲ್ಲದೇ ಅನಾಥ ಪ್ರಜ್ಞೆಯಿಂದ ಬಳಲುತ್ತಿದೆ. ಗರ್ಭಗುಡಿಯಲ್ಲುರುವ ತ್ರಿಕುಟೇಶ್ವರ (ಬಾಲಕೃಷ್ಣ) ಮೂರ್ತಿಯಂತೂ ಚೇತೋಹಾರಿಯಾಗಿದೆ. ಸಪೂರಾದ ದೇಹಾಕೃತಿ, ನೀಳ ಮೂಗು, ಫಲಫಳಿಸುವ ಕಣ್ಣು, ಮುದ್ದಾದ ಗಲ್ಲ, ಆಕರ್ಷಕ ಕಿರೀಟ ಅದ್ಭುತವಾಗಿದೆ. ನೋಡಿದ ತಕ್ಷಣ ‘ಆಹಾ...’ ಎನ್ನುವ ಉದ್ಘಾರ ತೆಗೆಯದಿದ್ದರೆ ಕೇಳಿ.

ಸುತ್ತಲಿನ ಗೋಡೆಗಳ ಮೇಲೂ ಕುದುರೆ, ಆನೆ, ಸೈನ್ಯ, ಒಡ್ಡೋಲಗ, ಶಿಲಾ ಬಾಲಿಕೆಯರ ಕೆತ್ತನೆಗಳು ಹೃದಯಂಗಮವಾಗಿವೆ. ಐಹೊಳೆ, ಪಟ್ಟದಕಲ್ಲುಗಳಲ್ಲಿ ಇರುವಂಥ ಸೂಕ್ಷ್ಮ ಕೆತ್ತನೆಯನ್ನೇ ಇಲ್ಲೂ ಕಾಣಬಹುದು.

ADVERTISEMENT

ಮೂಲ ವಿಗ್ರಹ ನಾಲ್ಕು ಕೈಗಳನ್ನು ಹೊಂದಿರುವ ಬಾಲಕೃಷ್ಣನದ್ದು ಎನ್ನಲಾಗುತ್ತಿದೆ. ಮದರಂಗಿ ಬಣ್ಣದ ಶಿಲೆಯಿಂದ ಕೆತ್ತನೆ ಮಾಡಿದ್ದು ಇನ್ನೂ ವಿಶೇಷ. ಈ ವಿಗ್ರಹ ಕದ್ದೊಯ್ದ ದುರಳರು ನದಿಯಲ್ಲಿ ಎಸೆದಿದ್ದರು. ನೀರಿನ ಮಟ್ಟ ಕಡಿಮೆಯಾದ ಊರಿನ ಪರಿಶಷ್ಟ ಸಮುದಾಯದ ವ್ಯಕ್ತಿಯೊಬ್ಬರು ಕಾಳಜಿಯಿಂದ ಅದನ್ನು ರಕ್ಷಣೆ ಮಾಡಿದರು.

ನದಿ ದಡದಲ್ಲರುವ ಈ ದೇವಾಲಯ ಮೂರು ಮೂರು ಗರ್ಭಗುಡಿ ಹೊಂದಿದ್ದು ವಿಶೇಷ. ಗೋಪುರಗಳು ಸಂಪೂರ್ಣ ನಾಶವಾಗಿವೆ. ಉತ್ತರ ಹಾಗೂ ದಕ್ಷಿಣಕ್ಕೆ ಗರ್ಭ ಗುಡಿಯಲ್ಲಿ ಶಿವಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ. ಇವು ಕೂಡಾ ಅವಸಾನದ ಅಂಚಿಗೆ ತಲುಪಿವೆ.

ನಿಧಿಗಳ್ಳರ ಕೆಲಸ: ಮುಖ್ಯ ಗರ್ಭಗುಡಿಯಲ್ಲಿರುವ ಬಾಲಕೃಷ್ಣನ ಮೂರ್ತಿಯ ಕೆಳಗೆ ನಿಧಿ ಇರಬಹುದು ಎಂದು ಅಗೆಯಲಾಗಿದೆ. ಇದರಿಂದ ಮುದ್ದಾದ ಮೂರ್ತಿ ಕೂಡ ವಿಕಾರಗೊಂಡಿದೆ. ಗರ್ಭಗುಡಿಯಲ್ಲಿ ಎಂಟು ಅಡಿ ಅಗೆದಿದ್ದು ಇನ್ನೂ ಹಾಗೇ ಇದೆ. ಗ್ರಾಮ ಪಂಚಾಯಿತಿಯಾಗಲೀ, ಜನಪ್ರತಿನಿಧಿಗಳಾಗಲೀ, ಪುರಾತತ್ವ ಇಲಾಖೆಯ ಅಧಿಕಾರಿಗಳಾಗಲೀ ಇದನ್ನು ಕಣ್ಣೆತ್ತಿ ನೋಡುವ ಗೋಜಿಗೇ ಹೋಗಿಲ್ಲ!

ಸುದ್ಯ ಕಲ್ಲಿನ ಗೋಡೆಗಳನ್ನು ಮರದ ಕೊಂಬೆಗಳು ಮುತ್ತಿಕೊಂಡಿವೆ. ಎಲ್ಲೆಂದರಲ್ಲಿ ಮುಳ್ಳುಗಂಟಿ ಬೆಳೆದಿದೆ. ಸರಿಸೃಪಗಳು ವಾಸ ಮಾಡುತ್ತಿವೆ. ಲೋಕಪಾಲಕನಾದ ತ್ರಿಕುಟೇಶ್ವರನೇ ಇಲ್ಲಿನ ಅನಾಥ ಪ್ರಜ್ಞೆಯಿಂದ ನರಳುತ್ತಿದ್ದಾನೆ.

***

‘ಮುಜರಾಯಿ ಸಚಿವರೇ, ಗಮನಹರಿಸಿ’

ಮುಜಾರಾಯಿ ಸಚಿವರಾದ ಶಶಿಕಲಾ ಜೊಲ್ಲೆ ಚಿಕ್ಕೋಡಿ ಭಾಗದವರೇ ಆಗಿದ್ದಾರೆ. ಅವರ ಸ್ವಂತ ಕ್ಷೇತ್ರಕ್ಕೆ ಹತ್ತಿರದಲ್ಲೇ ಇರುವ ಸವದಿಯ ಈ ದೇವಸ್ಥಾನ ಗಮನಕ್ಕೆ ಬಂದಿಲ್ಲ. ಧಾರ್ಮಿಕ ಹಾಗೂ ಪರಂಪರಾಗತ ಕುರುಹುಗಳನ್ನು ರಕ್ಷಿಸುವ ಜವಾಬ್ದಾರಿ ಸಚಿವರ ಮೇಲಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಅವರು ಚುರುಕು ಮುಟ್ಟಿಸಬೇಕು ಎನ್ನುವುದು ಗ್ರಾಮದ ಯುವಜನರ ಆಗ್ರಹ.

ಯಲ್ಲಮ್ಮನ ಗುಡ್ಡವೂ ಸೇರಿದಂತೆ ಸುಸಜ್ಜಿತ ದೇವಸ್ಥಾನಗಳ ಅಭಿವೃದ್ಧಿಗಾಗಿಯೇ ₹ 9 ಕೋಟಿ ಬಿಡುಗಡೆ ಮಾಡಿದ್ದಾಗಿ ಸಚಿವರು ಈಚೆಗೆ ಹೇಳಿಕೊಂಡಿದ್ದಾರೆ. ಆದರೆ, ಅವಸಾನದ ಅಂಚಿಗೆ ತಲುಪಿದ ಐತಿಹಾಸಿಕ ಕುರುಹು ಉಳಿಸಿಕೊಳ್ಳಲು ಇದನ್ನೊಮ್ಮೆ ನೋಡಬೇಕು ಎಂಬುದು ಅವರ ಒತ್ತಾಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.