ADVERTISEMENT

ಚಿಕ್ಕೋಡಿ ಕ್ಷೇತ್ರಕ್ಕೆ ಪ್ರಿಯಾಂಕಾ, ಚಿಂಗಳೆ ಹೆಸರು ಸೂಚನೆ

ಬೆಂಗಳೂರಿನಲ್ಲಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2024, 21:32 IST
Last Updated 20 ಫೆಬ್ರುವರಿ 2024, 21:32 IST
ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಂಗಳವಾರ ರಾತ್ರಿ ನಡೆದ ಕಾಂಗ್ರೆಸ್‌ ನಾಯಕರ ಸಭೆಯಲ್ಲಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದರು
ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಂಗಳವಾರ ರಾತ್ರಿ ನಡೆದ ಕಾಂಗ್ರೆಸ್‌ ನಾಯಕರ ಸಭೆಯಲ್ಲಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದರು   

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಿಯಾಂಕಾ ಜಾರಕಿಹೊಳಿ ಅಥವಾ ಲಕ್ಷ್ಮಣರಾವ್‌ ಚಿಂಗಳೆ ಅವರಿಗೆ ಟಿಕೆಟ್‌ ನೀಡುವಂತೆ, ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ನಡೆದ ಜಿಲ್ಲೆಯ ನಾಯಕರ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಬೆಂಗಳೂರಿನ ನಿವಾಸದಲ್ಲಿ ರಾತ್ರಿ ಚಿಕ್ಕೋಡಿ ಲೋಕಸಭೆ ಟಿಕೆಟ್‌ಗೆ ಸಂಬಂಧಿಸಿದ ಎರಡನೇ ಸಭೆ ನಡೆಯಿತು. ಸಭೆಯಲ್ಲಿ ಚರ್ಚೆ ಮಾಡಿದ ಸಚಿವರು, ಶಾಸಕರು ಹಾಗೂ ನಾಯಕರು ಕೊನೆಗೆ ಇಬ್ಬರ ಹೆಸರನ್ನು ಅಂತಿಮಗೊಳಿಸಿದರು. ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಅಥವಾ ಕಾಂಗ್ರೆಸ್‌ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ, ಕುರುಬ ಸಮಾಜದ ಮುಖಂಡ ಲಕ್ಷ್ಮಣರಾವ್‌ ಚಿಂಗಳೆ ಅವರಿಗೆ ಟಿಕೆಟ್‌ ನೀಡುವಂತೆ ಹೈಕಮಾಂಡ್‌ಗೆ ಪಟ್ಟಿ ಕಳುಹಿಸಲು ನಿರ್ಧರಿಸಲಾಯಿತು. ಸ್ವತಃ ಪ್ರಿಯಾಂಕಾ ಹಾಗೂ ಚಿಂಗಳೆ ಕೂಡ ಈ ಸಭೆಯಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.

‘ಚಿಕ್ಕೋಡಿಯಲ್ಲಿ ಗೆಲ್ಲಲೇಬೇಕಾದ ಅಭ್ಯರ್ಥಿಗೆ ಟಿಕೆಟ್‌ ನೀಡಬೇಕಿದೆ. ಅಭ್ಯರ್ಥಿಯು ಎಲ್ಲ ಸಮುದಾಯದವರೂ ಒಪ್ಪುವಂತೆ ಇರಬೇಕು, ಆರ್ಥಿಕವಾಗಿಯೂ ಪ್ರಬಲ ಆಗಿರಬೇಕು. ಶಾಸಕರಿಂದ ವಿರೋಧ ವ್ಯಕ್ತವಾಗುವಂತೆ ಇರಬಾರದೆಂದು ಚರ್ಚೆ ನಡೆಯಿತು. ಅರ್ಜಿ ಸಲ್ಲಿಸಿದ ಆರು ಹೆಸರುಗಳ ಬಗ್ಗೆಯೂ ಚರ್ಚೆ ನಡೆಯಿತು. ಆದರೆ, ಬಹಳಷ್ಟು ಜನ ಪ್ರಿಯಾಂಕಾ ಅಥವಾ ಚಿಂಗಳೆ ಅವರ ಹೆಸರಿಗೇ ಒಪ್ಪಿಗೆ ನೀಡಿದರು’ ಎಂದು ಮೂಲಗಳು ಖಚಿತಪಡಿಸಿವೆ.

ADVERTISEMENT

ಸಭೆಯಲ್ಲಿ ಸಚಿವ ಸತೀಶ ಜಾರಕಿಹೊಳಿ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ–2 ಪ್ರಕಾಶ ಹುಕ್ಕೇರಿ, ಶಾಸಕರಾದ ಲಕ್ಷ್ಮಣ ಸವದಿ, ವಿಶ್ವಾಸ ವೈದ್ಯ, ರಾಜು ಕಾಗೆ, ಮಹಾಂತೇಶ ಕೌಜಲಗಿ, ಅಶೋಕ ಪಟ್ಟಣ, ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳಕರ, ಎಸ್‌ಸಿ, ಎಸ್‌ಟಿ ಘಟಕದ ಅಧ್ಯಕ್ಷ ಅರ್ಜುನ ನಾಯಕವಾಡಿ, ಮುಖಂಡರಾದ ಎಚ್‌.ಬಿ.ಘಾಟಗೆ, ಮಾರುತಿ ಮೋಹಿತೆ, ಪಕ್ಷದ ಬೆಳಗಾವಿ ಹಾಗೂ ಚಿಕ್ಕೋಡಿ ಜಿಲ್ಲಾ ಘಟಕಗಳ ಅಧ್ಯಕ್ಷರು, ಬ್ಲಾಕ್‌ ಅಧ್ಯಕ್ಷರೂ ಭಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.