ADVERTISEMENT

ಮತ್ತೆ ಮರಾಠಿಗರ ಕೈ ಸೇರಿದ ಬೆಳಗಾವಿ ಪಾಲಿಕೆ: ಶೋಭಾ ಸೋಮನಾಚೆ ಮೇಯರ್‌ ಖಚಿತ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 10:02 IST
Last Updated 6 ಫೆಬ್ರುವರಿ 2023, 10:02 IST
ಶೋಭಾ ಸೋಮನಾಚೆ
ಶೋಭಾ ಸೋಮನಾಚೆ   

ಬೆಳಗಾವಿ: ಬಿಜೆಪಿ ಅಭ್ಯರ್ಥಿ, ಮರಾಠಿ ಭಾಷಿಕರಾದ ಶೋಭಾ ಸೋಮನಾಚೆ ಅವರು ಬೆಳಗಾವಿ ಮೇಯರ್‌ ಆಗುವುದು ಬಹುತೇಕ ಖಚಿತವಾಗಿದೆ. ಸೋಮವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಮೇಯರ್‌ ಸ್ಥಾನಕ್ಕೆ ಶೋಭಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದಾರೆ. ಮಧ್ಯಾಹ್ನ 1ಗಂಟೆಗೆ ನಾಮಪತ್ರ ಸ್ವೀಕರಿಸುವ ಅವಧಿ ಮುಗಿದಿದ್ದು ಅವಿರೋಧ ಆಯ್ಕೆ ಘೋಷಣೆ ಮಾತ್ರ ಬಾಕಿ ಇದೆ.

ಶೋಭಾ ಅವರು ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ 57ನೇ ವಾರ್ಡಿನ ಸದಸ್ಯೆ. ಬಿಜೆಪಿಯವರೇ ಆದ ವಾಣಿ ವಿಲಾಸ ಜೋಶಿ ಹಾಗೂ ರೇಷ್ಮಾ ಪಾಟೀಲ ಕೂಡ ಮೇಯರ್‌ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಭಾನುವಾರ ತಡರಾತ್ರಿ ಹಾಗೂ ಸೋಮವಾರ ಬೆಳಿಗ್ಗೆ ಪದೇಪದೇ ಚರ್ಚೆ ನಡೆಸಿದ ಬಿಜೆಪಿ ಮುಖಂಡರು ಕೊನೆಗೆ ಶೋಭಾ ಅವರನ್ನೇ ಅವಿರೋಧವಾಗಿ ಆಯ್ಕೆ ಮಾಡುವ ನಿರ್ಧಾರಕ್ಕೆ ಬಂದರು. ಹೀಗಾಗಿ, ಉಳಿದಿಬ್ಬರು ಸದಸ್ಯರು ಉಮೇದುವಾರಿಕೆ ಕೂಡ ಸಲ್ಲಿಸದಂತೆ ನೋಡಿಕೊಂಡರು.

ರೇಷ್ಮಾ ಪಾಟೀಲ ಉಪಮೇಯರ್‌ ಸಾಧ್ಯತೆ:

ADVERTISEMENT

ಉಪಮೇಯರ್‌ ಸ್ಥಾನವನ್ನೂ ಬಿಜೆಪಿ ಅಭ್ಯರ್ಥಿ, ಮರಾಠಿಗರಾದ ರೇಷ್ಮಾ ಪಾಟೀಲ ಪಡೆಯುವ ಸಾಧ್ಯತೆ ಇದೆ. 32ನೇ ವಾರ್ಡಿನ ಸದಸ್ಯೆ ರೇಷ್ಮಾ ಪಾಟೀಲ ಮೇಯರ್ ಸ್ಥಾನದ ಆಕಾಂಕ್ಷಿ ಕೂಡ ಆಗಿದ್ದರು. ಆದರೆ, ಬಿಜೆಪಿ ಮುಖಂಡರ ಸೂಚನೆ ಮೇರೆಗೆ ಉಪಮೇಯರ್‌ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದರು.

ಎಂಇಎಸ್‌ ಬೆಂಬಲದಿಂದ ಆಯ್ಕೆಯಾದ ವೈಶಾಲಿ ಭಾತಖಾಂಡೆ ಕೂಡ ಉಪಮೇಯರ್‌ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಸೋಮವಾರ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ವಾಪಸ್‌ ಪಡೆಯಲು ಕಾಲಾವಕಾಶವಿದೆ.

58 ವಾರ್ಡ್‌ಗಳಲ್ಲಿ 35 ಸ್ಥಾನಗಳೊಂದಿಗೆ ಬಿಜೆಪಿ ಬಹುಮತ ಗಳಿಸಿದೆ. 12 ಪಕ್ಷೇತರರು, 10 ಕಾಂಗ್ರೆಸ್, 1 ಎಐಎಂಐಎಂ ಸದಸ್ಯರು ಇದ್ದಾರೆ. 12 ಪಕ್ಷೇತರರಲ್ಲಿ ನಾಲ್ವರು ಎಂಇಎಸ್‌ ಬೆಂಬಲಿತರು. ಇವರಲ್ಲಿ ಇಬ್ಬರು ಈಗಾಗಲೇ ಬಿಜೆಪಿ ಜತೆಗೆ ಹೋಗಿದ್ದಾರೆ. ಇಬ್ಬರು ಮಾತ್ರ ಎಂಇಎಸ್‌ನಲ್ಲಿದ್ದು ಅವರ ಪೈಕಿ ವೈಶಾಲಿ ಭಾತಖಾಂಡೆ ಕೂಡ ಇಬ್ಬರು.

ಪಕ್ಷೇತರ, ಕಾಂಗ್ರೆಸ್‌, ಎಂಐಎಂಐಎಂ, ಎಂಇಎಸ್‌ ಎಲ್ಲರೂ ಸೇರಿದರೂ ಸದಸ್ಯರ ಸಂಖ್ಯೆ 23 ಆಗುತ್ತದೆ. ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ, ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೇರಿ 26 ಮತಗಳು ವಿರೋಧಿ ಕೂಟದಲ್ಲಿವೆ. ಆದರೆ, ಬಿಜೆಪಿಯಲ್ಲಿ 35 ಸದಸ್ಯರು, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಸಂಸದರಾದ ಮಂಗಲಾ ಅಂಗಡಿ, ಅಣ್ಣಾಸಾಹೇಬ ಜೊಲ್ಲೆ ಸೇರಿ 39 ಮತಗಳಿವೆ. ಹೀಗಾಗಿ, ರೇಷ್ಮಾ ಪಾಟೀಲ ಗೆಲ್ಲುವುದು ನಿಚ್ಛಳವಾಗಿದೆ. ಮೇಲಾಗಿ, ಸೋಲು ಖಚಿತವಾಗಿದ್ದರಿಂದ ವೈಶಾಲಿ ಕೂಡ ತಮ್ಮ ತಮ್ಮ ಉಮೇದುವಾರಿಕೆ ಹಿಂತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ, ಉಪಮೇಯರ್‌ ಆಯ್ಕೆ ಕೂಡ ಅವಿರೋಧ ನಡೆಯುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.