ADVERTISEMENT

ಬೆಳಗಾವಿ | ಭ್ರಷ್ಟಾಚಾರ ಮುಕ್ತ ಜಿಲ್ಲೆಗಾಗಿ ಕಾರ್ಯನಿರ್ವಹಿಸಿ: ನ್ಯಾ.ಪಾಟೀಲ

ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 14:02 IST
Last Updated 6 ಆಗಸ್ಟ್ 2025, 14:02 IST
<div class="paragraphs"><p>ಬೆಳಗಾವಿಯ ಸುವರ್ಣ ವಿಧಾನಸೌಧದ ಸೆಂಟ್ರಲ್‌ ಹಾಲ್‌ನಲ್ಲಿ ಬುಧವಾರ ನಡೆದ ಅಧಿಕಾರಿಗಳ ಸಭೆಯನ್ನು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಉದ್ಘಾಟಿಸಿದರು</p></div>

ಬೆಳಗಾವಿಯ ಸುವರ್ಣ ವಿಧಾನಸೌಧದ ಸೆಂಟ್ರಲ್‌ ಹಾಲ್‌ನಲ್ಲಿ ಬುಧವಾರ ನಡೆದ ಅಧಿಕಾರಿಗಳ ಸಭೆಯನ್ನು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಉದ್ಘಾಟಿಸಿದರು

   

ಬೆಳಗಾವಿ: ‘ಭೌಗೋಳಿಕವಾಗಿ ದೊಡ್ಡದಾಗಿರುವ ಬೆಳಗಾವಿ ಜಿಲ್ಲೆಯನ್ನು ಭ್ರಷ್ಟಾಚಾರ ಮುಕ್ತಗೊಳಿಸುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಸೂಚಿಸಿದರು.

ಇಲ್ಲಿನ ಸುವರ್ಣ ವಿಧಾನಸೌಧದ ಸೆಂಟ್ರಲ್ ಹಾಲ್‌ನಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಬುಧವಾರ ಆಯೋಜಿಸಿದ್ದ ಲೋಕಾಯುಕ್ತ ಪ್ರಕರಣಗಳ ವಿಲೇವಾರಿ ಕುರಿತ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ADVERTISEMENT

‘ಜನರ ಕಲ್ಯಾಣಕ್ಕಾಗಿ ಸರ್ಕಾರ ಅನೇಕ ಯೋಜನೆ ರೂಪಿಸಿದೆ. ಅವುಗಳ ಅನುಷ್ಠಾನಕ್ಕೆ ಸಾಕಷ್ಟು ಅನುದಾನ ಒದಗಿಸುತ್ತಿದೆ. ಈ ಯೋಜನೆಗಳನ್ನು ಪ್ರಾಮಾಣಿಕವಾಗಿ ಅರ್ಹ ಫಲಾನುಭವಿಗೆ ತಲುಪಿಸುವುದು ಎಲ್ಲ ಅಧಿಕಾರಿಗಳ ಜವಾಬ್ದಾರಿ. ಒಂದು ವೇಳೆ ಯೋಜನೆ ತಲುಪಿಸಲು ಅಧಿಕಾರಿಗಳು ಅಥವಾ ಸಿಬ್ಬಂದಿ ಭ್ರಷ್ಟಾಚಾರ ನಡೆಸಿದರೆ, ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ಕೊಟ್ಟರು.

‘ಒಬ್ಬ ವ್ಯಕ್ತಿ ಒಂದೇ ಕೆಲಸಕ್ಕಾಗಿ ಪದೇಪದೇ ಕಚೇರಿಗೆ ಆಗಮಿಸುತ್ತಾನೆ ಎಂದರೆ, ಕಚೇರಿಯಲ್ಲಿ ಸುಗಮವಾಗಿ ಕೆಲಸ ನಡೆಯುತ್ತಿಲ್ಲ ಎಂದರ್ಥ. ಇಂಥ ಪ್ರಸಂಗ ತಲೆದೋರಬಾರದು. ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸದರೆ ಮಾತ್ರ ಜನಸೇವಕರಾಗುತ್ತೀರಿ. ‘ಸರ್ಕಾರಿ ಕೆಲಸ ದೇವರ ಕೆಲಸ’ ಎಂಬ ಸಂದೇಶಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ’ ಎಂದರು.

‘ಜಿಲ್ಲೆಯಲ್ಲಿ ಇರುವ ಕೆರೆಗಳ ರಕ್ಷಣೆ ಮತ್ತು ಸೂಕ್ತ ನಿರ್ವಹಣೆ ಅಧಿಕಾರಿಗಳ ಕರ್ತವ್ಯ. ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದ ಕುರಿತು ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿವೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು’ ಎಂದು ಹೇಳಿದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ‘ಜಿಲ್ಲೆಯ ಕೆರೆಗಳ ರಕ್ಷಣೆ ಹಾಗೂ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ. ಕೆರೆಗಳ ಒತ್ತುವರಿ ತೆರವು ಮಾಡುತ್ತಿದ್ದೇವೆ. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಎಲ್ಲರೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತೇವೆ’ ಎಂದರು.

ನಗರ ಪೊಲೀಸ್ ಕಮಿಷನರ್‌ ಭೂಷಣ ಬೊರಸೆ, ‘ಮಾದಕವಸ್ತು ಮಾರಾಟದ ಮೇಲೆ ನಿಗಾ ವಹಿಸಿದ್ದೇವೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದೇವೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌ ಶಿಂಧೆ, ‘ಜಿಲ್ಲೆಯ ಶಾಲೆಗಳಲ್ಲಿ ಪಾಲಕರು ಮತ್ತು ಶಿಕ್ಷಕರ ಸಭೆ ಆಯೋಜಿಸುತ್ತಿದ್ದೇವೆ. ಪ್ರೌಢಶಾಲೆ ಹಂತದಲ್ಲಿ ಪ್ರತಿಭಾನ್ವೇಷಣೆ ಕಾರ್ಯಕ್ರಮ ಆಯೋಜಿಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದೇವೆ’ ಎಂದರು.

ಪ್ರೊಬೇಷನರಿ ಐಎಎಸ್ ಅಧಿಕಾರಿ ಅಭಿನವ ಜೈನ, ಲೋಕಾಯುಕ್ತ ಕಾರ್ಯದರ್ಶಿ ಶ್ರೀನಾಥ, ಹೆಚ್ಚುವರಿ ನಿಬಂಧಕರಾದ ಪ್ರಕಾಶ ನಾಡಿಗೇರ, ಸಿ.ರಾಜಶೇಖರ, ಶುಭವೀರ ಜೈನ, ಲೋಕಾಯುಕ್ತ ಬೆಳಗಾವಿ ಎಸ್‌ಪಿ ಹನುಮಂತರಾಯ ಇದ್ದರು.

ಸಾರ್ವಜನಿಕ ಸೇವೆಯಲ್ಲಿ ಇರುವ ಪ್ರತಿಯೊಬ್ಬರೂ ಲೋಕಾಯುಕ್ತ ಕಾಯ್ದೆ ಬಗ್ಗೆ ತಿಳಿದಿರಬೇಕು. ಸರ್ಕಾರಿ ಸಿಬ್ಬಂದಿ ಯಾವ ತಪ್ಪು ಮಾಡಿದರೂ ಈ ಕಾಯ್ದೆಯಡಿ ಶಿಕ್ಷೆ ಖಚಿತ
ಬಿ.ಎಸ್.ಪಾಟೀಲ, ಲೋಕಾಯುಕ್ತ ನ್ಯಾಯಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.