ADVERTISEMENT

ವೀರಾಪುರದಲ್ಲಿ ಜಿಲ್ಲಾಧಿಕಾರಿ ವಾಸ್ತವ್ಯ

ತಾಲ್ಲೂಕುಗಳಲ್ಲಿ ತಹಶೀಲ್ದಾರರ ಭೇಟಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2021, 13:03 IST
Last Updated 15 ಅಕ್ಟೋಬರ್ 2021, 13:03 IST

ಬೆಳಗಾವಿ: ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಶನಿವಾರ (ಅ.16) ಕಿತ್ತೂರು ತಾಲ್ಲೂಕಿನ ವೀರಾಪುರ ಗ್ರಾಮಕ್ಕೆ ಭೇಟಿ ನೀಡಲಿದ್ದು, ಜನರ ಅಹವಾಲುಗಳನ್ನು ಆಲಿಸಿ‌ ರಾತ್ರಿ ಅಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ.

ಗ್ರಾಮ ಭೇಟಿ ಕಾಲದಲ್ಲಿ ರೈತರಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ಸೇವೆಗಳ ಕುರಿತು ಪರಿಶೀಲಿಸಿ, ಸಮಸ್ಯೆಗಳಿದ್ದರೆ ಪರಿಹಾರ ಕ್ರಮ ವಹಿಸಲಿದ್ದಾರೆ. ಅಂದು ಬೆಳಿಗ್ಗೆ 8ಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಬಸ್ ಮೂಲಕ ವೀರಾಪುರ ಗ್ರಾಮಕ್ಕೆ ತೆರಳಲಿದ್ದಾರೆ. ಬೆಳಿಗ್ಗೆ 10ಕ್ಕೆ ಗ್ರಾಮಸ್ಥರ ಅಹವಾಲುಗಳನ್ನು ಸ್ವೀಕರಿಸಿ, ಚರ್ಚೆ ನಡೆಸಲಿದ್ದಾರೆ. ಕಂದಾಯ, ಭೂಮಾಪನ ಹಾಗೂ ಭೂ ದಾಖಲೆಗಳ ಇಲಾಖೆ, ಕೃಷಿ, ತೋಟಗಾರಿಕೆ, ಆಹಾರ, ಲೋಕೋಪಯೋಗಿ, ಹೆಸ್ಕಾಂ, ಪಶುಪಾಲನೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿರುವರು.

ಸರ್ಕಾರದ ನಿರ್ದೇಶನದಂತೆ ತಿಂಗಳ 3ನೇ ಶನಿವಾರ ಜಿಲ್ಲಾಧಿಕಾರಿ ಒಂದು ಗ್ರಾಮಕ್ಕೆ ಭೇಟಿ ನೀಡಿ ಜನರ‌ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಲಿದ್ದಾರೆ. ಅದೇ ರೀತಿ ಆಯಾ ತಾಲ್ಲೂಕಿನ ತಹಶೀಲ್ದಾರರು ಅದೇ ದಿನ ತಮ್ಮ ತಾಲ್ಲೂಕಿನ ವ್ಯಾಪ್ತಿಯ ಒಂದು ಗ್ರಾಮಕ್ಕೆ ಭೇಟಿ ನೀಡಿ ಜನರ ಅಹವಾಲುಗಳನ್ನು ಪರಿಹರಿಸಲಿದ್ದಾರೆ. ಜಿಲ್ಲಾಧಿಕಾರಿ ಭೇಟಿ ನೀಡಲಿರುವ ಕಿತ್ತೂರು ಹೊರತುಪಡಿಸಿ ಜಿಲ್ಲೆಯ ಉಳಿದ 13 ತಾಲ್ಲೂಕುಗಳ ತಹಶೀಲ್ದಾರ ಶನಿವಾರ ಆಯಾ ತಾಲ್ಲೂಕಿನ ಒಂದು‌ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ.

ADVERTISEMENT

ಬೆಳಗಾವಿ ತಹಶೀಲ್ದಾರ್‌ ಸೋನಟ್ಟಿ, ಖಾನಾಪುರ–ಯಡೋಗಾ, ಹುಕ್ಕೇರಿ–ಮೊದಗೆ, ಬೈಲಹೊಂಗಲ– ವಕ್ಕುಂದ, ರಾಮದುರ್ಗ– ಮುದಕವಿ, ಸವದತ್ತಿ–ಶಿರಸಂಗಿ, ಗೋಕಾಕ–ರಡೇರಹಟ್ಟಿ, ಮೂಡಲಗಿ–ಸಂಗನಕೇರಿ, ಚಿಕ್ಕೋಡಿ– ಶಮನೇವಾಡಿ, ಅಥಣಿ– ಕಕಮರಿ, ರಾಯಬಾಗ– ಜೋಡಟ್ಟಿ, ನಿಪ್ಪಾಣಿ–ಶೇಂಡೂರ ಹಾಗೂ ಕಾಗವಾಡ ತಹಶೀಲ್ದಾರ್‌ ಮಂಗಸೂಳಿ ಗ್ರಾಮದಲ್ಲಿ ಜನರ ಅಹವಾಲುಗಳನ್ನು ಆಲಿಸಿ, ಅವುಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.