ಬೆಳಗಾವಿ: ಇಲ್ಲಿನ ಡಿಸಿಸಿ ಬ್ಯಾಂಕ್‌ನಲ್ಲಿ 16 ನಿರ್ದೇಶಕರ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ 72 ನಾಮಪತ್ರ ಸಲ್ಲಿಕೆಯಾಗಿವೆ. ತಾಲ್ಲೂಕುಮಟ್ಟದ 15 ಕ್ಷೇತ್ರಗಳಿಗೆ 66 ಹಾಗೂ ಸಹಕಾರ ಸಂಸ್ಥೆಗಳ ವ್ಯಾಪ್ತಿಗೆ ಬರುವ ಇತರೆ ಕ್ಷೇತ್ರದಿಂದ ಸ್ಪರ್ಧಿಸಲು ಅಭ್ಯರ್ಥಿಗಳಿಂದ 6 ನಾಮಪತ್ರ ಸಲ್ಲಿಕೆಯಾಗಿವೆ.
ಗೋಕಾಕ, ಯರಗಟ್ಟಿ, ಸವದತ್ತಿ ಮತ್ತು ಚಿಕ್ಕೋಡಿ ಕ್ಷೇತ್ರಗಳ ನಿರ್ದೇಶಕ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿವೆ. ಹಾಗಾಗಿ ಶಾಸಕರಾದ ವಿಶ್ವಾಸ ವೈದ್ಯ, ಗಣೇಶ ಹುಕ್ಕೇರಿ, ಮುಖಂಡರಾದ ವಿರೂಪಾಕ್ಷಿ ಮಾಮನಿ ಮತ್ತು ಅಮರನಾಥ ಜಾರಕಿಹೊಳಿ ಅವಿರೋಧ ಆಯ್ಕೆ ಬಹುತೇಕ ಖಚಿತವಾಗಿದೆ. ಅವರ ಬೆಂಬಲಿಗರು ಶನಿವಾರವೇ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.
ಕೊನೇ ದಿನ ನಾಮಪತ್ರ ಭರಾಟೆ: ಅ.19ರಂದು ಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅ.11ರಂದು ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾಗಿತ್ತು. ಹಾಗಾಗಿ ಶನಿವಾರ ವಿವಿಧ ಅಭ್ಯರ್ಥಿಗಳಿಂದ ನಾಮಪತ್ರಗಳ ಸಲ್ಲಿಕೆ ಭರಾಟೆ ಕಂಡುಬಂತು. ಬ್ಯಾಂಕಿನ ಮುಂಭಾಗದಲ್ಲಿ ವಿವಿಧ ಅಭ್ಯರ್ಥಿಗಳ ಬೆಂಬಲಿಗರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು.
‘ವಿವಿಧ ಕ್ಷೇತ್ರಗಳಲ್ಲಿ ಯಾರದೋ ಸೂಚನೆ ಮೇರೆಗೆ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು ನಾಮಪತ್ರ ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಕೋರಿ, ಅವರ ಮನವೊಲಿಸಲು ಎಲ್ಲ ಪ್ರಯತ್ನ ಮಾಡುತ್ತೇವೆ’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಮ್ಮ ಪೆನಲ್‌ನ ಆರು ಅಭ್ಯರ್ಥಿಗಳು ಶನಿವಾರ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರ ಜತೆಗೆ ಅವರು ಮಾತನಾಡಿದರು.
‘ಮೂಡಲಗಿ ಕ್ಷೇತ್ರದಿಂದ ನೀಲಕಂಠ ಕಪ್ಪಲಗುದ್ದಿ, ರಾಮದುರ್ಗದಿಂದ ಶ್ರೀಕಾಂತ ಢವಣ, ಹುಕ್ಕೇರಿಯಿಂದ ರಾಜೇಂದ್ರ ಪಾಟೀಲ, ಗೋಕಾಕದಿಂದ ಅಮರನಾಥ ಜಾರಕಿಹೊಳಿ, ಬೆಳಗಾವಿಯಿಂದ ರಾಹುಲ್ ಜಾರಕಿಹೊಳಿ ಮತ್ತು ಇತರೆ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ನಾಮಪತ್ರ ಸಲ್ಲಿಸಿದ್ದಾರೆ’ ಎಂದರು.
‘ಈಗಾಗಲೇ ನಮ್ಮ ಪೆನಲ್‌ನಿಂದ ಏಳು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಇಂದು ಮತ್ತೆ ಆರು ಮಂದಿ ಸಲ್ಲಿಸಿದ್ದಾರೆ. 16 ನಿರ್ದೇಶಕರ ಸ್ಥಾನಗಳ ಪೈಕಿ 13 ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇವೆ. ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ’ ಎಂದು ಪುನರುಚ್ಚರಿಸಿದರು.
‘ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಅವಿರೋಧವಾಗಿ ಗೆಲ್ಲುವ ಸಾಧ್ಯತೆ ಇತ್ತು. ಆದರೆ, ತಾವು ಗೆಲ್ಲಲು ಸಾಧ್ಯವಿಲ್ಲ ಎಂಬ ಖಾತ್ರಿ ಇದ್ದರೂ, ಹಲವು ಅಭ್ಯರ್ಥಿಗಳು ಯಾರದೋ ಸೂಚನೆ ಮೇರೆಗೆ ನಾಮಪತ್ರ ಸಲ್ಲಿಸಿದ್ದಾರೆ. ಅಂಥವರ ಮನವೊಲಿಕೆಗೆ ಸಮಯವಿದೆ’ ಎಂದರು.
‘ನಿಪ್ಪಾಣಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮುಖಂಡ ಉತ್ತಮ ಪಾಟೀಲ ಅವರಿಗೆ ಸಚಿವ ಸತೀಶ ಜಾರಕಿಹೊಳಿ ಹೇಳಿಲ್ಲ. ಆದರೆ, ಅವರು ಏಕೆ ಸತೀಶ ಜಾರಕಿಹೊಳಿ ಹೆಸರು ಹೇಳಿದ್ದಾರೆ ಗೊತ್ತಿಲ್ಲ. ಸತೀಶ ಅವರು ಮಾಜಿ ಸಚಿವ ವೀರಕುಮಾರ ಪಾಟೀಲ ಮೂಲಕ ಸ್ಪರ್ಧೆ ತಡೆಯಲು ಯತ್ನಿಸಿದರು. ಆದರೆ, ಯಾರ ಮಾತು ಕೇಳದೆ ಉತ್ತಮ ಸ್ಪರ್ಧಿಸಿದ್ದಾರೆ. ಅವರ ಮನವೊಲಿಕೆಗೆ ಪ್ರಯತ್ನಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಚನ್ನಮ್ಮನ ಕಿತ್ತೂರು ಕ್ಷೇತ್ರದಿಂದ ವಿಕ್ರಮ ಇನಾಮದಾರ ಅವರೇ ನಮ್ಮ ಪೆನಲ್‌ನ ಅಧಿಕೃತ ಅಭ್ಯರ್ಥಿ. ನಮಗೆ ಎದುರಾಳಿಯಾಗಿ ತಮ್ಮ ಸಹೋದರ ನಾನಾಸಾಹೇಬ ಅವರನ್ನು ಶಾಸಕ ಬಾಬಾಸಾಹೇಬ ಪಾಟೀಲ ಕಣಕ್ಕಿಳಿಸಿದ್ದಾರೆ. ಸತೀಶ ಜಾರಕಿಹೊಳಿ ಮತ್ತು ಬಾಬಾಸಾಹೇಬ ಮಧ್ಯೆ ಏನು ಚರ್ಚೆ ನಡೆದಿದೆ ಎಂಬ ಮಾಹಿತಿ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಾರಕಿಹೊಳಿ ಕುಟುಂಬದವರು ಡಿಸಿಸಿ ಬ್ಯಾಂಕಿನ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಿರಬಹುದು. ಆದರೆ ಲಿಂಗಾಯತ ಸಮುದಾಯದವರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುವುದುಬಾಲಚಂದ್ರ ಜಾರಕಿಹೊಳಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.