ADVERTISEMENT

ಬಿಡಿಸಿಸಿ ಚುನಾವಣೆ: ಅತ್ತ ‘ಪಳಗಿದ ಹುಲಿ’ ಇತ್ತ ‘ಶ್ರೀಮಂತ’ ಕಲಿ

ಸಂತೋಷ ಈ.ಚಿನಗುಡಿ
Published 28 ಸೆಪ್ಟೆಂಬರ್ 2025, 2:45 IST
Last Updated 28 ಸೆಪ್ಟೆಂಬರ್ 2025, 2:45 IST
ಭರಮಗೌಡ (ರಾಜು) ಕಾಗೆ
ಭರಮಗೌಡ (ರಾಜು) ಕಾಗೆ   

ಕಾಗವಾಡ: ಒಂದೆಡೆ, ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಚುನಾವಣೆಗೆ ತಾವು ಸ್ಪರ್ಧಿಸುವುದು ಶತಸಿದ್ಧ ಎಂದು ಶಾಸಕ ಭರಮಗೌಡ (ರಾಜು) ಕಾಗೆ ಘಂಟಾಘೋಷವಾಗಿ ಹೇಳಿದ್ದಾರೆ. ಇನ್ನೊಂದೆಡೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ಅವರನ್ನು ಏಕಾಏಕಿ ಬಿಡುಗಡೆ ಮಾಡಲಾಗಿದೆ. ಈ ಎರಡೂ ಘಟನಾವಳಿಗಳ ಮಧ್ಯೆ ಸುಳಿದಾಡುತ್ತಿರುವ ‘ಹೊಗೆ’ ಮತ್ತು ‘ಹಗೆ’ ಬಿಡಿಸಿಸಿ ಚುನಾವಣೆಗೆ ಬಿಸಿ ಮುಟ್ಟಿಸಿದೆ ಎನ್ನುತ್ತಾರೆ ಮತದಾರರು.

ಬರೋಬ್ಬರಿ ಐದು ಬಾರಿ ಶಾಸಕರಾದ ಭರಮಗೌಡ ಜಿಲ್ಲೆಯ ‘ಪಳಗಿದ ಹುಲಿ’ ಎಂದೇ ಹೆಸರುವಾಸಿ. ಅಂಥವರು ಕೂಡ ಈಗ ಬಿಡಿಸಿಸಿ ನಿರ್ದೇಶಕ ಸ್ಥಾನ ಬಯಸಿದ್ದಾರೆ ಎಂಬುದು ಈ ಚುನಾವಣೆಯ ಮಹತ್ವ ಎತ್ತಿ ತೋರಿಸಿದೆ. ಈಚೆಗಷ್ಟೇ ಬೆಂಬಲಿಗರ ಗೌಪ್ಯ ಸಭೆ ಮಾಡಿದ ಅವರು ಭರದ ತಯಾರಿ ನಡೆಸಿದ್ದಾರೆ. ‘ಜೆ’ ಕಂಪನಿಗೆ ಇದು ನುಂಗಲಾರದ ತುತ್ತಾಗಿದೆ.

ಕಾಗೆ ಅವರ ವಿರುದ್ಧ ಮಾಜಿ ಶಾಸಕ ಶ್ರೀಮಂತ ಪಾಟೀಲ ನಿಲ್ಲುತ್ತಾರೆ ಎಂಬ ಗುಮಾನಿ ಇದೆಯಾದರೂ ಅವರ ಪುತ್ರ ಶ್ರೀನಿವಾಸ ಹೆಸರನ್ನು ಅಂತಿಮ ಮಾಡಲಾಗಿದೆ ಎಂದು ಪೆನಲ್‌ ಮೂಲಗಳು ಹೇಳಿವೆ.

ADVERTISEMENT

ಲಕ್ಷ್ಮಣ ಸವದಿ ಅವರದ್ದೇ ಪಾರುಪಥ್ಯ: ಜಿಲ್ಲೆಯ ಪ್ರಭಾವಿ ನಾಯಕರಲ್ಲಿ ಒಬ್ಬರಾದ ಲಕ್ಷ್ಮಣ ಸವದಿ ಹಾಗೂ ರಾಜು ಕಾಗೆ ಅವರದು ‘ಲವ–ಕುಶ’ನಂಥ ಜೋಡಿ ಎಂಬುದು ಜನಜನಿತ. ಈ ಇಬ್ಬರೂ ಜತೆಯಾಗಿಯೇ ರಾಜಕೀಯದಲ್ಲಿ ಹೆಜ್ಜೆ ಹಾಕಿ, ಅಧಿಕಾರ ಅನುಭವಿಸಿದ್ದಾರೆ. ಸವದಿ ಅವರು ಅಥಣಿ ತಾಲ್ಲೂಕಿನ ಪಿಕೆಪಿಎಸ್‌ಗಳ ಮೇಲೆ ಏಷ್ಟು ಹಿಡಿತ ಹೊಂದಿದ್ದಾರೋ ಅಷ್ಟೇ ಹಿಡಿತವನ್ನು ಕಾಗವಾಡ ತಾಲ್ಲೂಕಿನ ಮೇಲೂ ಸಾಧಿಸಿದ್ದಾರೆ.

ಕಾಗೆ ಬಲ ಏನು?:

ರಾಜು ಕಾಗೆ ಅವರು ಕ್ಷೇತ್ರದ ಜನರೊಂದಿಗೆ, ರೈತರೊಂದಿಗೆ ಇದ್ದು ಕೆಲಸ ಮಾಡುವವರು. ಕ್ಷೇತ್ರದ ಏತನೀರಾವರಿಗಾಗಿ ಅವರು ಮುಖ್ಯಮಂತ್ರಿ ಅವರನ್ನೂ, ತಮ್ಮದೇ ಸರ್ಕಾರವನ್ನೂ, ಹೈಕಮಾಂಡನ್ನೂ ಎದುರು ಹಾಕಿಕೊಳ್ಳುವಷ್ಟು ನಿರ್ಭಿಡೆ ವ್ಯಕ್ತಿತ್ವದವರು. ಬಾಣ ಬಿಟ್ಟಂತೆ ಮಾತನಾಡುವ ಶೈಲಿಯಿಂದ ಜನರಿಗೆ ಹತ್ತಿರ.

ಕಾಗೆ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸೇರಿದವರು. ಕಾಗವಾಡ ತಾಲ್ಲೂಕಿನ ಪಿಕೆಪಿಎಸ್‌ಗಳ ಪೈಕಿ ಆರೇಳು ಅಧ್ಯಕ್ಷರು ಅವರನ ಬಂಧುಗಳು– ಸಮಾಜದವರಿದ್ದಾರೆ. ಜತೆಗೆ, ಪ್ರಭಾವಿ ಗೆಳೆಯ ಲಕ್ಷ್ಮಣ ಸವದಿ ಯಾವುದೇ ಕಾರಣಕ್ಕೂ ಕಾಗೆ ಅವರನ್ನು ಬಿಟ್ಟುಕೊಡುವುದಿಲ್ಲ ಎನ್ನುವುದು ಹಿರಿಯರ ಮಾತು.

ಶ್ರೀನಿವಾಸ ಬಲ ಏನು?:

ಆಗರ್ಭ ಶ್ರೀಮಂತರೂ ಬೃಹತ್‌ ಉದ್ಯಮಿಯೂ ಆದ ಮಾಜಿ ಶಾಸಕ ಶ್ರೀಮಂತ ಪಾಟೀಲ ಅವರ ಪುತ್ರ ಶ್ರೀನಿವಾಸ ಅವರು ಕಾಗೆ ವಿರುದ್ಧ ಸೆಣಸುವುದು ಖಾತ್ರಿಯಾಗಿದೆ. ಮರಾಠಾ ಸಮುದಾಯದವರಾದ ಅವರು, ತಂದೆಯ ವರ್ಚಸ್ಸಿನ ಜತೆಗೆ ತಮ್ಮದೇ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಆಗಿದ್ದೂ ಅವರ ಬಲ. ಎರಡನ್ನೂ ಒರೆಗೆ ಹಚ್ಚಿದ್ದಾರೆ.

ಕಾಗೆ ಅವರ ಬೆನ್ನಿಗೆ ಲಕ್ಷ್ಮಣ ಸವದಿ ಇರುವಂತೆ, ಶ್ರೀನಿವಾಸ ಬೆನ್ನಿಗೆ ಶಾಸಕ ರಮೇಶ ಜಾರಕಿಹೊಳಿ ನಿಂತಿದ್ದಾರೆ. ವಿಧಾನಸಭೆ ಚುನಾವಣೆ ವೇಳೆ ಲಕ್ಷ್ಮಣ ಸವದಿ ಹಾಗೂ ರಮೇಶ ಜಾರಕಿಹೊಳಿ ಮಧ್ಯೆ ಉಲ್ಬಣಿಸಿದ ಘರ್ಷಣೆಯೇ ಮತ್ತೂ ಮರಳಿದರೆ ಅಚ್ಚರಿಯೇನಿಲ್ಲ ಎನ್ನುವುದು ಸದ್ಯದ ಗುಮಾನಿ.

ಕಾಗವಾಡದಲ್ಲಿ ಒಂದು ಸಭೆ ನಡೆಸಿದ ರಮೇಶ ಜಾರಕಿಹೊಳಿ ಏಕಾಏಕಿ ಮಾಯವಾದರು. ‘ಜೆ’ ಕಂಪನಿಯ ಸಹೋದರರು ಅವರಿಗೆ ದೂರ ಇರುವಂತೆ ಸಲಹೆ ನೀಡಿದ್ದಾರೆ. ಬೇರು ಮಟ್ಟದಲ್ಲಿ ತಮಗೆ ಬೇಕಾದ ಸಿದ್ಧತೆ ನಡೆಸಿದ್ದಾರೆ. ತಿಳಿ ಮಜ್ಜಿಗೆ ಕಲಕುವುದು ಬೇಡ ಎಂಬುದು ಇದರ ಹಿಂದಿನ ಗುಟ್ಟು ಎಂಬುದು ಪಿಕೆಪಿಎಸ್‌ಗಳ ಪ್ರತಿನಿಧಿಗಳು ಹೇಳುವ ಮಾತು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ರಾಜು ಕಾಗೆ; ಇಬ್ಬರೂ ಕಾಂಗ್ರೆಸ್‌ನಲ್ಲೇ ಬೆಳೆದವರು. ಆದರೂ ಪರಸ್ಪರ ರೈಲು ಹಳಿಗಳಂತೆ ಎಂದೂ ಸಂದಿಸದೇ ಸಾಗಿದ್ದಾರೆ. ಸದ್ಯ ಚುನಾವಣೆ ಕಾವು ಏರಿಲ್ಲ. ಆದರೆ, ಒಳಗೊಳಗೆ ‘ಗುಮ್ಮ’ ಇದ್ದೇ ಇದೆ ಎನ್ನುತ್ತಾರೆ ಸಹಕಾರ ಧುರೀಣರು.

ಇದೇ ಮೊದಲ ಬಾರಿಗೆ ಸ್ಥಾನ

ನೂರು ವರ್ಷಗಳವರೆಗೆ ಅಥಣಿ– ಕಾಗವಾಡ ಎರಡೂ ತಾಲ್ಲೂಕು ಸೇರಿ ಬಿಡಿಸಿಸಿಗೆ ಒಂದೇ ನಿರ್ದೇಶಕ ಸ್ಥಾನವಿತ್ತು. ಇದೇ ಮೊದಲ ಬಾರಿಗೆ ಕಾಗವಾಡಕ್ಕೆ ಪ್ರತ್ಯೇಕ ಸ್ಥಾನ ನೀಡಲಾಗಿದೆ. ಅಖಂಡ ತಾಲ್ಲೂಕಿನಲ್ಲಿದ್ದ 154 ಪಿಕೆಪಿಎಸ್‌ಗಳ ಪೈಕಿ 130 ಅಥಣಿಯಲ್ಲಿ ಕೇವಲ 24 ಮತಗಳು ಕಾಗವಾಡ ತಾಲ್ಲೂಕಿನಲ್ಲಿ ಉಳಿದಿವೆ. ಹಾಗಾಗಿ ಯಾರು 13 ಮತಗಳನ್ನು ಪಡೆಯುತ್ತಾರೋ ಅವರು ಗೆಲ್ಲುವುದು ಶತಸಿದ್ಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.