ADVERTISEMENT

ಈ ಚುನಾವಣೆಯಲ್ಲಿ ಗೆದ್ದಿದ್ದು ಸಹಕಾರ ಕ್ಷೇತ್ರ: ರಮೇಶ ಕತ್ತಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 2:38 IST
Last Updated 11 ನವೆಂಬರ್ 2025, 2:38 IST
ರಮೇಶ ಕತ್ತಿ
ರಮೇಶ ಕತ್ತಿ   

ಬೆಳಗಾವಿ: ‘ಜಿಲ್ಲೆಯ ಎಲ್ಲ ಹಿರಿಯರು ಕೂಡಿಕೊಂಡು ಪಕ್ಷಾತೀತ ಮತ್ತು ಜಾತ್ಯತೀತ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ. ಸಹಕಾರ ಕ್ಷೇತ್ರದ ಚುನಾವಣೆಯಲ್ಲಿ ಯಾರೂ ಗೆದ್ದಿಲ್ಲ– ಸೋತಿಲ್ಲ. ಸಹಕಾರ ಕ್ಷೇತ್ರ ಗೆದ್ದಿದೆ’ ಎಂದು ಬ್ಯಾಂಕಿನ ನಿರ್ದೇಶಕ, ಮಾಜಿ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಹಿನ್ನೆಲೆಯಲ್ಲಿ ಮೊದಲ ಸಭೆಯಲ್ಲಿ ಭಾಗಿಯಾದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ‘ಈ ಚುನಾವಣೆಯಲ್ಲಿ ನಾನು ಒಂಟಿಯಾದೆ ಎಂದು ಯಾರೂ ಭಾವಿಸಬೇಕಿಲ್ಲ. 42 ವರ್ಷ ಆಡಳಿತ ನಡೆಸಿದ ಬಳಿಕ ಮುಂದಿನ ಪೀಳಿಗೆಗೆ ಒಳ್ಳೆಯ ವ್ಯವಸ್ಥೆ ಕಲ್ಪಿಸಿಕೊಡುವ ಉದ್ದೇಶದಿಂದ ಎಲ್ಲ ಹಿರಿಯರ ಜೊತೆಗೆ ಚರ್ಚಿಸಿ, ಅಣ್ಣಾಸಾಹೇಬ ಜೊಲ್ಲೆ ಅಧ್ಯಕ್ಷ, ರಾಜು ಕಾಗೆ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೇವೆ’ ಎಂದರು.

‘ಮಾತಿನ ಸಮರ ಆಗಬಾರದು’ ಎಂಬ ರಮೇಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕತ್ತಿ, ‘ಎಲ್ಲವೂ ಮುಗಿದ ಮೇಲೆ ಈ ಮಾತು ಹೇಳಬಾರದು. ಮೊದಲೇ ಗೊತ್ತಿರಬೇಕು. ಮಾತನ್ನು ಬಿಟ್ಟರೆ ಬೇರೇ ಏನು ಮಾಡುತ್ತಾನೆ ಅವನು? ರಾಜಕಾರಣದಲ್ಲಿ ಕೊಡಲಿ– ಕುಡಗೋಲು ತೆಗೆದುಕೊಂಡು ನಿಲ್ಲುವುದಕ್ಕೆ ಆಗುತ್ತದೆಯೇ?’ ಎಂದು ಖಾರವಾಗಿ ಪ್ರಶ್ನಿಸಿದರು.

ADVERTISEMENT

ಇದೇ ವೇಳೆ ಮಾತನಾಡಿದ ಬ್ಯಾಂಕಿನ ನಿರ್ದೇಶಕ, ಶಾಸಕ ಲಕ್ಷ್ಮಣ ಸವದಿ, ‘ಹೊಸ ಅಧ್ಯಕ್ಷ, ಉಪಾಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ್ದೇವೆ. ಎಲ್ಲದಕ್ಕೂ ಸಹಕಾರ ಕೊಡುತ್ತೇವೆ. ಇಲ್ಲಿ ಸೋಲು– ಗೆಲುವಿನ ಲೆಕ್ಕಾಚಾರ ಸರಿಯಲ್ಲ’ ಎಂದರು.

‘ಜೋಡೆತ್ತಿನಂತೆ ಇದ್ದ ರಾಜು ಕಾಗೆ ಅವರನ್ನು ಉಪಾಧ್ಯಕ್ಷರಾಗಿ ಎಂದು ನಾನೇ ಹೇಳಿದ್ದೇನೆ. ಗಣೇಶ ಹುಕ್ಕೇರಿ ಅಧ್ಯಕ್ಷರಾಗಲು ಒ‍ಪ್ಪಲಿಲ್ಲ. ಅಣ್ಣಾಸಾಹೇಬ ಹಿರಿಯರಾದ್ದರಿಂದ ಅವರನ್ನು ಮಾಡಿದ್ದೇವೆ. ಅವರೂ ನಮ್ಮವರೇ, ಅವರೇನು ಪಾಕಿಸ್ತಾನದವರಾ?’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.