ADVERTISEMENT

ಮಧುಮೇಹ ಜಾಗೃತಿಗೆ ಕೆಎಲ್‌ಇ ನಡಿಗೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 12:26 IST
Last Updated 14 ನವೆಂಬರ್ 2019, 12:26 IST

ಬೆಳಗಾವಿ: ವಿಶ್ವ ಮಧುಮೇಹ ದಿನದ ಅಂಗವಾಗಿ ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಮಧುಮೇಹ ಕೇಂದ್ರ, ಬಿ.ಎಂ. ಕಂಕಣವಾಡಿ, ಕೆಎಲ್‌ಇ–ಯುಎಸ್‌ಎಂ ಸಹಯೋಗದಲ್ಲಿ ಗುರುವಾರ ಇಲ್ಲಿ ನಡೆದ ಜಾಗೃತಿ ಜಾಥಾದಲ್ಲಿ ನೂರಾರು ಮಂದಿ ಹೆಜ್ಜೆ ಹಾಕಿದರು.

ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿದರು.

ರಾಣಿ ಚನ್ನಮ್ಮ ವೃತ್ತದಿಂದ ಆರಂಭವಾಗಿ ಡಾ.ಬಿ.ಆರ್. ಅಂಬೇಡ್ಕರ್ ರಸ್ತೆ, ಕೃಷ್ಣದೇವರಾಯ ವೃತ್ತದ ಮೂಲಕ ನೆಹರೂ ನಗರದ ಪ್ರಭಾಕರ ಕೋರೆ ಆಸ್ಪತ್ರೆ ತಲುಪಿತು. ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಎಂ.ವಿ. ಜಾಲಿ, ಕೆಎಲ್‌ಇ– ಯುಎಸ್‌ಎಂ ನಿರ್ದೇಶಕ ಡಾ.ಎಚ್.ಬಿ. ರಾಜಶೇಖರ, ಕುಲಸಚಿವ ಡಾ.ವಿ.ಎ. ಕೋಠಿವಾಲೆ, ಜೆಎನ್ಎಂಸಿ ಪ್ರಾಚಾರ್ಯರಾದ ಡಾ.ಎನ್.ಎಸ್. ಮಹಾಂತಶೆಟ್ಟಿ, ಡಾ.ಎ.ಎಸ್. ಗೋಗಟೆ, ಡಾ.ಅರವಿಂದ ತೆನಗಿ, ಡಾ.ಬಸವರಾಜ ಬಿಜ್ಜರಗಿ, ಡಾ.ರಾಜಶೇಖರ ಸೋಮನಟ್ಟಿ, ಇಂಡೋ–ಟಿಬೆಟಿಯನ್ ಗಡಿ ಭದ್ರತಾ ಪಡೆಯವರು, ಸಂಘ–ಸಂಸ್ಥೆಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ADVERTISEMENT

ನಂತರ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ,ಎಚ್.ಬಿ. ರಾಜಶೇಖರ, ‘ಮಿತ ಆಹಾರ ಸೇವನೆ, ವ್ಯಾಯಾಮ ಹಾಗೂ ಒತ್ತಡಮುಕ್ತ ಜೀವನ ನಡೆಸಿದರೆ ಮಧುಮೇಹವು ನಮ್ಮ ಹತ್ತಿರ ಸುಳಿಯುವುದಿಲ್ಲ. ಆದಾಗ್ಯೂ ಕಂಡುಬಂದರೆ ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಸಹಜ ಜೀವನ ನಡೆಸಬಹುದು’ ಎಂದು ತಿಳಿಸಿದರು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ. ವಿ. ಜಾಲಿ, ‘ಪಾಲಕರಲ್ಲಿ ಮಧುಮೇಹ ನ್ಯೂನತೆ ಇದ್ದರೆ ಮಕ್ಕಳಿಗೂ ಬಳುವಳಿಯಾಗಿ ಬರುತ್ತದೆ. ಆಧುನಿಕ ಜೀವನ ಶೈಲಿಗೆ ವಾಲುತ್ತಿರುವ ಯುವಕರು ಪಾಲಕರ ವಂಶವಾಹಿನಿಯ ಕುರಿತು ತಿಳಿದು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಉಚಿತ ರಕ್ತ ತಪಾಸಣೆ ನಡೆಸಲಾಯಿತು. 150 ಮಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.