ADVERTISEMENT

ಬೆಳಗಾವಿ: ನೇಗಿನಹಾಳ ಮಠದ ಆವರಣದಲ್ಲೇ ಮಣ್ಣಾದ ಬಸವಸಿದ್ಧಲಿಂಗ ಸ್ವಾಮೀಜಿ

ಗ್ರಾಮದ ಬೀದಿಗಳಲ್ಲಿ ಪಾರ್ಥಿವ ಶರೀರದ ಮೆರವಣಿಗೆ, ಮಹಿಳೆಯರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮುಂದುವರಿದ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 9:01 IST
Last Updated 6 ಸೆಪ್ಟೆಂಬರ್ 2022, 9:01 IST
ನೇಗಿನಹಾಳದಲ್ಲಿ ಮಂಗಳವಾರ ಮಧ್ಯಾಹ್ನ ಬಸವಸಿದ್ಧಲಿಂಗ ಶ್ರೀಗಳ ಅಂತಿಮ ಯಾತ್ರೆಗೆ ಅಪಾರ ಜನ ಸೇರಿದ್ದರು
ನೇಗಿನಹಾಳದಲ್ಲಿ ಮಂಗಳವಾರ ಮಧ್ಯಾಹ್ನ ಬಸವಸಿದ್ಧಲಿಂಗ ಶ್ರೀಗಳ ಅಂತಿಮ ಯಾತ್ರೆಗೆ ಅಪಾರ ಜನ ಸೇರಿದ್ದರು   

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ನೇಗಿನಹಾಳ ಗ್ರಾಮದ ಗುರು ಮಡಿವಾಳೇಶ್ವರ ಶಿವಯೋಗಿ ಮಠದ ಬಸವಸಿದ್ಧಲಿಂಗ ಸ್ವಾಮೀಜಿ ಅವರ ಅಂತ್ಯಕ್ರಿಯೆ ಲಿಂಗಾಯತ ಸಂಪ್ರದಾಯದಂತೆ ಸಕಲ ವಿಧಿ, ವಿಧಾನಗಳಿಂದ ಮಂಗಳವಾರ ಮಧ್ಯಾಹ್ನ ಮಠದ ಆವರಣದಲ್ಲಿ ನೆರವೇರಿತು.

ಮಠದ ಆವರಣದಲ್ಲಿ ಸೋಮವಾರ ರಾತ್ರಿಯಿಂದ ಅಪಾರ ಸಂಖ್ಯೆಯ ಭಕ್ತರು ಶ್ರೀಗಳ ಅಂತಿಮ ದರ್ಶನ ಪಡೆದರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರಾರ್ಥಿವ ಶರೀರದ ಮೆರವಣಿಗೆ ನಡೆಯಿತು. ದಾರಿಯುದ್ದಕ್ಕೂ ಕಿಕ್ಕಿದು ಸೇರಿದ್ದ ಭಕ್ತರು, ಗ್ರಾಮಸ್ಥರು ಕೈ ಮುಗಿದು, ಹೂವು ಮಾಲೆ ಅರ್ಪಿಸಿದರು.

ಮರಳಿ ಮಠಕ್ಕೆ ಬಂದ ನಂತರ, ಆವರಣದಲ್ಲೇ ತೋಡದ ಕುಣಿಯಲ್ಲಿ ಶ್ರೀಗಳನ್ನು ಮಣ್ಣು ಮಾಡಲಾಯಿತು. ಹಲವು ಪೂಜ್ಯರು ವಚನ ಪಠಣ ಮಾಡಿದರು. ಜೈಕಾರಗಳು ಮುಗಿಲು ಮುಟ್ಟಿದವು.

ADVERTISEMENT

ಗದಗ ಡಂಬಳದ ಡಾ.ಸಿದ್ಧರಾಮ ಸ್ವಾಮೀಜಿ, ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಹೊಸೂರ ಗಂಗಾಧರ ಸ್ವಾಮೀಜಿ, ಯಕ್ಕುಂಡಿ ಪಂಚಾಕ್ಷರ ಸ್ವಾಮೀಜಿ, ಉಳವಿ ಬಸವಪೀಠದ ಬಸವಪ್ರಕಾಶ ಸ್ವಾಮೀಜಿ, ಶಿವಮೊಗ್ಗ, ದಾವಣಗೆರೆ ಬಸವಪ್ರಭು ಸ್ವಾಮೀಜಿ ಸೇರಿದಂತೆ ಸುತ್ತಮುತ್ತಲಿನ ಹಲವಾರು ಪೂಜ್ಯರು, ಶಾಸಕ ಮಹಾಂತೇಶ ದೊಡ್ಡಗೌಡರ, ಮಾಜಿ ಶಾಸಕ ಡಿ.ಬಿ.ಇನಾಮದಾರ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಸೇರಿದಂತೆ ಅನೇಕರು ಇದ್ದರು.

ಮುಖಂಡರಾದ ಬಾಬಾಸಾಹೇಬ ಪಾಟೀಲ, ರೋಹಿಣಿ ಪಾಟೀಲ, ಲಿಂಗಾಯತ ಬಸವ ಸೇನೆ ಅಧ್ಯಕ್ಷ ಶಂಕರ ಗುಡಸ, ವಿಕ್ರಂ ಇನಾಮದಾರ, ಶಿವು ಮೆಟ್ಯಾಲ ಸೇರಿದಂತೆ, ಹಿರಿಯರು, ಬಸವ ಸೇನೆ ಮುಖ್ಯಸ್ಥರು ಪೂಜ್ಯರ ಅಂತ್ಯಕ್ರಿಯೆ ವಿಧಿ, ವಿಧಾನಗಳನ್ನು ನೆರವೇರಿಸಲು ಶ್ರಮಿಸಿದರು.

ಬಿಗಿ ಪೊಲೀಸ್ ಬಂದೋಬಸ್ತ್

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ನಂದಗಾವಿ ಮಾರ್ಗದರ್ಶನದಲ್ಲಿ ಇಬ್ಬರು ಡಿಎಸ್ಪಿ, ಆರು ಸಿಪಿಐ, ನಾಲ್ಕು ಪಿಎಸ್ಐ, 15 ಎಸ್ಐ ನೇತೃತ್ವದಲ್ಲಿ 120 ಸಿಬ್ಬಂದಿ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಿದರು.

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ನಿಜ ಅರಿಯದೇ ಮಾತನಾಡಿ ಆಡಿಯೊ ಹರಿಬಿಟ್ಟ ಹೆಂಗಸರ ಕಾರಣ, ಬಸವ ತತ್ವ ನಂಬಿದ ಪೂಜ್ಯರು ಮನನೊಂದು ಬಸವನ ಬಳಿ ಹೋದರು. ಶ್ರೀಗಳ ಈ ಅನ್ಯಾಯದ ಸಾವಿಗೆ ನ್ಯಾಯ ಸಿಗುವುದೇ? ಲಿಂಗಾಯತ ಸಮಾಜವನ್ನು ಅನಾಥ ಮಾಡಿದರೆಲ್ಲ ತಂದೆ... ಎಂಬ ಹತ್ತಾರು ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸಾವಿರಾರು ಭಕ್ತರು ಆಕ್ರೋಶ ಹೊರಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.