ADVERTISEMENT

ಬೆಳಗಾವಿ | DJ ತಡೆದ ಪೊಲೀಸರು: ಕಳೆಗುಂದಿದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 6:55 IST
Last Updated 7 ಸೆಪ್ಟೆಂಬರ್ 2025, 6:55 IST
<div class="paragraphs"><p>ಬೆಳಗಾವಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ&nbsp;</p></div>

ಬೆಳಗಾವಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ 

   

ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ

ಬೆಳಗಾವಿ: ನಗರದಲ್ಲಿ ಶನಿವಾರ ಸಂಜೆ 4ಕ್ಕೆ ಆರಂಭವಾದ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಭಾನುವಾರ ಬೆಳಿಗ್ಗೆಯೂ ಮುಂದುವರಿಯಿತು. ಒಟ್ಟು 378 ಮೂರ್ತಿಗಳಲ್ಲಿ ಬೆಳಿಗ್ಗೆ 11ರವರೆಗೆ 300 ಮೂರ್ತಿಗಳ ವಿಸರ್ಜನೆ ನಡೆದಿತ್ತು. ಇನ್ನೂ 78 ಮೂರ್ತಿಗಳು ಹೊಂಡಗಳ ಮುಂದೆ ಸಾಲಾಗಿ ನಿಂತಿವೆ. ಇದೇ ಮೊದಲ ಬಾರಿಗೆ ಡಿ.ಜೆ. ಸಂಗೀತ ಪರಿಕರ ಬಳಕೆಗೆ ಅವಕಾಶ ನೀಡದ ಕಾರಣ ಮೆರವಣಿಗೆ ಕಳೆಗುಂದಿದೆ.

ADVERTISEMENT

ಕಿವಿಗಡಚಿಕ್ಕುವಂಥ ಸಂಗೀತಕ್ಕೆ ನಗರದ ಪೊಲೀಸ್‌ ಕಮಿಷನರ್‌ ಭೂಷಣ ಬೊರಸೆ ತಡೆಯೊಡ್ಡಿದರು. ಶನಿವಾರ ಸಂಜೆಯಿಂದ ಟ್ರ್ಯಾಕ್ಟರ್‌ಗಳಲ್ಲಿ ಸಂಗೀತ ಪರಿಕರಗಳನ್ನು ಇಟ್ಟುಕೊಂಡು ಬಂದ ಕೆಲವರು ಮಿತಿ ನಿಗದಿ ಮಾಡಿದಷ್ಟೇ ಗೀತೆಗಳನ್ನು ಹಾಕಿದರು. ಯುವಕ– ಯುವತಿಯರು ಕುಣಿದು ಕುಪ್ಪಳಿಸಿದರು. ಮತ್ತೆ ಕೆಲವು ಮಂಡಳಗಳು ಸಾಂಪ್ರದಾಯಿಕ ಸಂಗೀತಕ್ಕೆ, ಕಲಾವಿದರ ನೃತ್ಯಕ್ಕೆ ಮಾರುಹೋದವು. ಇದರಿಂದ ಮೆರವಣಿಗೆ ತುಸು ಕಳೆ ಪಡೆಯಿತು.

ರಾತ್ರಿ 11ರ ನಂತರ ಕೆಲವು ಮೂರ್ತಿಗಳ ಮಂಡಳದ ಯುವಕರು ಡಿ.ಜೆ ಸೌಂಡ್‌ ಸಿಸ್ಟಮ್‌ ಬಳಸಲು ಶುರು ಮಾಡಿದರು. ಕೆಲವೇ ಗಂಟೆಗಳಲ್ಲಿ ಪೊಲೀಸರು ಅದನ್ನೂ ಬಂದ್ ಮಾಡಿಸಿದರು. ಇದರಿಂದ ಮೂರ್ತಿಗಳ ಮುಂದೆ ಕುಣಿಯುವ ಉಮೇದಿನಲ್ಲಿ ಬಂದಿದ್ದ ಯುವಕ, ಯುವತಿಯರು ನಿರಾಶರಾದರು. ರಸ್ತೆಯ ಬದಿಯಲ್ಲಿ, ವೃತ್ತಗಳಲ್ಲಿ ಮೂರ್ತಿಯ ಜೆತೆಗೆ ಬೆರಳೆಣಿಕೆಯಷ್ಟು ಜನ ಮಾತ್ರ ಇದ್ದರು.

ಪ್ರತಿ ವರ್ಷ 38 ತಾಸು ಮೆರವಣಿಗೆ ನಡೆಯುತ್ತಿತ್ತು. ಹಗಲು– ರಾತ್ರಿಗಳನ್ನು ಒಂದು ಮಾಡಿ ಯುವಜನರು ಕುಣಿದು ಕುಪ್ಪಳಿಸುತ್ತಿದ್ದರು. ಆ ಸಂಭ್ರಮ ಕಣ್ತುಂಬಿಕೊಳ್ಳಲಿ ಸುತ್ತಲಿನ ಹಳ್ಳಿಗಳ ಜನ ವಾಹನಗಳ ಸಮೇತ ಬರುತ್ತಿದ್ದರು. ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನ ಕಿಕ್ಕಿರಿದು ಸೇರುತ್ತಿದ್ದರು. ಝಗಮಗಿಸುವ ದೀಪಾಲಂಕಾರ, ಎದೆ ನಡುಗಿಸವಂಥ ಸಂಗೀತ ಹಗಲು– ರಾತ್ರಿಗಳನ್ನು ಒಂದು ಮಾಡುತ್ತಿತ್ತು. ಆದರೆ, ಈ ಬಾರಿ ಸಂಗೀತದ ಅಬ್ಬರ ಹಾಗೂ ದೀಪಾಲಂಕಾರಕ್ಕೆ ಮಿತಿ ಹೇರಿದ್ದರಿಂದ ಮೆರವಣಿಗೆ ಸಪ್ಪೆಯಾಗಿ ನಡೆಯಿತು. ರಾತ್ರಿ 2ರ ನಂತರ ಜನ ಮನೆಗಳತ್ತ ಹೆಜ್ಜೆ ಹಾಕಿದರು.

ಮೂರ್ತಿ ಪ್ರತಿಷ್ಠಾಪನೆ ಮಾಡಿದ ಯುವಜನ ಮಂಡಳಗಳ ಸದಸ್ಯರು ಮಾತ್ರ ಇಡೀ ರಾತ್ರಿ ಮೆರವಣಿಗೆ ನಡೆಸಿದರು. ನಗರದ ಎಂಟು ಕಡೆ ಮೂರ್ತಿ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಜಕ್ಕೇರಿ ಹೊಂಡದ ಬಳಿಯೇ ಬಹುಪಾಲು ಮೂರ್ತಿಗಳ ವಿದಾಯ ನಡೆಯುತ್ತದೆ.

ಹೊಂಡದ ಸುತ್ತ ಹಲವು ಕ್ರೇನ್‌ಗಳನ್ನು ನಿಲ್ಲಿಸಿದ್ದು, ಬೃಹತ್‌ ಮೂರ್ತಿಗಳನ್ನು ಎತ್ತಿ ಹೊಂಡಕ್ಕೆ ಬಿಡಲಾಗುತ್ತಿದೆ. ಅದಕ್ಕೂ ಮುನ್ನ ಅಲ್ಲಿಯೇ ಇರುವ ಅರ್ಚಕರು, ಪುರೋಹಿತರು ಶಾಸ್ತ್ರಗಳನ್ನು ಮುಗಿಸಿದ ಬಳಿಕ ಘೋಷಣೆ ಮೊಳಗಿಸುತ್ತ, ಜೈಕಾರ ಹಾಕುತ್ತ ಮೂರ್ತಿಗಳನ್ನು ನೀರಲ್ಲಿ ಮುಳುಗಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.