ADVERTISEMENT

ಬೆಳಗಾವಿ | ₹22 ಲಕ್ಷ ಮೌಲ್ಯದ 440 ಕೆ.ಜಿ ಗಾಂಜಾ ವಶ

ರಾಯಬಾಗ ತಾಲ್ಲೂಕಿನ ನಿಡಗುಂದಿ ಅಕ್ರಮವಾಗಿ ಗಾಂಜಾ ಬೆಳೆ: ಪತ್ತೆ ಮಾಡಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 1:58 IST
Last Updated 23 ಸೆಪ್ಟೆಂಬರ್ 2025, 1:58 IST
ಬೆಳಗಾವಿ ಜಿಲ್ಲೆಯ ವಿವಿಧ ಪ್ರಕರಣಗಳಲ್ಲಿ ವಶಕ್ಕೆ ಪಡೆದ ಚಿನ್ನಾಭರಣ ಮತ್ತು ಹಣವನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಹಾಗೂ ಅಧಿಕಾರಿಗಳ ತಂಡ ಸೋಮವಾರ ಪ್ರದರ್ಶನ ಮಾಡಿತು
ಬೆಳಗಾವಿ ಜಿಲ್ಲೆಯ ವಿವಿಧ ಪ್ರಕರಣಗಳಲ್ಲಿ ವಶಕ್ಕೆ ಪಡೆದ ಚಿನ್ನಾಭರಣ ಮತ್ತು ಹಣವನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಹಾಗೂ ಅಧಿಕಾರಿಗಳ ತಂಡ ಸೋಮವಾರ ಪ್ರದರ್ಶನ ಮಾಡಿತು   

ಬೆಳಗಾವಿ: ರಾಯಬಾಗ ತಾಲ್ಲೂಕಿನ ನಿಡಗುಂದಿಯಲ್ಲಿ ತನ್ನ ತಂದೆ ಕೃಷಿಭೂಮಿಯಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಸಿಂಗಾಡಿ ಹಿರೇಕೋಡಿ ಎಂಬುವವರನ್ನು ಜಿಲ್ಲಾ ಸಿಇಎನ್ ಅಪರಾಧ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಅವರಿಂದ ₹22 ಲಕ್ಷ ಮೌಲ್ಯದ 440 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.

‘ನಿಡಗುಂದಿಯಲ್ಲಿ ಕಬ್ಬಿನ ಬೆಳೆ ಮಧ್ಯೆ, ಗಾಂಜಾ ಬೆಳೆಯುತ್ತಿರುವ ಮಾಹಿತಿ ಸಿಕ್ಕಿತ್ತು. ಅದನ್ನು ಆಧರಿಸಿ ದಾಳಿ ಮಾಡಿ, ಸಿಂಗಾಡಿ ಎಂಬಾತನನ್ನು ಬಂಧಿಸಲಾಗಿದೆ. ಆತನಿಗೆ ಯಾವುದೇ ಅಪರಾಧ ಹಿನ್ನೆಲೆ ಇಲ್ಲ. ಆದರೆ, ಅವನು ಗಾಂಜಾ ಸರಬರಾಜು ಮಾಡುತ್ತಿರುವ ಮತ್ತು ಈ ಅಕ್ರಮದಲ್ಲಿ ಭಾಗಿಯಾದ ಸಹಚರರ ಕುರಿತು ಪರಿಶೀಲಿಸುತ್ತಿದ್ದೇವೆ’ ಎಂದು ಎಸ್‌ಪಿ ಡಾ.ಭೀಮಾಶಂಕರ ಗುಳೇದ ಸುದ್ದಿಗಾರರಿಗೆ ತಿಳಿಸಿದರು.

‘ಇತರೆ ವ್ಯವಹಾರಗಳಲ್ಲಿ ಸಿಂಗಾಡಿ ಭಾಗಿಯಾಗಿದ್ದಾನೆ ಎಂಬ ಅನುಮಾನವಿದೆ. ಆ ಬಗ್ಗೆ ಪರಿಶೀಲಿಸುತ್ತಿದ್ದೇವೆ’ ಎಂದು ಹೇಳಿದರು.

ADVERTISEMENT

ಆರೋಪಿ ಬೆನ್ನಟ್ಟಿ ಹಿಡಿದ ಕಾನ್‌ಸ್ಟೆಬಲ್‌: ರಾಯಬಾಗ ತಾಲ್ಲೂಕಿನ ಮುಗಳಖೋಡದ ಮಹಿಳೆಯೊಬ್ಬರು ಸೆ.5ರಂದು ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರಕ್ಕೆ ತೆರಳುತ್ತಿದ್ದರು. ರಾಯಬಾಗ ನಿಲ್ದಾಣದಲ್ಲಿ ಇಳಿದು ಬಸ್‌ಗೆ ಕಾಯುತ್ತಿದ್ದಾಗ, ಬೈಕ್‌ ಮೇಲೆ ಬಂದ ಮಹಾರಾಷ್ಟ್ರದ ರಾಜು ಪಕಾಲೆ ಮತ್ತು ರಾಹುಲ ಮಾಳಿ ಎಂಬುವವರು ಚಿನ್ನದ ಸರ ಕದ್ದು ಪರಾರಿಯಾಗಿದ್ದರು.

ನಿಲ್ದಾಣದ ಹೊರಗೆ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಕಾನ್‌ಸ್ಟೆಬಲ್ ಪರಶುರಾಮ ಗಾಣಿಗೇರ ಅವರು, 2.5 ಕಿ.ಮೀ ದೂರದವರೆಗೆ ಆರೋಪಿ ಬೆನ್ನಟ್ಟಿ ಹೋಗಿ ಹಿಡಿದರು. ಸ್ಥಳೀಯರೂ ಅವರಿಗೆ ಸಹಾಯ ಮಾಡಿದರು. ನಂತರ ಪರಾರಿಯಾಗಿದ್ದ ಮತ್ತೊಬ್ಬ ಆರೋಪಿ ಬಂಧಿಸಿ, ₹2.75 ಲಕ್ಷ ಮೌಲ್ಯದ 30 ಗ್ರಾಂ ಚಿನ್ನದ ಸರ ವಶಪಡಿಸಿಕೊಳ್ಳಲಾಗಿದೆ ಎಂದು ಗುಳೇದ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.