ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ
– ಪ್ರಜಾವಾಣಿ ಚಿತ್ರ
ಗೋಕಾಕ (ಬೆಳಗಾವಿ ಜಿಲ್ಲೆ): 'ಘಟಪ್ರಭಾ ಹಾಗೂ ಮಾರ್ಕಂಡೇಯ ನದಿಗಳಿಂದ ಮುಳುಗಡೆ ಆಗುವ ನಾಲ್ಕು ಸೇತುವೆಗಳನ್ನು ಹೊಸದಾಗಿ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಪ್ರಕೃತಿ ವಿಕೋಪ ಪರಿಹಾರ ನಿಧಿ ಅಡಿ ₹11 ಕೋಟಿ ಹಣವಿದೆ. ಇದರೊಂದಿಗೆ ಲೋಕೋಪಯೋಗಿ ಇಲಾಖೆಯಿಂದ ಮತ್ತಷ್ಟು ಅನುದಾನ ಪಡೆದು, ಬೇಸಿಗೆಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು' ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ಘಟಪ್ರಭಾ ನದಿ ಪ್ರವಾಹದಿಂದ ಮುಳುಗಡೆಯಾದ ಇಲ್ಲಿನ ಲೋಳಸೂರ ಸೇತುವೆಯನ್ನು ಬುಧವಾರ ಪರಿಶೀಲಿಸಿ ಅವರು ಮಾತನಾಡಿದರು.
'ಲೋಳಸೂರ ಹಾಗೂ ಶಿಂಗಳಾಪುರ ಸೇತುವೆ ಪ್ರತಿವರ್ಷ ಮುಳುಗುತ್ತಿದೆ. ಇದರೊಂದಿಗೆ ಮಾರ್ಕಂಡೇಯ ನದಿಯಿಂದಾಗಿ ಚಿಕ್ಕೋಳಿ ಸೇತುವೆ ಕೂಡ ಮುಳುಗುತ್ತವೆ. ರೈತರು ಹಾಗೂ ಜನರಿಗೆ ಸಾಕಷ್ಟು ನಷ್ಟವಾಗುತ್ತಿರುವುದು ಗಮನಕ್ಕೆ ಬಂದಿದೆ. ಇದರ ಗಂಭೀರತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಗಮನಕ್ಕೆ ತಂದು ಶಾಶ್ವತ ಪರಿಹಾರವನ್ನು ಇದೇ ವರ್ಷ ಕಂಡುಕೊಳ್ಳಲಾಗುವುದು' ಎಂದರು.
'ನದಿಗಳ ನೀರು ಏರಿದ್ದರಿಂದ ಗೋಕಾಕ ನಗರದ 200 ಮನೆಗಳಿಗೆ ನೀರು ನುಗ್ಗಿದೆ. ಗೋಕಾಕದ ಮುನ್ಸಿಪಲ್ ಶಾಲೆಯಲ್ಲಿ ತೆರೆದ ಎರಡು ಕಾಳಜಿ ಕೇಂದ್ರದಲ್ಲಿ ಜನರಿಗೆ ವ್ಯವಸ್ಥೆ ಮಾಡಲಾಗಿದೆ' ಎಂದರು.
'ಪ್ರತಿವರ್ಷ ಮುಳುಗಡೆಯಾಗುವ ಮನೆಗಳ ಪಟ್ಟಿ ಮಾಡಲಾಗಿದೆ. ಶಾಶ್ವತವಾಗಿ ಸ್ಥಳಾಂತರ ಮಾಡಬೇಕು ಎಂಬುದು ಅವರ ಬಹಳ ವರ್ಷಗಳ ಬೇಡಿಕೆಯಾಗಿದೆ. ಈ ವಿಚಾರದಲ್ಲಿ ಜಿಲ್ಲಾಡಳಿತ ಸಕಾರಾತ್ಮಕ ಹೆಜ್ಜೆ ಇಡಲಿದೆ. ಪ್ರಸ್ತಾವ ಸಲ್ಲಿಸಲಾಗುವುದು' ಎಂದೂ ಅವರು ಭರವಸೆ ನೀಡಿದರು.
'ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಕೂಡ ಬುಧವಾರ ಮಳೆ ಪ್ರಮಾಣ ಕಡಿಮೆಯಾಗಿದೆ. ಕೊಯ್ನಾ ಜಲಾಶಯದಿಂದ 85 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತದೆ. ರಾಜಾಪುರ ಜಲಾಶಯ ಹಾಗೂ ಕೃಷ್ಣ ಜಲಾನಯನ ಪ್ರದೇಶದಲ್ಲಿನ ಮಳೆ ಸೇರಿ ನದಿಗೆ 1.50 ಲಕ್ಷ ಕ್ಯೂಸೆಕ್ ಹರಿವು ಇದೆ. ಇದು 2 ಲಕ್ಷ ಕ್ಯೂಸೆಕ್ ದಾಟಿದರೆ ಮಾತ್ರ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ತಲೆದೋರಲಿದೆ. ಸದ್ಯಕ್ಕೆ ಆತಂಕ ಇಲ್ಲ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.