ಬೆಳಗಾವಿ: ‘ತಾಲ್ಲೂಕಿನ ಸಂತಿ ಬಸ್ತವಾಡದಲ್ಲಿ ಇಸ್ಲಾಂ ಧರ್ಮಗ್ರಂಥ ಕುರಾನ್ ಮತ್ತು ಹದೀಸ್‌ಗಳನ್ನು ಸುಟ್ಟ ಪ್ರಕರಣದ ತನಿಖೆ ಹೆಸರಿನಲ್ಲಿ ಅಮಾಯಕ ಹಿಂದೂಗಳನ್ನು ಪೊಲೀಸರು ವಶಕ್ಕೆ ಪಡೆದು ತೊಂದರೆ ಕೊಡುತ್ತಿದ್ದಾರೆ’ ಎಂದು ಆರೋಪಿಸಿ, ವಿವಿಧ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಗ್ರಾಮಸ್ಥರು ನಗರದಲ್ಲಿ ಬುಧವಾರ ‘ಹಿಂದೂ ಜನಾಕ್ರೋಶ ಯಾತ್ರೆ’ ನಡೆಸಿದರು.
ಇಲ್ಲಿನ ರಾಣಿ ಚನ್ನಮ್ಮನ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸಂಚಾರ ತಡೆದರು. ನಂತರ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿ, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ತನಿಖೆ ಹೆಸರಿನಲ್ಲಿ ಹಿಂದೂಗಳಿಗೆ ತೊಂದರೆ ಕೊಡುವುದನ್ನು ನಿಲ್ಲಿಸಲು ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
‘ಯಾವುದೇ ಧರ್ಮಗ್ರಂಥ ಸುಟ್ಟಿದ್ದು ಖಂಡನೀಯ. ಪಾರದರ್ಶಕವಾಗಿ ತನಿಖೆ ಮಾಡಿ ನಿಜವಾದ ಆರೋಪಿಗಳನ್ನು ಪತ್ತೆಹಚ್ಚಿ ಶಿಕ್ಷೆ ಕೊಡಿ. ಆದರೆ, ಹಿಂದೂ ಸಮುದಾಯದ ಯುವಕರನ್ನೇ ವಶಕ್ಕೆ ಪಡೆದು ವಿಚಾರಣೆ ಮಾಡಬೇಡಿ’ ಎಂದು ಆಗ್ರಹಿಸಿದರು.
‘ಮಸೀದಿಯಲ್ಲಿ ಅಳವಡಿಸಿದ್ದ ಸಿ.ಸಿ.ಟಿ.ವಿ ಕ್ಯಾಮೆರಾ ಯಾವ ಕಾರಣಕ್ಕೆ ತೆಗೆದಿದ್ದಾರೆ? ಘಟನೆ ನಡೆದಾಗ ಮಸೀದಿ ಬೀಗ ಯಾರು ತೆಗೆದಿದ್ದಾರೆ? ಧರ್ಮಗುರು(ಮೌಲಾನಾ) ಮಸೀದಿ ಬಿಟ್ಟು, ಅನುಮಾನಸ್ಪದವಾಗಿ ಊರಿಗೆ ಹೋಗಿದ್ದು ಏಕೆ?’ ಎಂದು ಪ್ರಶ್ನಿಸಿದರು.
ಬಿಜೆಪಿ ಮುಖಂಡ ಧನಂಜಯ ಜಾಧವ, ‘ಕುರಾನ್ ಸುಡುವಂಥ ಕೆಟ್ಟ ಕೆಲಸವನ್ನು ಹಿಂದೂಗಳು ಮಾಡುವುದಿಲ್ಲ. ಆದರೆ, ದುರದ್ದೇಶದಿಂದ ಹಿಂದೂಗಳನ್ನು ಈ ಪ್ರಕರಣದಲ್ಲಿ ಸಿಲುಕಿಸುವ ಹುನ್ನಾರ ನಡೆದಿದೆ. ಪೊಲೀಸರ ಮೇಲೆ ರಾಜಕೀಯ ಒತ್ತಡವಿದೆ. ಪೊಲೀಸರ ಭೀತಿಗೆ ಹೆದರಿ ಅಮಾಯಕ ಯುವಕರು ಊರು ತೊರೆಯುತ್ತಿದ್ದಾರೆ. ಈ ಪ್ರಕರಣದಲ್ಲಿ ಹಿಂದೂಗಳಿಗೆ ತೊಂದರೆ ಕೊಡುವುದನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲದಿದ್ದರೆ ಇಡೀ ಜಿಲ್ಲೆಯಿಂದ ‘ಚಲೋ ಸಂತಿಬಸ್ತವಾಡ’ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ಕೊಟ್ಟರು.
ಮುಖಂಡರಾದ ಕೃಷ್ಣಭಟ್, ಪ್ರಸಾದ ಸಡೇಕರ, ಪವನ ನಾಯಕ, ಜ್ಯೋತಿಬಾ ಪಾಟೀಲ, ಬಾಬಾಜಿ ಪಾವಸೆ, ನಾಗೇಂದ್ರ ನಾಯಕ, ರಾಮಾ ಪಾಟೀಲ, ಅಜಯ ಚನ್ನಿಕುಪ್ಪಿ, ವಿಠ್ಠಲ ಅಂಕಲಗಿ, ಜ್ಯೋತಿಬಾ ಡಿ., ಗಂಗಾರಾಮ ಗುರುವ ಇತರರಿದ್ದರು.
*****
‘ಅನ್ಯಾಯ ಸಹಿಸುವುದಿಲ್ಲ’
ಮಾಜಿ ಶಾಸಕ ಸಂಜಯ ಪಾಟೀಲ, ‘ಕುರಾನ್ ಮತ್ತು ಹದೀಸ್‌ಗಳನ್ನು ಸುಟ್ಟಿರುವ ಘಟನೆ ನಡೆದಿದ್ದು ಖಂಡನೀಯ. ಪೊಲೀಸರು ಈ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳಲಿ. ಆದರೆ, ಯಾರದ್ದೋ ಒತ್ತಡಕ್ಕೆ ಮಣಿದು ಅಮಾಯಕ ಹುಡುಗರನ್ನು ಠಾಣೆಗೆ ಕರೆತಂದು ಹೊಡೆಯುವ ಕೆಲಸ ಮಾಡಬಾರದು. ಈ ಅನ್ಯಾಯವನ್ನು ನಾವು ಸಹಿಸುವುದಿಲ್ಲ’ ಎಂದು ಎಚ್ಚರಿಕೆ ಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.