ಬೆಳಗಾವಿ: ಎಲ್ಲ ಧರ್ಮೀಯರ ಶ್ರದ್ಧಾ ಕೇಂದ್ರವಾದ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿ, ಧರ್ಮಸ್ಥಳ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಅಪಾರ ಸಂಖ್ಯೆಯ ಹಿಂದೂ ಮುಖಂಡರು ನಗರದಲ್ಲಿ ಮಂಗಳವಾರ ಮೌನ ಪ್ರತಿಭಟನೆ ನಡೆಸಿದರು.
‘ಧರ್ಮಸ್ಥಳಕ್ಕೆ ಕಳಂಕ ತರಲು ಯತ್ನಿಸುತ್ತಿರುವವರ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ರಾಜ್ಯದ ವಿವಿಧ ಜಿಲ್ಲೆಗಳಿಂದ ‘ಧರ್ಮಸ್ಥಳ ಚಲೋ’ ಚಳವಳಿ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ಕೊಟ್ಟರು.
ಧಾರಾಕಾರ ಮಳೆಯನ್ನೂ ಲೆಕ್ಕಿಸದೆ ಇಲ್ಲಿನ ಧರ್ಮವೀರ ಸಂಭಾಜಿ ವೃತ್ತದಲ್ಲಿ ಅಪಾರ ಸಂಖ್ಯೆಯಲ್ಲಿ ಸಮಾವೇಶಗೊಂಡ ಜನರು, ಕಿರ್ಲೋಸ್ಕರ್ ರಸ್ತೆ, ಶನಿವಾರ ಖೂಟ್, ಕಾಕತಿವೇಸ್, ರಾಣಿ ಚನ್ನಮ್ಮನ ವೃತ್ತ ಮಾರ್ಗವಾಗಿ ಸಾಗಿ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದರು.
ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಹೆಜ್ಜೆ ಹಾಕಿದ ಜನ, ಧರ್ಮಸ್ಥಳಕ್ಕೆ ಅಪಖ್ಯಾತಿ ತರಲು ಪ್ರಯತ್ನಿಸುವವರ ವಿರುದ್ಧ ಫಲಕಗಳನ್ನು ಪ್ರದರ್ಶಿಸಿದರು. ಮಹಿಳೆಯರು, ವೃದ್ಧರು ಸೇರಿದಂತೆ ಎಲ್ಲ ವಯೋಮಾನಗಳ ಜನರು ಕೊಡೆ ಹಿಡಿದುಕೊಂಡು, ರೇನ್‌ಕೋಟ್ ಧರಿಸಿಯೇ ಸಾಗಿದರು.
ಶಾಸಕ ಅಭಯ ಪಾಟೀಲ, ರಾಜ್ಯಸಭೆ ಮಾಜಿ ಸದಸ್ಯ ಪ್ರಭಾಕರ ಕೋರೆ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಬೈಲಹೊಂಗಲದ ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತೀವ್ರವಾಗಿ ಖಂಡಿಸಿದರು.
ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಅನಿಲ ಬೆನಕೆ, ‘ಹಿಂದೂ ಧರ್ಮದ ವಿರುದ್ಧ ನಡೆಯುತ್ತಿರುವ ಅಭಿಯಾನವನ್ನು ರಾಜ್ಯ ಸರ್ಕಾರ ಬೆಂಬಲಿಸಿದೆ. ಎಸ್ಐಟಿ ತನಿಖೆಯಲ್ಲಿ ಆರೋಪಕ್ಕೆ ಪೂರಕವಾಗಿ ಯಾವ ಸಾಕ್ಷ್ಯವೂ ಕಂಡುಬಂದಿಲ್ಲ. ಹಿಂದೂ ಧರ್ಮದ ಮೇಲೆ ನಡೆಯುತ್ತಿರುವ ಈ ಪಿತೂರಿ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಬೇಕು’ ಎಂದರು.
ಬೆಳಗಾವಿಯ ರುದ್ರಮಠದ ಹರಗುರು ಮಹಾರಾಜರು, ‘ಧಾರಾಕಾರ ಮಳೆ ಮಧ್ಯೆಯೂ ಮೌನ ಪ್ರತಿಭಟನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವ ಮೂಲಕ ಹಿಂದೂಗಳೆಲ್ಲ ಒಗ್ಗಟ್ಟಾಗಿದ್ದೇವೆ. ಹಿಂದೂ ಸಂಸ್ಕೃತಿ ಮತ್ತು ಯಾತ್ರಾ ಕೇಂದ್ರಗಳ ಮೇಲಿನ ದಾಳಿಯನ್ನು ಸಹಿಸುವುದಿಲ್ಲ ಎಂಬ ಸಂದೇಶ ನೀಡಿದ್ದೇವೆ’ ಎಂದು ಹೇಳಿದರು.
ಹೊಸೂರಿನ ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ, ಭೂತರಾಮನಹಟ್ಟಿಯ ಮುಕ್ತಿಮಠದ ಶಿವಸೋಮೇಶ್ವರ ಶಿವಾಚಾರ್ಯರು, ಬುರಡಕಟ್ಟಿಯ ಮಡಿವಾಳೇಶ್ವರ ಮಠದ ಶಿವಪಂಚಾಕ್ಷರಿ ಸ್ವಾಮೀಜಿ, ಚಿಕ್ಕಮುನವಳ್ಳಿಯ ಸಿದ್ಧಾರೂಢ ಮಠದ ಶಿವಪುತ್ರ ಸ್ವಾಮೀಜಿ, ಮಾಜಿ ಶಾಸಕರಾದ ಸಂಜಯ ಪಾಟೀಲ, ಮಹಾಂತೇಶ ದೊಡ್ಡಗೌಡರ, ಮುಖಂಡರಾದ ಸುಭಾಷ ಪಾಟೀಲ, ಗೀತಾ ಸುತಾರ, ಡಾ.ರವಿ ಪಾಟೀಲ, ಗುರು ಮೆಟಗುಡ್ಡ, ರವಿರಾಜ ಪಾಟೀಲ, ವಿನೋದ ದೊಡ್ಡಣ್ಣವರ, ಹನುಮಂತ ಕೊಂಗಾಲಿ, ಮುರುಘೇಂದ್ರಗೌಡ ಪಾಟೀಲ ಇತರರಿದ್ದರು.
ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ
ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುತ್ತಿದ್ದ ಸ್ಥಳದ ಬಳಿ ಮನವಿ ಸ್ವೀಕರಿಸಲು ಬೇಗ ಬಾರದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ವಿರುದ್ಧ ಶಾಸಕ ಅಭಯ ಪಾಟೀಲ ಮತ್ತು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
‘ವಿವಿಧ ಮಠಾಧೀಶರನ್ನು ಕಾಯುವಂತೆ ಮಾಡಿದ್ದು ಸರಿಯಲ್ಲ’ ಎಂದು ಹರಿಹಾಯ್ದರು. ‘ನಾನು ಗೋಕಾಕದಲ್ಲಿನ ಪ್ರವಾಹ ಪರಿಸ್ಥಿತಿ ಪರಿಶೀಲಿಸುತ್ತಿದ್ದೆ. ಹಾಗಾಗಿ ಮನವಿ ಸ್ವೀಕರಿಸಲು ಬರುವುದಕ್ಕೆ ತಡವಾಯಿತು’ ಎಂದು ರೋಷನ್ ಕ್ಷಮೆಯಾಚಿಸಿದರು.
ಧರ್ಮಸ್ಥಳದ ಖ್ಯಾತಿ ಮತ್ತು ವೀರೇಂದ್ರ ಹೆಗ್ಗಡೆ ಅವರ ಬೆಳವಣಿಗೆ ಸಹಿಸದವರು ಪಿತೂರಿ ನಡೆಸುತ್ತಿದ್ದಾರೆ. ಇದು ಸರಿಯಲ್ಲ. ಸರ್ಕಾರ ಎಚ್ಚೆತ್ತುಕೊಳ್ಳಬೇಕು.ಪ್ರಭಾಕರ ಕೋರೆ, ರಾಜ್ಯಸಭೆ ಮಾಜಿ ಸದಸ್ಯ
ಬೇರೆ ಧರ್ಮಗಳ ಬಗ್ಗೆ ಟೀಕಿಸುವವರ ವಿರುದ್ಧ ರಾಜ್ಯ ಸರ್ಕಾರ ಕ್ರಮ ವಹಿಸುತ್ತದೆ. ಆದರೆ ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಪೋಸ್ಟ್‌ಗಳನ್ನು ಹಾಕಿದ್ದರೂ ಮೌನವಾಗಿದೆ.ಅಭಯ ಪಾಟೀಲ, ಶಾಸಕ
800 ವರ್ಷ ಇತಿಹಾಸ ಹೊಂದಿದ ಧರ್ಮಸ್ಥಳವನ್ನು ಗುರಿಯಾಗಿಸಲಾಗಿದೆ. ಎಸ್ಐಟಿಗೆ ಯಾವ ಪುರಾವೆಯೂ ಸಿಕ್ಕಿಲ್ಲ. ಧರ್ಮ ರಕ್ಷಣೆಗಾಗಿ ಈಗ ಎಲ್ಲ ಹಿಂದೂಗಳು ಒಗ್ಗಟ್ಟಾಗಿದ್ದಾರೆ.ಮಹಾಂತೇಶ ಕವಟಗಿಮಠ, ವಿಧಾನ ಪರಿಷತ್ ಮಾಜಿ ಸದಸ್ಯ
ಧರ್ಮಸ್ಥಳ ಒಂದೇ ಸಮುದಾಯಕ್ಕೆ ಸೀಮಿತವಾಗಿಲ್ಲ. ಎಲ್ಲ ಧರ್ಮೀಯರೂ ಈ ಕ್ಷೇತ್ರಕ್ಕೆ ಭಕ್ತರಿದ್ದಾರೆ. ಅದಕ್ಕೆ ಅನ್ಯಾಯ ಮಾಡುವುದು ಸರಿಯಲ್ಲಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹಿರೇಮಠ ಹುಕ್ಕೇರಿ
ಸತ್ಯ ಯಾವುದಕ್ಕೂ ಹೆದರುವುದಿಲ್ಲ. ನಾವೆಲ್ಲರೂ ಸತ್ಯ ಮತ್ತು ಧರ್ಮಸ್ಥಳದ ಪರವಾಗಿ ನಿಲ್ಲುತ್ತೇವೆ. ಧರ್ಮ ಹಾಗೂ ಧರ್ಮಸ್ಥಳದ ಕೀರ್ತಿಗೆ ಕಳಂಕ ತಂದಿದ್ದನ್ನು ಖಂಡಿಸುತ್ತೇವೆಪ್ರಭುನೀಲಕಂಠ ಸ್ವಾಮೀಜಿ, ಮೂರುಸಾವಿರಮಠ ಬೈಲಹೊಂಗಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.