
ಬೆಳಗಾವಿ: ‘ಇಂದು ಸಾಮಾಜಿಕ ನೆಲೆಗಟ್ಟಿನಲ್ಲಿ ಪರಸ್ಪರರಲ್ಲಿ ಸಂಬಂಧ ಬೆಸೆಯುವಲ್ಲಿ ಪುಸ್ತಕಗಳ ಪಾತ್ರ ಬಹುದೊಡ್ಡದು. ಪುಸ್ತಕ ಪ್ರೀತಿ ಮತ್ತು ಪುಸ್ತಕ ಓದುವ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ‘ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮ ಆಯೋಜಿಸುತ್ತಿರುವುದು ಅಭಿನಂದನೀಯ’ ಎಂದು ನಾಟಕಕಾರ ಡಿ.ಎಸ್. ಚೌಗಲೆ ಹೇಳಿದರು.
ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಇಂದಿನ ಮೊಬೈಲ್ ಯುಗದಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದೆ. ಇದರಿಂದ ಹೊರಬಂದು ಪುಸ್ತಕಗಳನ್ನು ಓದುವತ್ತ ಯುವಜನರು ಒಲವು ಬೆಳೆಸಿಕೊಳ್ಳಬೇಕು’ ಎಂದು ಕರೆಕೊಟ್ಟರು.
ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ವೈ.ಬಿ. ಹಿಮ್ಮಡಿ ಅವರು, ‘ಪುಸ್ತಕ ಓದುವ ಸಂಸ್ಕೃತಿ ಹೆಚ್ಚಾದಂತೆ ಬರಹಗಾರರು, ಪ್ರಕಾಶಕರು ಹಾಗೂ ಮುದ್ರಕರ ಸಂಖ್ಯೆ ಹೆಚ್ಚಾಗುತ್ತದೆ. ಪುಸ್ತಕಗಳೇ ಇತಿಹಾಸ ತಿಳಿಸುತ್ತ ಭವಿಷ್ಯದ ಸ್ಪಷ್ಟ ಕಲ್ಪನೆ ನೀಡಬಲ್ಲವು’ ಎಂದರು.
ಪ್ರಾಧಿಕಾರದ ಅಧ್ಯಕ್ಷರಾದ ಮಾನಸ, ‘ಪುಸ್ತಕ ಓದುವ ಸಂಸ್ಕೃತಿಯನ್ನು ಮನೆ-ಮನಕ್ಕೆ ತಲುಪಿಸುವುದೇ ಈ ಕಾರ್ಯಕ್ರಮದ ಉದ್ದೇಶ’ ಎಂದು ಹೇಳಿದರು.
ಮನೆಗೊಂದು ಗ್ರಂಥಾಲಯ ಬೆಳಗಾವಿ ಜಿಲ್ಲಾ ಜಾಗೃತ ಸಮಿತಿ ಸಂಚಾಲಕರಾಗಿ ಶಂಕರ ಬಾಗೇವಾಡಿ, ಸದಸ್ಯರಾಗಿ ಕವಿತಾ ಕುಸುಗಲ್, ಶೋಭಾ ನಾಯಕ, ಪಿ.ನಾಗರಾಜ್, ಸಂತೋಷ ನಾಯಕ, ನದೀಮ್ ಸನದಿ, ವಿನೋದ ಪಾಟೀಲ, ಜಗದೀಶ ಹೊಸಮನಿ, ಲಲಿತಾ ಕ್ಯಾಸನ್ನವರ ಹಾಗೂ ಸುಮಿತ್ರಾ ಮುಗಳಖೋಡ ಅವರನ್ನು ನೇಮಕ ಮಾಡಲಾಯಿತು.
ಎಚ್.ಬಿ.ಕೋಲಕಾರರ, ಮಂಜುನಾಥ ಪಾಟೀಲ, ಬಾಲಕೃಷ್ಣ ನಾಯಕ, ರೇಣುಕಾ ಮಜಲಟ್ಟಿ, ತೇಜಸ್ವಿನಿ ಬಾಗೇವಾಡಿ ಪಾಲ್ಗೊಂಡಿದ್ದರು. ಶ್ರೀನಿವಾಸ ಕರಿಯಪ್ಪ ಸ್ವಾಗತಿಸಿದರು. ಪ್ರಾಧಿಕಾರದ ಸದಸ್ಯ ಕುಶಾಲ ಬರಗೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಬಾಗೇವಾಡಿ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ.ದೇಮಣ್ಣ ಸೊಗಲದ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.