ADVERTISEMENT

ಬೆಳಗಾವಿ: ಚೇತರಿಸಿಕೊಳ್ಳದ ಹೋಟೆಲ್‌, ಶೇ80ರಷ್ಟು ಗ್ರಾಹಕರ ಕುಸಿತ

ಶ್ರೀಕಾಂತ ಕಲ್ಲಮ್ಮನವರ
Published 10 ಜೂನ್ 2020, 19:30 IST
Last Updated 10 ಜೂನ್ 2020, 19:30 IST
ಬೆಳಗಾವಿಯ  ಹೋಟೆಲ್‌ವೊಂದರಲ್ಲಿ ಗ್ರಾಹಕರ ಮಧ್ಯೆ ಅಕ್ರೊಲಿಕ್‌ ವಾಲ್‌ ನಿರ್ಮಿಸಿರುವುದು
ಬೆಳಗಾವಿಯ  ಹೋಟೆಲ್‌ವೊಂದರಲ್ಲಿ ಗ್ರಾಹಕರ ಮಧ್ಯೆ ಅಕ್ರೊಲಿಕ್‌ ವಾಲ್‌ ನಿರ್ಮಿಸಿರುವುದು   

ಬೆಳಗಾವಿ: ಲಾಕ್‌ಡೌನ್‌ ಸಡಿಲಿಕೆಯಿಂದ ಈಗಷ್ಟೇ ಆರಂಭಗೊಂಡಿರುವ ಹೋಟೆಲ್‌ಗಳಿಗೆ ಗ್ರಾಹಕರ ಕೊರತೆ ಕಾಡುತ್ತಿದೆ. ಲಾಕ್‌ಡೌನ್‌ ಜಾರಿಯಾಗುವುದಕ್ಕಿಂತ ಮುಂಚೆಗೆ ಹೋಲಿಸಿದರೆ ಶೇ 80ರಷ್ಟು ಗ್ರಾಹಕರ ಸಂಖ್ಯೆ ಕುಸಿದಿದೆ. ಮತ್ತೆ ಮೊದಲಿನಂತೆ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ತುಂಬಿ ತುಳುಕಬೇಕಾದರೆ 3– 4 ತಿಂಗಳಾದರೂ ಸಮಯಾವಕಾಶ ಬೇಕಾಗಬಹುದು ಎನ್ನುತ್ತಾರೆ ಹೋಟೆಲ್‌ ಉದ್ಯಮಿಗಳು.

ಕೋವಿಡ್‌– 19 ಹಿನ್ನೆಲೆಯಲ್ಲಿ ಮಾರ್ಚ್‌ 22ರಿಂದ ದೇಶದಾದ್ಯಂತ ಲಾಕ್‌ಡೌನ್‌ ಘೋಷಿಸಲಾಗಿತ್ತು. ಶಾಲಾ, ಕಾಲೇಜು, ಕಚೇರಿ, ಸಾರಿಗೆ, ಹೋಟೆಲ್‌ ಸೇರಿದಂತೆ ಜನರ ಓಡಾಟದ ಮೇಲೂ ನಿರ್ಬಂಧ ಹೇರಲಾಗಿತ್ತು. ಸುಮಾರು ಎರಡೂವರೆ ತಿಂಗಳ ನಂತರ ಹಂತಹಂತವಾಗಿ ಲಾಕ್‌ಡೌನ್‌ ಸಡಿಲಿಕೆ ಮಾಡಲಾಯಿತು. ಇದರ ಅಂಗವಾಗಿ ಸೋಮವಾರದಿಂದ ಹೋಟೆಲ್‌ಗಳ ಪುನರಾರಂಭಕ್ಕೆ ಅವಕಾಶ ನೀಡಲಾಗಿದೆ.

ಕೆಲಸಗಾರರು ಹಾಗೂ ಗ್ರಾಹಕರ ಕೊರತೆಯಿಂದಾಗಿ ಅರ್ಧದಷ್ಟು ಹೋಟೆಲ್‌ಗಳು ಇನ್ನೂ ಬಾಗಿಲು ತೆರೆದಿಲ್ಲ. ಇನ್ನುಳಿದವು ತೆರೆದಿದ್ದರೂ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಬೆರಳಣಿಕೆಯಷ್ಟು ಆಯ್ದ ತಿಂಡಿಗಳನ್ನು ಮಾತ್ರ ಪೂರೈಸುತ್ತಿವೆ. ರಾತ್ರಿ ಬೇಗನೇ ಬಾಗಿಲು ಹಾಕಿಕೊಳ್ಳುತ್ತಿವೆ. ಹೆಚ್ಚಿನ ಹೋಟೆಲ್‌ಗಳು ಪಾರ್ಸಲ್‌ ನೀಡುವುದನ್ನೇ ಮುಂದುವರಿಸಿವೆ.

ADVERTISEMENT

ಒಂದು ಅಂದಾಜಿನ ಪ್ರಕಾರ, ಜಿಲ್ಲೆಯಲ್ಲಿ 700ಕ್ಕೂ ಹೆಚ್ಚು ಹೋಟೆಲ್‌ಗಳಿವೆ. ಲಾಕ್‌ಡೌನ್‌ಗಿಂತ ಮುಂಚೆ ದಿನವೊಂದಕ್ಕೆ ಅಂದಾಜು 5 ಲಕ್ಷ ಜನರು ಹೋಟೆಲ್‌ಗಳಲ್ಲಿ ತಿಂಡಿ, ಊಟ ಮಾಡುತ್ತಿದ್ದರು. ಈಗ ಈ ಸಂಖ್ಯೆ 10 ಸಾವಿರವೂ ದಾಟಲಿಕ್ಕಿಲ್ಲ ಎನ್ನುತ್ತಾರೆ ಹೋಟೆಲ್‌ಗಳ ಮಾಲೀಕರು.

ಜನರಲ್ಲಿ ಕೋವಿಡ್‌–19 ಸೋಂಕಿನ ಭಯ ಇದೆ. ಅದಕ್ಕಾಗಿ ಬಹಳಷ್ಟು ಜನರು ಬೇರೆ ಬೇರೆ ಪ್ರದೇಶಗಳಿಗೆ ತೆರಳುವುದನ್ನು ಮನೆಯ ಹೊರಗೆ ಊಟ, ತಿಂಡಿ ಮಾಡುವುದನ್ನು ಕೂಡ ನಿಲ್ಲಿಸಿದ್ದಾರೆ. ಮತ್ತೊಂದೆಡೆ, ಬಸ್‌, ರೈಲು, ವಿಮಾನ ಸೇವೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ಹೀಗಾಗಿ, ಜನರ ಸಂಚಾರ ಕಡಿಮೆಯಾಗಿದ್ದರಿಂದ ಹೋಟೆಲ್‌ಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಗ್ರಾಹಕರು ಬರುತ್ತಿಲ್ಲ.

ಶೇ 50ರಷ್ಟು ಕಡಿತ:

ಸರ್ಕಾರದ ಮಾರ್ಗಸೂಚಿ ಪ್ರಕಾರ, ಹೋಟೆಲ್‌ಗಳಲ್ಲಿ ಗ್ರಾಹಕರ ನಡುವೆ ಪರಸ್ಪರ ಅಂತರ ಕಾಯ್ದುಕೊಳ್ಳಬೇಕಾಗಿದೆ. ಅದಕ್ಕಾಗಿ ಶೇ 50ರಷ್ಟು ಆಸನಗಳನ್ನು ಕಡಿತಗೊಳಿಸಲಾಗಿದೆ. ಇಬ್ಬರು ಅಥವಾ ನಾಲ್ಕು ಜನರಿಗೆ ಮಾತ್ರ ಒಂದು ಟೇಬಲ್‌ ಮೇಲೆ ಅವಕಾಶ ನೀಡಲಾಗಿದೆ. 8–10 ಜನರಿಗೆ ಅವಕಾಶ ನೀಡುತ್ತಿಲ್ಲ.

ಇದೇ ರೀತಿ ಹೋಟೆಲ್‌ನಲ್ಲಿ ಕೆಲಸಗಾರರ ಸಂಖ್ಯೆಯೂ ಕಡಿಮೆಯಾಗಿದೆ. ಕೆಲವು ಕಡೆ ಕೆಲಸಗಾರರು ತಮ್ಮ ಊರುಗಳಿಗೆ ವಾಪಸ್‌ ಹೋಗಿದ್ದರೆ, ಇನ್ನುಳಿದ ಕಡೆ ಹೋಟೆಲ್‌ನವರೇ ನಷ್ಟ ಕಡಿಮೆ ಮಾಡಿಕೊಳ್ಳಲು ಕೆಲಸಗಾರರನ್ನು ಅವರ ಮನೆಗೆ ಕಳುಹಿಸಿದ್ದಾರೆ.

ಸುರಕ್ಷತೆಗೆ ಆದ್ಯತೆ:

ಕಾರ್ಯಾರಂಭ ಮಾಡಿರುವ ಹೋಟೆಲ್‌ಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿಯೊಬ್ಬ ಗ್ರಾಹಕರಿಗೂ ಸ್ಯಾನಿಟೈಸರ್‌ ನೀಡಲಾಗುತ್ತಿದೆ. ಗ್ರಾಹಕರು ತೆರಳಿದ ನಂತರ ಅವರು ಕುಳಿತಿದ್ದ ಟೇಬಲ್‌ ಹಾಗೂ ಕುರ್ಚಿಗಳನ್ನು ಸ್ಯಾನಿಟೈಸ್‌ ಮಾಡಲಾಗುತ್ತಿದೆ. ಕಡಿಮೆ ಸಂಖ್ಯೆ ಕೆಲಸಗಾರರನ್ನು ಹಾಗೂ ಅಡುಗೆ ಭಟ್ಟರನ್ನು ಬಳಸಿಕೊಂಡು ಸೇವೆ ನೀಡಲಾಗುತ್ತಿದೆ. ಜನದಟ್ಟಣೆ ಉಂಟಾಗದಂತೆ ಎಚ್ಚರಿಕೆ ವಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.