ADVERTISEMENT

ಬೆಳಗಾವಿ: ಕೃಷ್ಣೆಗೆ ಸೇರುವ ನೀರಿನ ಪ್ರಮಾಣದಲ್ಲಿ ಏರಿಕೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 6:28 IST
Last Updated 16 ಅಕ್ಟೋಬರ್ 2020, 6:28 IST
ಕೃಷ್ಣಾ ನದಿ ನೀರಿನಿಂದ ಜಲಾವೃತವಾಗಿರುವ ಪ್ರದೇಶ
ಕೃಷ್ಣಾ ನದಿ ನೀರಿನಿಂದ ಜಲಾವೃತವಾಗಿರುವ ಪ್ರದೇಶ   

ಬೆಳಗಾವಿ: ಜಿಲ್ಲೆಯಲ್ಲಿ ಶುಕ್ರವಾರ ಮಳೆ ಕ್ಷೀಣಿಸಿದೆ.

ನಗರದಲ್ಲಿ ಗುರುವಾರ ರಾತ್ರಿಯಿಂದ ಜಿಟಿಜಿಟಿ ಮಳೆ ಬಿದ್ದಿತು. ಬೆಳಿಗ್ಗೆಯಿಂದಲೂ ಆಗಾಗ ಸಾಧಾರಣ ಮಳೆಯಾಗುತ್ತಿದೆ.

ಚಿಕ್ಕೋಡಿ ತಾಲ್ಲೂಕಿನಲ್ಲಿ ಗುರುವಾರ ರಾತ್ರಿಯಿಂದ ಮಳೆ ಪ್ರಮಾಣ ಗಣನೀಯವಾಗಿ ಕ್ಷೀಣಿಸಿದೆ. ಆದರೆ, ಮಹಾರಾಷ್ಟ್ರದಿಂದ ಕೃಷ್ಣಾ ಮತ್ತು ಉಪ ನದಿಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಮಾತ್ರ ನಿರಂತರ ಏರಿಕೆ ದಾಖಲಾಗುತ್ತಿದೆ.

ADVERTISEMENT

ಶುಕ್ರವಾರ ಬೆಳಿಗ್ಗೆ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 1.04 ಲಕ್ಷ ಮತ್ತು ದೂಧ್‌ಗಂಗಾ ನದಿಯಿಂದ 15,135 ಕ್ಯುಸೆಕ್ ಸೇರಿದಂತೆ ಆ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ 1.15 ಲಕ್ಷ ಕ್ಯುಸೆಕ್ ನೀರು ಸೇರುತ್ತಿದೆ. ಇದರಿಂದಾಗಿ ನದಿ ತೀರದ ಗ್ರಾಮಗಳಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.

ನಿಪ್ಪಾಣಿ ತಾಲ್ಲೂಕಿನ ‌ಕಾರದಗಾ ಮತ್ತು ಭೋಜ ಗ್ರಾಮಗಳ ಮಧ್ಯೆ ದೂಧ್‌ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಕಂ ಬ್ಯಾರೇಜ್ ಗುರುವಾರ ರಾತ್ರಿ ಮುಳುಗಿದೆ. ಪರ್ಯಾಯ ಮಾರ್ಗ ಇರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿಲ್ಲ.

ಕೆಲವು ಯುವಕರು, ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ‌ ಕೃಷ್ಣಾ ನದಿ ನೀರಿನಿಂದ ಜಲಾವೃತವಾಗಿರುವ ವಿದ್ಯುತ್‌ ಟವರ್ ಮೇಲಿನಿಂದ ಜಿಗಿದು ಈಜಾಡುವ ಮೂಲಕ ದುಸ್ಸಾಹಸ ಪ್ರದರ್ಶಿಸುತ್ತಿದ್ದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.