ADVERTISEMENT

ಬೆಳಗಾವಿ | ಸಾಂಬ್ರಾ ರಸ್ತೆಗೆ ₹50 ಕೋಟಿ ಅನುದಾನ; ಸತೀಶ ಜಾರಕಿಹೊಳಿ

ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 2:43 IST
Last Updated 16 ಆಗಸ್ಟ್ 2025, 2:43 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಬೆಳಗಾವಿ: ‘ಬೆಳಗಾವಿಯಿಂದ ಸಾಂಬ್ರಾವರೆಗಿನ ರಸ್ತೆಯನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸಲು ₹50 ಕೋಟಿ ಅನುದಾನ ಕೊಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೊಸ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕಾಗಿ ಪ್ರತಿವರ್ಷ ₹10 ಕೋಟಿ ಅನುದಾನ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 1 ಲಕ್ಷ ಹೆಕ್ಟೇರ್‌ ಕೃಷಿಭೂಮಿಗೆ ನೀರಾವರಿ ಸೌಕರ್ಯ ಕಲ್ಪಿಸುವ ಗುರಿ ಹೊಂದಿದ್ದು, ಕೆರೆ ತುಂಬಿಸುವ ಯೋಜನೆಗೆ ಆದ್ಯತೆ ನೀಡಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಬೆಳಗಾವಿಯಲ್ಲಿ ₹10 ಕೋಟಿ ವೆಚ್ಚದಲ್ಲಿ ಪತ್ರಿಕಾ ಭವನ ನಿರ್ಮಿಸಲಾಗುವುದು’ ಎಂದರು.

‘ಜಿಲ್ಲೆ ವಿಭಜನೆಯಾಗಬೇಕೆಂಬ ಆಸೆ ನಮಗೂ ಇದೆ. ಯಾವಾಗ ಬೇಡಿಕೆ ಈಡೇರುತ್ತದೆ ಎಂದು ನಿರ್ದಿಷ್ಟವಾಗಿ ಹೇಳಲಾಗದು. ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತದೆ. ಜೆ.ಎಚ್‌.ಪಟೇಲ್‌ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬೆಳಗಾವಿ ಜಿಲ್ಲೆ ವಿಭಜನೆಗೆ ಗೆಜೆಟ್‌ ಸಿದ್ಧವಾಗಿತ್ತು. ಅದರ ಪ್ರಕಾರ ಮೂರು ಪ್ರತ್ಯೇಕ ಜಿಲ್ಲೆ ರಚನೆಯಾಗಬೇಕು. ಈಗ ಏಳೆಂಟು ಜಿಲ್ಲೆಗಳಲ್ಲಿ ತಲಾ ಐದಾರು ವಿಧಾನಸಭೆ ಕ್ಷೇತ್ರಗಳಷ್ಟೇ ಇವೆ. ಬೆಳಗಾವಿ ವಿಭಜಿಸಿ, ಆರು ಮತಕ್ಷೇತ್ರಕ್ಕೊಂದು ಜಿಲ್ಲೆ ರಚಿಸಿದರೆ ಒಳ್ಳೆಯದು. 10 ವರ್ಷಗಳ ನಂತರ ಜಿಲ್ಲೆ ವಿಭಜಿಸುವ ಬದಲು ಈಗಲೇ ಕ್ರಮ ವಹಿಸುವುದು ಉತ್ತಮ’ ಎಂದರು.

ADVERTISEMENT

ಗೋಕಾಕದ ಸರ್ಕಾರಿ ಔಷಧ ಉಗ್ರಾಣದಲ್ಲಿ ₹97 ಲಕ್ಷ ಮೌಲ್ಯದ ಅವಧಿ ಮೀರಿದ ಔಷಧ ಪತ್ತೆಯಾಗಿರುವ ಕುರಿತ ಪ್ರಶ್ನೆಗೆ, ‘ಅವಧಿ ಮೀರಿದ ಔಷಧ ಸಂಗ್ರಹಿಸಬಾರದು. ಆರೋಗ್ಯ ಇಲಾಖೆ ಅಧಿಕಾರಿಗಳು ಇದನ್ನು ಗಮನಿಸಬೇಕಿತ್ತು. ಇದು ಅವರ ಜವಾಬ್ದಾರಿ’ ಎಂದು ಹೇಳಿದರು.

‘ಸರ್ಕಾರಿ ಜಮೀನುಗಳನ್ನು ಬೇರೆಯವರಿಗೆ ಮಾರಾಟ ಮಾಡಿದ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಉಗರಗೋಳ ಗ್ರಾಮಸ್ಥರಿಗೆ ಜಾನುವಾರುಗಳನ್ನು ಮೇಯಿಸಲು ಅಗತ್ಯವಿರುವ ಜಾಗ ಬಿಟ್ಟು, ಉಳಿದಿದ್ದನ್ನು ಯಲ್ಲಮ್ಮನ ಗುಡ್ಡ ಅಭಿವೃದ್ಧಿ ಕೆಲಸಕ್ಕೆ ತೆಗೆದುಕೊಳ್ಳುತ್ತೇವೆ. ಮಳೆನೀರು ದೇವಸ್ಥಾನಕ್ಕೆ ನುಗ್ಗುವುದನ್ನು ತಪ್ಪಿಸುತ್ತೇವೆ. ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಖ್ಯಮಂತ್ರಿಯಿಂದ ಉದ್ಘಾಟನೆ: ‘2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಚಾಲನೆ ಕೊಟ್ಟಿದ್ದ ವಿವಿಧ ಕಾಮಗಾರಿಗಳು ಈಗ ಪೂರ್ಣಗೊಂಡಿವೆ. ಮುಂದಿನ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಆಹ್ವಾನಿಸಿ, ಅವುಗಳನ್ನು ಉದ್ಘಾಟಿಸಲಾಗುವುದು’ ಎಂದು ತಿಳಿಸಿದರು.

‘ವೈದ್ಯರು, ತಾಂತ್ರಿಕ ಸಿಬ್ಬಂದಿ ಅಭಾವದಿಂದ ಜಿಲ್ಲಾಸ್ಪತ್ರೆ ಆವರಣದಲ್ಲಿನ ಸೂಪರ್‌ ಸ್ಪೆಷಾಲಿಟಿ ಉದ್ಘಾಟನೆಗೆ ಹಿನ್ನಡೆಯಾಗಿದೆ. ಈಗ ಕೆಲ ವಿಭಾಗ ಕಾರ್ಯಾರಂಭ ಮಾಡಿದ್ದು, ಶೀಘ್ರ ಅಧಿಕೃತವಾಗಿ ಉದ್ಘಾಟಿಸಲಾಗುವುದು. ಸಾರ್ವಜನಿಕರಿಗೆ ಸೇವೆ ಒದಗಿಸಲು ಇದನ್ನು ಖಾಸಗಿ ಸಂಸ್ಥೆಗೆ ಕೊಡುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಜಿಲ್ಲಾಸ್ಪತ್ರೆ ನಿರ್ವಹಣೆ ಜವಾಬ್ದಾರಿಯನ್ನು ಜಿಲ್ಲಾಧಿಕಾರಿ ಅಥವಾ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ವಹಿಸುವ ಕುರಿತು ಪರಿಶೀಲಿಸಲಾಗುವುದು’ ಎಂದರು.

ಮೇಲ್ಸೇತುವೆ: ಸೆಪ್ಟೆಂಬರ್‌ನಲ್ಲಿ ಚಾಲನೆ

‘ಬೆಳಗಾವಿಯಲ್ಲಿ ಮೊದಲ ಹಂತದ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಸಂಕಮ್‌ ಹೋಟೆಲ್‌ನಿಂದ ಆರಂಭವಾಗಿ ಅಶೋಕ ವೃತ್ತ ಸಂಗೊಳ್ಳಿ ರಾಯಣ್ಣ ವೃತ್ತ ರಾಣಿ ಚನ್ನಮ್ಮನ ವೃತ್ತ ಮಾರ್ಗವಾಗಿ ಸಾಗಿ ಧರ್ಮವೀರ ಸಂಭಾಜಿ ವೃತ್ತದಲ್ಲಿ(4.5 ಕಿ.ಮೀ) ಮುಕ್ತಾಯವಾಗುತ್ತದೆ. ಇದಕ್ಕೆ ಲೋಕೋಪಯೋಗಿ ಇಲಾಖೆಯಿಂದ ₹200 ಕೋಟಿ ವ್ಯಯಿಸುತ್ತಿದ್ದು ಸೆಪ್ಟೆಂಬರ್‌ನಲ್ಲಿ ಕಾಮಗಾರಿಗೆ ಚಾಲನೆ ಸಿಗಲಿದೆ’ ಎಂದು ಸತೀಶ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.