ADVERTISEMENT

‍ಪಕ್ಷದ ಚಿಹ್ನೆಯಲ್ಲಿ ಸ್ಪರ್ಧೆ- ಪಟ್ಟಿ ಬಿಡುಗಡೆ ನಾಳೆ: ಸತೀಶ ಜಾರಕಿಹೊಳಿ

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2021, 16:14 IST
Last Updated 21 ಆಗಸ್ಟ್ 2021, 16:14 IST

ಬೆಳಗಾವಿ: ‘ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಚಿಹ್ನೆಯಡಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಭಾನುವಾರ (ಆ.22) ಸಂಜೆ ವೇಳೆಗೆ ಪಟ್ಟಿ ಬಿಡುಗಡೆ ಮಾಡಲಾಗುವುದು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು.

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಶನಿವಾರ ನಡೆದ ಮುಖಂಡರ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಉಸ್ತುವಾರಿ ಸಚಿವನಾಗಿ ಬಹಳಷ್ಟು ಕೆಲಸ ಮಾಡಿದ್ದೇನೆ. ಅದೇ ರೀತಿ ಶಾಸಕರಾಗಿದ್ದ ಫಿರೋಜ್ ಸೇಠ್ ಜೊತೆಗೂಡಿ ನಗರವನ್ನು ಸಾಕಷ್ಟು ಅಭಿವೃದ್ಧಿಪಡಿಸಿದ್ದೇವೆ. ಇವೆಲ್ಲವೂ ಈ ಚುನಾವಣೆಯಲ್ಲಿ ಶ್ರೀರಕ್ಷೆ ಆಗಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ಶಾಸಕರನ್ನು ವಾರ್ಡ್‌ಗಳಿಗೆ ನಿಯೋಜಿಸಿ ಜವಾಬ್ದಾರಿ ನೀಡುವ ಅಗತ್ಯವಿಲ್ಲ. ಮತ ಹಾಕುವವರು ಸ್ಥಳೀಯರು. ಶಾಸಕರು ಹೋಗಿ ಎನನ್ನೂ ಮಾಡಲಾಗದು. ನಮ್ಮೊಂದಿಗೆ ಕಾರ್ಯಕರ್ತರು ಮತ್ತು ಮುಖಂಡರಿದ್ದಾರೆ. ಸ್ಥಳೀಯ ಮುಖಂಡರ ಜೊತೆಗೂಡಿ ಚುನಾವಣೆ ಮಾಡುತ್ತೇವೆ. ಇದೇ ಮೊದಲ ಬಾರಿಗೆ ಪಕ್ಷದಿಂದ ಸ್ಪರ್ಧಿಸುತ್ತಿದ್ದೇವೆ. ಆರ್‌ ಅಂಡ್ ಡಿ (ಅಭಿವೃದ್ಧಿ ಮತ್ತು ಸಂಶೋಧನೆ) ಏನಾಗುತ್ತದೆ ಎನ್ನುವುದನ್ನು ನೋಡೋಣ. ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿದೆ’ ಎಂದು ಪ್ರತಿಕ್ರಿಯಿಸಿದರು.

‘ಪಕ್ಷದ ಟಿಕೆಟ್‌ಗೆ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಎಂಇಎಸ್‌ನವರಿಗೆ ಟಿಕೆಟ್ ನೀಡುವ ಪ್ರಶ್ನೆ ಇಲ್ಲ. ನಮ್ಮ ಕಾರ್ಯಸೂಚಿ ಮೇಲೆ ಎದುರಿಸುತ್ತೇವೆ’ ಎಂದು ಸ್ಪಷ್ಟಪಡಿಸಿದರು.

‘ಸಮಾಜ ಸೇವೆ ಮಾಡಿದವರು ಹಾಗೂ ಸಕ್ರಿಯವಾಗಿರುವ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಲಾವುದು’ ಎಂದರು.

ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ‘ಹುಬ್ಬಳ್ಳಿ-ಧಾರವಾಡ ನಗರಪಾಲಿಕೆ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದೆ. ಬೆಳಗಾವಿಯದು ಭಾನುವಾರ ಸಿದ್ಧವಾಗಲಿದೆ’ ಎಂದು ತಿಳಿಸಿದರು.

ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ, ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ, ಡಾ.ಅಂಜಲಿ ನಿಂಬಾಳ್ಕರ್, ಮಹಾಂತೇಶ ಕೌಜಲಗಿ, ಮುಖಂಡರಾದ ಫಿರೋಜ್ ಸೇಠ್, ರಾಜು ಸೇಠ್, ವೀರಕುಮಾರ್ ಪಾಟೀಲ, ವಿನಯ ನಾವಲಗಟ್ಟಿ, ಪ್ರದೀಪ್ ಎಂ.ಜೆ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.