ADVERTISEMENT

ಬೆಳಗಾವಿ | ಮಲಪ್ರಭಾ ನದಿ ಕಲುಷಿತ: ಸ್ವಚ್ಛತೆಗೆ ಜನರ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಜೂನ್ 2023, 12:49 IST
Last Updated 13 ಜೂನ್ 2023, 12:49 IST
ಖಾನಾಪುರ ಪಟ್ಟಣದ ಮಲಪ್ರಭಾ ನದಿಯಲ್ಲಿ ಮತ್ತು ನದಿತೀರದಲ್ಲಿ ಅಪಾರ ಪ್ರಮಾಣದ ತ್ಯಾಜ್ಯ ಸಂಗ್ರಹವಾಗಿದೆ
ಖಾನಾಪುರ ಪಟ್ಟಣದ ಮಲಪ್ರಭಾ ನದಿಯಲ್ಲಿ ಮತ್ತು ನದಿತೀರದಲ್ಲಿ ಅಪಾರ ಪ್ರಮಾಣದ ತ್ಯಾಜ್ಯ ಸಂಗ್ರಹವಾಗಿದೆ    

ಖಾನಾಪುರ: ಪಟ್ಟಣದ ಹೊರವಲಯದಲ್ಲಿ ಹರಿಯುವ ಮಲಪ್ರಭಾ ನದಿ ಮತ್ತು ನದಿತೀರ ಮಲೀನಗೊಂಡಿದೆ. ನದಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಕಸ ಮತ್ತು ತ್ಯಾಜ್ಯ ಸಂಗ್ರಹವಾಗಿದೆ.

ನದಿಯಲ್ಲಿ ಕಸ ಹರಡಿಕೊಂಡಿರುವ ಕಾರಣ ನದಿ ಮತ್ತು ನದೀತೀರದ ಪ್ರದೇಶ ಗಬ್ಬೆದ್ದು ದುರ್ನಾತ ಬೀರುತ್ತಿದೆ. ಮಳೆಗಾಲ ಆರಂಭವಾಗಲಿದ್ದು, ಕೂಡಲೇ ಕಲುಷಿತಗೊಂಡ ಮಲಪ್ರಭೆಯ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಪಟ್ಟಣದ ಸಾರ್ವಜನಿಕರು ತಾಲ್ಲೂಕು ಆಡಳಿತವನ್ನು ಆಗ್ರಹಿಸಿದ್ದಾರೆ.

ಮಲಪ್ರಭಾ ನದಿಯ ನೀರನ್ನು ಹುಬ್ಬಳ್ಳಿ ಧಾರವಾಡ ಅವಳಿ ನಗರಗಳು ಸೇರಿದಂತೆ ಉತ್ತರ ಕರ್ನಾಟಕದ ನೂರಾರು ಗ್ರಾಮಗಳ ಲಕ್ಷಾಂತರ ಜನರು ಸೇವಿಸುತ್ತಾರೆ. ಆದರೆ ಮಲಪ್ರಭಾ ನದಿ ತೀರದ ತಾಲ್ಲೂಕಿನ ಗ್ರಾಮಗಳಾದ ಜಾಂಬೋಟಿ, ಅಸೋಗಾ, ಪಾರಿಶ್ವಾಡ, ಖಾನಾಪುರ, ಯಡೋಗಾ ಭಾಗದವರು ನದಿಯ ನೀರನ್ನು ಸೇವಿಸದೇ ಬೋರವೆಲ್ ನೀರನ್ನು ಸೇವಿಸುತ್ತಿದ್ದಾರೆ.

ADVERTISEMENT

ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಅಂತರ್ಜಲ ನೀರಿನ ಮಟ್ಟ ಉತ್ತಮವಾಗಿದ್ದು, ಈ ಶುದ್ಧ ನೀರನ್ನು ಸೇವಿಸುವ ಜನರು ಆರೋಗ್ಯವಾಗಿದ್ದಾರೆ. ಹೀಗಾಗಿ ತಮ್ಮೂರಿನ ಬಳಿಯಲ್ಲೇ ಹರಿದುಹೋಗುವ ಮಲಪ್ರಭಾ ನದಿಯ ಪಾವಿತ್ರತೆಯ ಬಗ್ಗೆ ಸ್ಥಳೀಯ ಜನತೆ ತಲೆಕೆಡಿಸಿಕೊಳ್ಳುತ್ತಿಲ್ಲ. ಆದರೆ ಈ ನೀರನ್ನೇ ಅವಲಂಬಿಸಿರುವ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಇತರೆ ಭಾಗದ ಜನರು ಈ ನದಿಯ ನೀರನ್ನೇ ನೇರವಾಗಿ ಸೇವಿಸುವ ಕಾರಣ ನದಿಯ ಕಲುಷಿತ ನೀರು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಂಭವವಿದೆ ಎನ್ನುತ್ತಾರೆ ರೈತ ಮುಖಂಡ ಮಹಾಂತೇಶ ರಾಹೂತ.

ಪಟ್ಟಣದ ಹೊರವಲಯದಲ್ಲಿರುವ ಮಲಪ್ರಭಾ ನದಿತೀರಕ್ಕೆ ಬಟ್ಟೆ ಒಗೆಯಲು, ಪೂಜೆ ಸಲ್ಲಿಸಲು ಹಾಗೂ ವಾಹನ, ದನಕರುಗಳನ್ನು ತೊಳೆಯಲು ಭೇಟಿ ನೀಡುವ ಸಾರ್ವಜನಿಕರು ನದಿತೀರದಲ್ಲಿ ಕಸ ಎಸೆಯುತ್ತಿರುವ ಕಾರಣ ಈ ಪ್ರದೇಶ ಮಲೀನಗೊಂಡಿದೆ.

ನಿತ್ಯ ನದಿತಟದಲ್ಲಿ ಶವಸಂಸ್ಕಾರ, ಚರಂಡಿ ನೀರು, ಶೌಚಾಲಯದ ನೀರು, ಪ್ಲಾಸ್ಟಿಕ್ ಸೇರಿದಂತೆ ವಿವಿಧ ತ್ಯಾಜ್ಯವಸ್ತುಗಳನ್ನು ನದಿಗೆ ಸೇರಿಸುವುದು, ನದಿಯಿಂದ ಉಸುಕು ತೆಗೆಯುವುದು, ಕಾರ್ಖಾನೆಯ ರಾಸಾಯನಿಕ ತ್ಯಾಜ್ಯವನ್ನು ನೀರಿಗೆ ಸೇರಿಸುವುದು, ಸತ್ತ ಪ್ರಾಣಿಗಳ ದೇಹ ಎಸೆಯುವುದು, ಮೀನು ಮತ್ತು ಮಾಂಸದ ತ್ಯಾಜ್ಯ ಎಸೆಯುವುದು ಸೇರಿದಂತೆ ಅನೇಕ ಚಟುವಟಿಕೆಗಳನ್ನು ನಿರಾತಂಕವಾಗಿ ನಡೆಸಲಾಗುತ್ತಿದೆ. ಈ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂಬುದು ಸ್ಥಳೀಯ ಪರಿಸರವಾದಿಗಳ ಆಗ್ರವಾಗಿದೆ. 

ಖಾನಾಪುರ ಪಟ್ಟಣದ ಮಲಪ್ರಭಾ ನದಿ ತೀರವನ್ನು ಕಳೆದ ವಾರವೇ ಸ್ವಚ್ಛಗೊಳಿಸಲಾಗಿದೆ. ಹುಣ್ಣಿಮೆ ದಿನ ಭಕ್ತರು ನದಿಗೆ ಭೇಟಿ ನೀಡಿದ್ದರಿಂದ ಮತ್ತೆ ತ್ಯಾಜ್ಯ ಸಂಗ್ರಹವಾಗಿದೆ. ಕೂಡಲೇ ನದಿ ಹಾಗೂ ನದಿತೀರವನ್ನು ಸ್ವಚ್ಛಗೊಳಿಸಲಾಗುವುದು. -ಎಸ್.ಆರ್ ಪಾಟೀಲ ಆರೋಗ್ಯ ನಿರೀಕ್ಷಕ ಪಟ್ಟಣ ಪಂಚಾಯ್ತಿ ಖಾನಾಪುರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.