ಜೈಲು (ಪ್ರಾತಿನಿಧಿಕ ಚಿತ್ರ)
ಬೆಳಗಾವಿ: ತಾಲ್ಲೂಕಿನ ಗೌಂಡವಾಡ ಗ್ರಾಮದಲ್ಲಿ ದೇವಸ್ಥಾನದ ಜಮೀನು ವಿವಾದಕ್ಕೆ ಸಂಬಂಧಿಸಿ ಸಾಮಾಜಿಕ ಕಾರ್ಯಕರ್ತ ಸತೀಶ ಪಾಟೀಲ ಎಂಬುವರನ್ನು ಕೊಲೆ ಮಾಡಿದ್ದ ಐವರು ಅಪರಾಧಿಗಳಿಗೆ ಇಲ್ಲಿನ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಗಂಗಾಧರ ಕೆ.ಎನ್. ಶನಿವಾರ ಕಠಿಣ ಜೀವಾವಧಿ ಶಿಕ್ಷೆ ಮತ್ತು ₹13.74 ಲಕ್ಷ ದಂಡ ವಿಧಿಸಿ ತೀರ್ಪು ಪ್ರಕಟಿಸಿದರು.
ಆನಂದ ಕುಟ್ರೆ, ಅರ್ಣವ್ ಕುಟ್ರೆ, ಜಯಪ್ಪ ಅಲಿಯಾಸ್ ಬಾಳು ನಿಲಜಕರ, ಮಹಾಂತೇಶ ಅಲಿಯಾಸ್ ಧನರಾಜ ನಿಲಜಕರ ಮತ್ತು ಶಶಿಕಲಾ ಅಲಿಯಾಸ್ ಅನಿತಾ ಕುಟ್ರೆ ಜೀವಾವಧಿ ಶಿಕ್ಷೆಗೆ ಗುರಿಯಾದವರು.
ಇದೇ ಪ್ರಕರಣದಲ್ಲಿ ಸುರೇಖಾ ನಿಲಜಕರ, ಸಂಜನಾ ನಿಲಜಕರ, ವಸಂತ ಪಾಟೀಲ, ಪರಶುರಾಮ ಮುತಗೇಕರ ಅವರಿಗೆ ಆರು ತಿಂಗಳ ಸಾದಾ ಶಿಕ್ಷೆ ಹಾಗೂ ತಲಾ ₹1 ಸಾವಿರ ದಂಡ ವಿಧಿಸಲಾಗಿದೆ. ಉಳಿದ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ.
2022ರ ಜೂನ್ 18ರಂದು 25 ಜನರ ಗುಂಪು ಸೇರಿ ಸತೀಶ ಪಾಟೀಲ ಹತ್ಯೆ ಮಾಡಿತ್ತು. ಕಾಕತಿ ಠಾಣೆ ಪೊಲೀಸರು ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ದಂಡದ ಮೊತ್ತದಲ್ಲಿ ಸಂತ್ರಸ್ತನ ಪತ್ನಿ ಪೂಜಾ ಮತ್ತು ಮಕ್ಕಳಿಗೆ ₹10.50 ಲಕ್ಷ ಪರಿಹಾರ, ಸಂತ್ರಸ್ತನ ತಾಯಿಗೆ ₹2.50 ಲಕ್ಷ ಪರಿಹಾರ ಮತ್ತು ಪ್ರಾಸಿಕ್ಯೂಷನ್ ಸಾಕ್ಷಿಯಾದ ನಂದು ನಿಲಜಕರ ಅವರಿಗೆ ₹25 ಸಾವಿರ ನೀಡಲಾಗುವುದು.
ಆರಂಭದಲ್ಲಿ ಸರ್ಕಾರಿ ಅಭಿಯೋಜಕ ಜಿ.ಕೆ.ಮಹುರಕರ ಪೂರ್ಣ ಪ್ರಮಾಣದಲ್ಲಿ ವಾದ ಮಂಡಿಸಿದ್ದರು. ಅವರು ಸೇವಾನಿವೃತ್ತಿ ಹೊಂದಿದ ನಂತರ ಸರ್ಕಾರಿ ಅಭಿಯೋಜಕಿ ನಸರೀನ್ ಬಂಕಾಪುರ ಅವರು, ಆರೋಪಿಗಳ ವಾದಕ್ಕೆ ಉತ್ತರ ನೀಡಿದ್ದರು. ಸರ್ಕಾರಿ ಅಭಿಯೋಜಕಿ ಭಾರತಿ ಹೊಸಮನಿ ಅವರು, ನ್ಯಾಯಾಲಯ ತೀರ್ಪು ವಿಧಿಸಲು ಸಹಾಯ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.