ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಪಡೆದ ಮಹಾರಾಷ್ಟ್ರದ ಸ್ವಪ್ನಿಲ್ ಕುಸಾಳೆ ಅವರ ತಂದೆ ಸುರೇಶ, ತಾಯಿ ಅನಿತಾ ಹಾಗೂ ಕುಟುಂಬದವರು ಸಿಹಿ ತಿಂದು ಸಂಭ್ರಮಿಸಿದ್ದು ಹೀಗೆ
ನಿಪ್ಪಾಣಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಕಾಂಬಳವಾಡಿ ಗ್ರಾಮದ ಸ್ವಪ್ನಿಲ್ ಕುಸಾಳೆ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 50 ಮೀಟರ್ ರೈಫಲ್–3 ಪೋಜಿಶನ್‌ನಲ್ಲಿ ಕಂಚಿನ ಪದಕ ಗೆದ್ದ ಹಿನ್ನೆಲೆಯಲ್ಲಿ ಸಂಭ್ರಮ ಮೂಡಿದೆ.
ಕೊಲ್ಹಾಪುರ ಜಿಲ್ಲೆಯ ರಾಧಾನಗರಿ ತಾಲ್ಲೂಕಿನ ಚಿಕ್ಕ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಸ್ವಪ್ನಿಲ್ ಅವರು ಊರಿಗೆ ವಿಶ್ವ ಮಟ್ಟದಲ್ಲಿ ಕೀರ್ತಿ ತಂದಿದ್ದಾರೆ.
‘ಪ್ರಜಾವಾಣಿ’ ಜತೆಗೆ ಸಂತಸ ಹಂಚಿಕೊಂಡ ಸ್ವಪ್ನಿಲ್ ಅವರ ತಂದೆ, ಶಿಕ್ಷಕ ಸುರೇಶ ಕುಸಾಳೆ, ‘ನಾಸಿಕ್‌ನ ಭೋಸ್ಲಾ ಸೈನಿಕ ಶಾಲೆಯಲ್ಲಿ 9ನೇ ತರಗತಿಯಲ್ಲಿ ಪ್ರಥಮ ಬಾರಿಗೆ ರಾಜ್ಯಮಟ್ಟದ ಚಿನ್ನದ ಪದಕ ಗೆದ್ದಾಗ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕನಸು ಕಂಡಿದ್ದ. ಇಂದು ನನಸಾಗಿದೆ. ಬಾಲ್ಯದಿಂದಲೂ ಅವನಿಗೆ ಕ್ರೀಡೆಯಲ್ಲಿ ಅತ್ಯಂತ ಆಸಕ್ತಿ’ ಎಂದರು.
ಸ್ವಪ್ನಿಲ್ ತಾಯಿ, ಕಾಂಬಳವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ, ‘ಸ್ವಪ್ನಿಲ್ ಫೈನಲ್ ತಲುಪಿದ್ದು ಹರ್ಷ ತಂದಿದೆ. ಮುಂದೆ ಚಿನ್ನ ಗೆಲ್ಲುವ ಕನಸು ನನಸಾಗುವ ಭರವಸೆ ಮೂಡಿದೆ’ ಎಂದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.