ಬೆಳಗಾವಿ: ‘ಮಾನವ ಕಳ್ಳಸಾಗಣೆ ಹಾಗೂ ಜೀತ ಪದ್ಧತಿಯನ್ನು ಕಟ್ಟುನಿಟ್ಟಾಗಿ ತಡೆಯಬೇಕಿದೆ. ಇದಕ್ಕೆ ಇರುವ ಕಾನೂನು ಅರಿಯುವುದು ಬಹಳ ಮುಖ್ಯ’ ಎಂದು ಕಾಯಂ ಜನತಾ ನ್ಯಾಯಾಲಯದ ಗೌರವ ಅಧ್ಯಕ್ಷ ಪಲ್ಲೇದ ರವೀಂದ್ರ ಜಡಿಯಪ್ಪ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಸ್ಪಂದನ ಸಂಸ್ಥೆ ಆಶ್ರಯದಲ್ಲಿ ಮಾನವ ಕಳ್ಳ ಸಾಗಾಣಿಕೆ ಹಾಗೂ ಜೀತ ಕಾರ್ಮಿಕ ಪದ್ಧತಿ ಹಾಗೂ ಅಂತರರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ, ಇಲ್ಲಿನ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಬುಧವಾರ ಸ್ವಯಂ ಸೇವಾ ಸಂಸ್ಥೆಗಳಿಗೆ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ರಾಜ್ಯ ಉನ್ನತ ಸಮಿತಿ ಸದಸ್ಯ ವಿಲಿಯಂ ಕ್ರಿಸ್ಟೋಫರ್, ‘ಹೆಣ್ಣು ಮಕ್ಕಳ ಮೇಲೆ ನಡೆಯುವ ಶೋಷಣೆ, ಅಸಮಾನತೆ, ತಾರತಮ್ಯ ನೀತಿ ಪ್ರಸ್ತುತ ಸಮಾಜದಲ್ಲಿ ಹೆಚ್ಚಾಗಿವೆ. ಇವೆಲ್ಲವುಗಳನ್ನು ತಡೆಗಟ್ಟುವಲ್ಲಿ ಸರ್ಕಾರದ ಪಾತ್ರ ಮಹತ್ವದ್ದಾಗಿದ್ದರೂ ಸಾರ್ವಜನಿಕರ ಸಹಕಾರ ಬಹಳ ಮುಖ್ಯವಾಗಿದೆ’ ಎಂದರು.
ವಿ. ಸುಶೀಲ ಮಾತನಾಡಿ, ‘ಇನ್ನೂ ಇಂತಹ ಸಾಮಾಜಿಕ ಸಮಸ್ಯೆಗಳು ನಮ್ಮ ಮಧ್ಯೆ ತಾಂಡವಾಡುತ್ತಿರುವ ಕಾರಣ ತಡೆಗಟ್ಟುವ ಕಾರ್ಯಗಾರಗಳನ್ನು ಹಮ್ಮಿಕೊಳ್ಳುವ ಅವಶ್ಯಕತೆ ಇದೆ. ಸ್ವಯಂ ಸೇವಕರು ಸದುಪಯೋಗ ಪಡಿಸಿಕೊಂಡು ಕಾರ್ಯಪ್ರವೃತ್ತ ರಾಗಬೇಕು’ ಎಂದು ತಿಳಿಸಿದರು.
ಡಾ.ಪರ್ವಿನ್ ಮಾತನಾಡಿದರು. ಸ್ಪಂದನ ಸಂಸ್ಥೆ ಸಂಯೋಜಕ ಕರೆಪ್ಪ ಮಾದಿಗರ ಕಾರ್ಯಕ್ರಮ ನಿರೂಪಿಸಿದರು. ಪರಶುರಾಮ ಬಿಸನಕೊಪ್ಪ ಸ್ವಾಗತಿಸಿದರು. ವಿವಿಧ ಜಿಲ್ಲೆಗಳಿಂದ ಹಲವಾರು ಸ್ವಯಂ ಸೇವಕರು ಕಾರ್ಯಾಗಾರದಲ್ಲಿ ಪಾಲ್ಗೊಂಡರು.
ಪ್ರತಿಯೊಂದು ಹೆಣ್ಣು ಮಗುವೂ ತನ್ನ ಪೂರ್ಣ ಸಾಮರ್ಥ್ಯವನ್ನು ತಲುಪಲು ಸಾಮಾಜಿಕ ವಾತಾವರಣವನ್ನು ನಿರ್ಮಿಸುವತ್ತ ನಾವು ಗಮನಹರಿಸಬೇಕುವಿಲಿಯಂ ಕ್ರಿಸ್ಟೋಫರ್ ರಾಜ್ಯ ಉನ್ನತ ಸಮಿತಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.