ADVERTISEMENT

ಬೆಳಗಾವಿ: ಮತ್ತೆ 392 ಮಂದಿಗೆ ಕೋವಿಡ್ ದೃಢ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 14:37 IST
Last Updated 7 ಆಗಸ್ಟ್ 2020, 14:37 IST

ಬೆಳಗಾವಿ: ಜಿಲ್ಲೆಯಲ್ಲಿ ಹೊಸದಾಗಿ 392 ಮಂದಿಗೆ ಕೋವಿಡ್–19 ಸೋಂಕು ದೃಢಪಟ್ಟಿದೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 3,498ಕ್ಕೆ ಏರಿದೆ.

ಇಲ್ಲಿನ ವಿವಿಧ ಬಡಾವಣೆಗಳು ಮತ್ತು ತಾಲ್ಲೂಕಿನಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದಿವೆ.

ನಗರದ ಗುರುಪ್ರಸಾದ ಕಾಲೊನಿ, ವಿಶ್ವಕರ್ಮ ಕಾಲೊನಿ, ತಾಲ್ಲೂಕಿನ ಕೆಎಸ್‌ಆರ್‌ಪಿ ಮಚ್ಚೆ, ಸಾಂಬ್ರಾದ ಏರ್‌ಮನ್‌ ತರಬೇತಿ ಶಾಲೆ, ರಾಮದುರ್ಗ, ಗೋಕಾಕ, ಅಥಣಿ, ರಾಯಬಾಗ, ಖಾನಾಪುರ, ಸವದತ್ತಿ, ಬೈಲಹೊಂಗಲ ತಾಲ್ಲೂಕುಗಳಲ್ಲಿ ಸೋಂಕು ದೃಢಪಟ್ಟಿರುವುದು ವರದಿಯಾಗಿದೆ.

ADVERTISEMENT

ಅಂಕಲಗಿ ಪೊಲೀಸ್ ಠಾಣೆಯ ಮೂವರಿಗೆ ದೃಢ‍ಪಟ್ಟಿದೆ.

ಸವದತ್ತಿ ತಾಲ್ಲೂಕಿನ ಮುನವಳ್ಳಿಯಲ್ಲೂ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. ಎಲ್ಲರನ್ನೂ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸೋಂಕಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ತಾಲ್ಲೂಕಿನ 54 ಹಾಗೂ 44 ವರ್ಷದ ವ್ಯಕ್ತಿಗಳಿಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಖಾನಾಪುರ ವರದಿ

ಇಟಗಿ ಗ್ರಾಮ ಪಂಚಾಯಿತಿಯ ಇಬ್ಬರು ಸಿಬ್ಬಂದಿ ಸೇರಿದಂತೆ ತಾಲ್ಲೂಕಿನ ಒಟ್ಟು 15 ಮಂದಿಗೆ ಶುಕ್ರವಾರ ಕೋವಿಡ್-19 ದೃಢಪಪಟ್ಟಿದೆ. ಇದರೊಂದಿಗೆ ತಾಲ್ಲೂಕಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 109ಕ್ಕೆ ಏರಿದೆ. ಇವರ ಪೈಕಿ ನಾಲ್ವರು ಮೃತರಾಗಿದ್ದಾರೆ. 32 ಮಂದಿ ಗುಣಮುಖರಾಗಿದ್ದಾರೆ.

ಪಟ್ಟಣದ ವಿವಿಧ ಬಡಾವಣೆಗಳ 7 ಮಂದಿ, ಮಾಚಿಗಡ, ಗಣೇಬೈಲ ಗ್ರಾಮದ ಇಬ್ಬರು, ನಿಡಗಲ್ ಯುವತಿ, ಲೋಂಡಾದ ಮಹಿಳೆ ಸೋಂಕಿತರಾಗಿದ್ದು, ಅವರನ್ನು ನಂದಗಡದ ಸಂಗೊಳ್ಳಿರಾಯಣ್ಣ ವಸತಿ ಶಾಲೆಯ ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಿಸಲಾಗಿದೆ. ಸೊಂಕಿತರ ಕಚೇರಿ, ವಾಸವಿದ್ದ ಮನೆ ಹಾಗೂ ಸುತ್ತಲಿನ ಪ್ರದೇಶಗಳನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ. ಅವರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಮೂಡಲಗಿ ವರದಿ: ಪಟ್ಟಣದ ಇಬ್ಬರು ಮಹಿಳೆಯರು, ಒಬ್ಬ ಬಾಲಕ ಸೇರಿ ಐವರಿಗೆ ಕೋವಿಡ್ ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.