
ಬೆಳಗಾವಿ: ಬೆಳಗಾವಿ ನಗರವನ್ನು ಇನ್ನಷ್ಟು ಸುರಕ್ಷಿತ ಮಾಡಲು ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಅವರು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಈಗಾಗಲೇ ಚೂರಿ ಇರಿತ ತಡೆಗೆ ತಂಡ ಹಾಗೂ ವಾಹನ ದಟ್ಟಣೆ ನಿಯಂತ್ರಣಕ್ಕೆ ವಿಶೇಷ ಪ್ರಯತ್ನ ಮಾಡಿ ಯಶಸ್ವಿಯಾಗಿರುವ ಪೊಲೀಸರು, ಈಗ ಕಳ್ಳತನ ತಡೆಗೆ ಅಂಥದ್ದೇ ಉಪಾಯ ಹೂಡಿದ್ದಾರೆ.
82779 51146 ಇದು ಬೆಳಗಾವಿ ನಗರದ ಕಂಟ್ರೋಲ್ ರೂಂ ವಾಟ್ಸ್‌ಆ್ಯಪ್ ಸಂಖ್ಯೆ. ಮನೆಗೆ ಕೀಲಿ ಹಾಕುವ ಮುನ್ನ ಕುಟುಂಬದ ಒಬ್ಬರು ಈ ನಂಬರ್‌ಗೆ ಮೆಸೇಜ್ ಕಳಿಸಬೇಕು. ಜತೆಗೆ ಮನೆಯ ವಿಳಾಸ, ಗೂಗಲ್ ಲೊಕೇಷನ್‌ಗಳನ್ನೂ ಕಳಿಸಬೇಕು. ಎಷ್ಟು ದಿನ ಮನೆಯಿಂದ ಹೊರಗೆ ಇರುತ್ತೇವೆ ಎಂಬುದನ್ನೂ ಕಳುಹಿಸಬೇಕು.
ಇನ್‌ಸ್ಪೆಕ್ಟರ್ ಹುದ್ದೆಯ ಅಧಿಕಾರಿಯೊಬ್ಬರು ಈ ನಂಬರ್‌ನಲ್ಲಿ ಬರುವ ಎಲ್ಲ ಮೆಸೇಜ್‌ಗಳನ್ನು ‘ರಿಸೀವ್’ ಮಾಡಿಕೊಳ್ಳುತ್ತಾರೆ. ಎಲ್ಲ ಮಾಹಿತಿಗಳನ್ನೂ ಗೌಪ್ಯವಾಗಿ ಇಟ್ಟುಕೊಳ್ಳಲಾಗುತ್ತದೆ. ನೀವು ಊರಿಗೆ ಹೋದ ಮೇಲೆ ನಿಮ್ಮ ಮನೆಗೆ ಪೊಲೀಸ್ ಭದ್ರತೆ ಒದಗಿಸಲಾಗುತ್ತದೆ. ಹೀಗಾಗಿ, ಜನ ನಿಶ್ಚಿಂತೆಯಿಂದ ಊರಿಗೆ ಹೋಬಹುದು ಎನ್ನುತ್ತಾರೆ ಅಧಿಕಾರಿಗಳು.
ಕೀಲಿ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನಗಳು ಹೆಚ್ಚಾಗುತ್ತಿವೆ. ಇದನ್ನು ತಪ್ಪಿಸಲು ಈ ಪ್ರಯೋಗ ನಡೆದಿದೆ. ಸಾಮಾನ್ಯವಾಗಿ ತಡರಾತ್ರಿ 1 ಗಂಟೆಯಿಂದ ನಸುಕಿನ 4 ಗಂಟೆಯ ಮಧ್ಯದಲ್ಲೇ ಕಳ್ಳತನಗಳು ಹೆಚ್ಚಾಗುತ್ತವೆ. ಜನರು ಗಾಢ ನಿದ್ದೆಯಲ್ಲಿ ಇರುತ್ತಾರೆ ಎಂಬುದೇ ಇದಕ್ಕೆ ಕಾರಣ. ಹೀಗಾಗಿ, ಪೊಲೀಸರು ಇದೇ ಸಮಯದಲ್ಲಿ ಕನಿಷ್ಠ ಎರಡು ಬಾರಿ ಮನೆಗೆ ಭೇಟಿ ನೀಡಿ, ಸುತ್ತಲಿನ ಪರಿಸರ ಪರಿಶೀಲನೆ ಮಾಡುತ್ತಾರೆ.
ಹಗಲು– ರಾತ್ರಿ, ಒಂದೆರಡು ದಿನ ರಜೆ ಹೋಗುವವರು, ಜಾತ್ರೆ– ಉತ್ಸವ, ಪ್ರವಾಸ, ಮದುವೆ ಮುಂತಾದ ಕಾರ್ಯಕ್ರಮಗಳಿಗೆ ವಾರಗಟ್ಟಲೇ ಹೋಗುವವರು ಮನೆಗೆ ಬೀಗ ಜಡಿದೇ ಹೋಗುತ್ತಾರೆ. ಇಂಥ ಮನೆಗಳನ್ನೇ ಹೊಂಚು ಹಾಕುವ ಕದೀಮರು ಕನ್ನ ಹಾಕುತ್ತಾರೆ. ಎಲ್ಲಿ, ಯಾವಾಗ, ಯಾವ ರೀತಿ, ಎಂಥ ಮನೆಗಳ ಕಳವು ನಡೆದಿದೆ ಎಂಬುದನ್ನು ಸರಿಯಾಗಿ ಪರಿಶೀಲಿಸಿ ನೋಡಿರುವ ಭೂಷಣ ಬೊರಸೆ ಅವರಿಗೆ ಈ ಹೊಸ ಉಪಾಯ ಹೊಳೆದಿದೆ.
ವಿಡಿಯೊ ಪ್ರಚಾರ: ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಖುದ್ದಿ ವಿಡಿಯೊ ಹಂಚಿಕೊಂಡಿರುವ ಭೂಷಣ ಅವರು, ಸಾರ್ವಜನಿಕರ ಸಹಕಾರ ಕೋರಿದ್ದಾರೆ. ಮನೆ ಬಿಟ್ಟು ಹೋಗುವಾಗ ‘ಬರ್ಗಲರ್ ಅಲಾರಾಂ’ ಅಳವಡಿಸಿ ಹೋಗಬಹುದು ಎಂದೂ ತಿಳಿಸಿದ್ದಾರೆ. ಮಾತ್ರವಲ್ಲ; ಈ ಅಲಾರಾಂಗಳು ಅಮೆಜಾನ್, ಪ್ಲಿಪ್‌ಕಾರ್ಟ್‌ನಲ್ಲಿ ಎಲ್ಲಿ ಸಿಗುತ್ತವೆ ಎಂಭ ಲಿಂಕ್‌ಅನ್ನೂ ಶೇರ್ ಮಾಡಿದ್ದಾರೆ.
ಯಾರಾದರೂ ಅನುಮಾನಾಸ್ಪದ ವ್ಯಕ್ತಿಗಳು ಸುಳಿದಾಡುತ್ತಿದ್ದರೆ 112 ಸಂಖ್ಯೆಗೆ ಫೋನ್ ಮಾಡಿ ತಿಳಿಸುವಂತೆಯೂ ಅವರು ಸಲಹೆ ನೀಡಿದ್ದಾರೆ. ಈ ಹೊಸ ಬೀಟ್ ವ್ಯವಸ್ಥೆಯು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪ್ರದೇಶಗಳಿಗೆ ಮಾತ್ರ ಅನ್ವಯ ಆಗಲಿದೆ.
ಕಳ್ಳತನ ತಡೆ ಹಾಗೂ ಜನರಿಗೆ ಸುರಕ್ಷತೆ ಒದಗಿಸಲು ಲಾಕ್ಡ್ ಹೌಸ್ ಬೀಟ್ ಸಿಸ್ಟಂ (ಎಲ್‌ಎಚ್‌ಬಿಎಸ್) ಜಾರಿಗೆ ತರಲಾಗಿದೆ. ಜನರು ಸಹಕರಿಸಿದರೆ ಬೆಳಗಾವಿ ಇನ್ನಷ್ಟು ಸುರಕ್ಷಿತಭೂಷಣ ಬೊರಸೆ ನಗರ ಪೊಲೀಸ್ ಕಮಿಷನರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.