ADVERTISEMENT

ವಿಧಾನ ಪರಿಷತ್‌ ಚುನಾವಣೆ ಬೆನ್ನಲ್ಲೇ ರಮೇಶ ಜಾರಕಿಹೊಳಿ–ಕಾಗೆ ಭೇಟಿ: ಕುತೂಹಲ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2021, 12:38 IST
Last Updated 18 ನವೆಂಬರ್ 2021, 12:38 IST
ರಮೇಶ ಜಾರಕಿಹೊಳಿ ಮತ್ತು ಭರಮಗೌಡ (ರಾಜು) ಕಾಗೆ
ರಮೇಶ ಜಾರಕಿಹೊಳಿ ಮತ್ತು ಭರಮಗೌಡ (ರಾಜು) ಕಾಗೆ    

ಬೆಳಗಾವಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ, ಗೋಕಾಕದ ಶಾಸಕ ರಮೇಶ ಜಾರಕಿಹೊಳಿ ಅವರು ಕಾಗವಾಡದ ಕಾಂಗ್ರೆಸ್‌ ನಾಯಕ ಭರಮಗೌಡ (ರಾಜು) ಕಾಗೆ ಅವರನ್ನು ಗುರುವಾರ ಭೇಟಿಯಾಗಿ ಚರ್ಚಿಸಿರುವುದು ಕುತೂಹಲ ಮೂಡಿಸಿದೆ. ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.

‌ಕಾಗವಾಡ ತಾಲ್ಲೂಕಿನ ಉಗಾರ ಖುರ್ದ್‌ ಪಟ್ಟಣದ ನಿವಾಸದಲ್ಲಿ ಕಾಗೆ ಅವರನ್ನು ರಮೇಶ ಭೇಟಿಯಾದರು. ‘ಸಹೋದರ ಲಖನ್‌ ಜಾರಕಿಹೊಳಿ ವಿಧಾನಪರಿಷತ್‌ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು ನೀವು ಬೆಂಬಲ ಕೊಡಬೇಕು’ ಎಂದು ಕೋರಿದ್ದಾರೆ ಎನ್ನಲಾಗುತ್ತಿದೆ.

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮಾಜಿ ಶಾಸಕ ರಾಜು ಕಾಗೆ ಹಾಗೂ ನಾನು ಹಳೆಯ ಸ್ನೇಹಿತರು. ಅವರಿಗೆ ಆರೋಗ್ಯ ಸರಿ ಇಲ್ಲದಿದ್ದಾಗ ಭೇಟಿ ಸಾಧ್ಯವಾಗಿರಲಿಲ್ಲ. ಅಥಣಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಗೆಳೆಯನ ನೆನಪಾಯಿತು. ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೇನೆ. ರಾಜಕೀಯ ಚರ್ಚೆ ನಡೆಸಿಲ್ಲ. ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ’ ಎಂದರು.

ADVERTISEMENT

‘ವಿಧಾನಪರಿಷತ್ ಚುನಾವಣೆಯಲ್ಲಿ ಅವರು ಅವರ ಪಕ್ಷದ ಪರ ಪ್ರಚಾರ ಕೈಗೊಳ್ಳುತ್ತಾರೆ. ನಾನು ಬಿಜೆಪಿ ಪರ ಪ್ರಚಾರ ಮಾಡುತ್ತೇನೆ. ಭೇಟಿಗೆ ರಾಜಕೀಯ ಬೆರೆಸುವುದು ಬೇಡ’ ಎಂದು ಕೋರಿದರು.

‘ನಾವಿಬ್ಬರೂ ಸ್ನೇಹಿತರು. ಆರೋಗ್ಯ ವಿಚಾರಿಸಲು ಅವರು ಬಂದಿದ್ದರು. ರಾಜಕೀಯ ವಿಷಯ ಚರ್ಚಿಸಿಲ್ಲ. ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಶಿಪಾಯಿ. ವಿಧಾನಪರಿಷತ್ ಚುನಾವಣೆಯಲ್ಲಿ ವರಿಷ್ಠರು ಯಾರಿಗೆ ಟಿಕೆಟ್‌ ಕೊಡುತ್ತಾರೋ ಅವರ ಪರ ಪ್ರಚಾರ ಮಾಡುತ್ತೇನೆ’ ಎಂದು ತಿಳಿಸಿದರು.

ಕಾಂಗ್ರೆಸ್ ಕಾಗವಾಡ ಬ್ಲಾಕ್ ಅಧ್ಯಕ್ಷ ವಿಜಯಕುಮಾರ ಅಕಿವಾಟೆ, ಮುಖಂಡರಾದ ಅಭಿನಂದನ ಪಾಟೀಲ ಮತ್ತು ಉತ್ತಮ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.