ADVERTISEMENT

ಧೈರ್ಯಶೀಲ ಮಾನೆ ವಿರುದ್ಧ ಆಕ್ರೋಶ

ಕರ್ನಾಟಕ ರಕ್ಷಣಾ ವೇದಿಕೆ ಬಣಗಳಿಂದ ಪ್ರತಿಭಟನೆ, ನಗರದಲ್ಲಿ ಅಣಕು ಶವಯಾತ್ರೆ ಮಾಡಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 2:29 IST
Last Updated 23 ಡಿಸೆಂಬರ್ 2025, 2:29 IST
ಬೆಳಗಾವಿಯಲ್ಲಿ ಸೋಮವಾರ ಕರವೇ ವಿವಿಧ ಬಣಗಳ ಕಾರ್ಯಕರ್ತರು ಧೈರ್ಯಶೀಲ ಮಾನೆ ಅವರ ಭಾವಚಿತ್ರಗಳಿಗೆ ಬೆಂಕಿ ಹಚ್ಚಿದರು
ಪ್ರಜಾವಾಣಿ ಚಿತ್ರ
ಬೆಳಗಾವಿಯಲ್ಲಿ ಸೋಮವಾರ ಕರವೇ ವಿವಿಧ ಬಣಗಳ ಕಾರ್ಯಕರ್ತರು ಧೈರ್ಯಶೀಲ ಮಾನೆ ಅವರ ಭಾವಚಿತ್ರಗಳಿಗೆ ಬೆಂಕಿ ಹಚ್ಚಿದರು ಪ್ರಜಾವಾಣಿ ಚಿತ್ರ   

ಬೆಳಗಾವಿ: ನಾಡ ವಿರೋಧಿ ಧೋರಣೆ ತಳೆದ ಮಹಾರಾಷ್ಟ್ರದ ಸಂಸದ ಧೈರ್ಯಶೀಲ ಮಾನೆ ಅವರನ್ನು ಸಂಸತ್‌ನಿಂದ ವಜಾಗೊಳಿಸಬೇಕು ಎಂದು ಆಗ್ರಹಹಿಸಿ, ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣ ಹಾಗೂ ಶಿವರಾಮೇಗೌಡ ಬಣಗಳ ಜಿಲ್ಲಾ ಘಟಕದಿಂದ ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಚನ್ನಮ್ಮ ವೃತ್ತದಲ್ಲಿ ದೈರ್ಯಶೀಲ ಮಾನೆ ಅವರ ಅಣಕು ಶವಯಾತ್ರೆ ನಡೆಸಿದ ಕಾರ್ಯಕರ್ತರು, ಅದರ ಮುಂದೆ ಕುಳಿತು ಬಾಯಿಬಾಯಿ ಬಡಿದುಕೊಂಡು ಅತ್ತರು. ಧೈರ್ಯಶೀಲ ಅವರ ಭಾವಚಿತ್ರಗಳಿಗೆ ಬೆಂಕಿ ಹಚ್ಚಿದರು. ಕಾರ್ಯಕರ್ತೆಯರು ಚಪ್ಪಲಿಯಿಂದ ಹೊಡೆದು ಆಕ್ರೋಶ ಹೊರಹಾಕಿದರು. ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಅಣಕು ಶವಯಾತ್ರೆ ಮಾಡಿದರು. ನಂತರ ಸಂಸದ ಜಗದೀಶ ಶೆಟ್ಟರ್‌ ಅವರಿಗೆ ಮನವಿ ಕೂಡ ಸಲ್ಲಿಸಿದರು.

‘ಬೆಳಗಾವಿಯಲ್ಲಿ ಎಂಇಎಸ್‌ ಮಾಡುವ ಕರಾಳ ದಿನಾಚರಣೆಯಲ್ಲಿ ಪಾಲ್ಗೊಳ್ಳಬಾರದು, ನಾಡವಿರೋಧಿ ಭಾಷಣ ಮಾಡಬಾರದು ಎಂಬ ಕಾರಣಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ಅವರು ಧೈರ್ಯಶೀಲ ಅವರನ್ನು ಗಡಿಪಾರು ಮಾಡಿದ್ದಾರೆ. ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧ ಹೇರಿದ್ದಾರೆ. ಇದನ್ನು ಖಂಡಿಸಿ ಧೈರ್ಯಶೀಲ ಅವರು ಲೋಕಸಭೆ ಸ್ಪೀಕರ್‌ಗೆ ಜಿಲ್ಲಾಧಿಕಾರಿ ವಿರುದ್ಧ ದೂರು ನೀಡಿದ್ದಾರೆ. ಹಕ್ಕುಚ್ಯುತಿ ಮಾಡಲಾಗಿದೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಇಂಥ ನಾಡದ್ರೋಹಿ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘‍ಧೈರ್ಯಶೀಲ ಅವರು ತಮ್ಮ ಕ್ಷೇತ್ರದ ಜನರ ಕೆಲಸ ಮಾಡುವುದನ್ನು ಬಿಟ್ಟು ಇಲ್ಲಿನ ಎಂಇಎಸ್‌ ಕಾರ್ಯಕರ್ತರಿಗೆ ಪ್ರಚೋದನೆ ನೀಡುತ್ತಿದ್ದಾರೆ. ಈ ಹಿಂದೆ ಅನಧಿಕೃತವಾಗಿ ಜಿಲ್ಲೆ ಪ್ರವೇಶ ಮಾಡಿ, ಕಾನೂನು ಬಾಹಿರ ಚಟುವಟಿಕೆ ನಡೆಸಿದ್ದಾರೆ. ಕನ್ನಡ ನೆಲದ ಮೇಲೆ ನಿಂತು ಕನ್ನಡಿಗರ ವಿರುದ್ಧ ಮಾತನಾಡುವ ಈ ರಾಜಕಾರಣಿ ಅಪರಾಧಿಯಾಗಿದ್ದಾರೆ’ ಎಂದು ಕರವೇ ನಾರಾಯಣಗೌಡ ಬಣದ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ್‌ ಗುಡಗನಟ್ಟಿ ಆಕ್ರೋಶ ಹೊರಹಾಕಿದರು.

ಶಿವರಾಮೇಗೌಡ ಬಣದ ಜಿಲ್ಲಾ ಘಟಕದ ಅಧ್ಯಕ್ಷ ವಾಜೀದ ಹೀರೆಕುಡಿ ಮಾತನಾಡಿ, ‘ಧೈರ್ಯಶೀಲ ಅವರು ಬೆಳಗಾವಿ ಜಿಲ್ಲಾಧಿಕಾರಿ ಬಗ್ಗೆ ಲೋಕಸಭಾ ಸ್ಪೀಕರ್ ಬಳಿ ತಪ್ಪು ಮಾಹಿತಿ ನೀಡಿದ್ದಾರೆ. ಇದನ್ನು ಎಲ್ಲ ಕನ್ನಡಪರ ಸಂಘಟನೆಗಳು ಖಂಡಿಸುತ್ತೇವೆ. ಕನ್ನಡಪರ ಸಂಘಟನೆಗಳು ನಮ್ಮ ಜಿಲ್ಲಾಧಿಕಾರಿ ಬೆಂಬಲವಾಗಿ ನಿಲ್ಲುತ್ತವೆ’ ಎಂದರು.

ಕಾರ್ಯಕರ್ತರಾದ ಕಸ್ತೂರಿಬಾಯಿ, ಸುರೇಶ ಗವನ್ನವರ, ಮಹಾದೇವ ತಳವಾರ, ಲೀನಾ ಟೋಪಣ್ಣವರ ಇತರರು ನೇತೃತ್ವ ವಹಿಸಿದ್ದರು.

‘ಮಾನೆ ನಡೆ ವಿರೋಧಿಸಿ ಸ್ಪೀಕರ್‌ಗೆ ಪತ್ರ’

‘ಮಹಾರಾಷ್ಟ್ರದ ಹಾತಕಣಗಲೆ ಸಂಸದ ಧೈರ್ಯಶೀಲ ಮಾನೆ ಅವರು ಬೆಳಗಾವಿ ಜಿಲ್ಲಾಧಿಕಾರಿ ವಿರುದ್ಧ ‘ಹಕ್ಕುಚ್ಯುತಿ’ ಆರೋಪ ಮಾಡಿ ಲೋಕಸಭೆ ಸ್ಪೀಕರ್‌ಗೆ ದೂರು ನೀಡಿದ್ದು ಸರಿಯಾದ ಕ್ರಮವಲ್ಲ. ನಮ್ಮ ಜಿಲ್ಲಾಧಿಕಾರಿ ನಡೆ ಕಾನೂನು ಬದ್ಧವಾಗಿದೆ. ಈ ಬಗ್ಗೆ ನಾನು ಕೂಡ ಸ್ಪೀಕರ್‌ಗೆ ಪತ್ರ ಬರೆಯುತ್ತೇನೆ’ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು. ಮಾಧ್ಯಮದವರ ಪ್ರಶ್ನೆಗೆ ಸೋಮವಾರ ಪ್ರತಿಕ್ರಿಯಿಸಿದ ಶೆಟ್ಟರ್‌ ಮಾನೆ ನಡೆಯೇ ಅಸಾಂವಿಧಾನಿಕ ಎಂದರು. ‘ಪ್ರತಿ ನವೆಂಬರ್‌ 1ರಂದು ಬೆಳಗಾವಿಯಲ್ಲಿ ಅದ್ಧೂರಿ ರಾಜ್ಯೋತ್ಸವ ಆಚರಿಸಲಾಗುತ್ತದೆ. ಇದಕ್ಕೆ ವಿರುದ್ಧವಾಗಿ ಎಂಇಎಸ್‌ನವರು ಕರಾಳ ದಿನ ಆಚರಿಸುತ್ತಾರೆ. ಅವರಿಗೆ ಬೆಂಬಲ ನೀಡಲು ಮಹಾರಾಷ್ಟ್ರದ ನಾಯಕರು ಬರುವುದು ಪ್ರಚೋದನಕಾರಿ ಭಾಷಣ ಮಾಡುವುದು ಶಾಂತಿ ಕದಡುವುದು ನಡೆದೇ ಇತ್ತು. ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಅವರು ಸಂವಿಧಾನ ಪ್ರದತ್ತವಾದ ಅಧಿಕಾರ ಬಳಸಿ ಪ್ರಚೋದನಕಾರಿ ಹೇಳಿಕೆ ನೀಡುವ ನಾಯಕರು ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಿದ್ದಾರೆ. ಇದರಲ್ಲಿ ತಪ್ಪೇನೂ ಇಲ್ಲ’ ಎಂದರು. ‘ಇದು ಹಕ್ಕುಚ್ಯುತಿ ಮಾಡುವ ಇದ್ದೇಶದಿಂದ ಹೊರಡಿಸಿದ ಅದೇಶವಲ್ಲ. ಜಿಲ್ಲಾಧಿಕಾರಿ ಆದೇಶಕ್ಕೆ ನನ್ನ ಸಮ್ಮತಿ ಇದೆ. ಈ ಬಗ್ಗೆ ಸಂಸತ್‌ನಲ್ಲಿ ಚರ್ಚೆಗೆ ಬಂದರೆ ನಾನು ಖಂಡಿತವಾಗಿ ಜಿಲ್ಲಾಧಿಕಾರಿ ಪರವಾಗಿಯೇ ವಾದಿಸುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.