ಬೆಳಗಾವಿ: ‘ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನಮ್ಮನ್ನು ಒಳಪಡಿಸಬೇಕು’ ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಹಕ್ಕಿಪಿಕ್ಕಿ ಸಮುದಾಯದವರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ರಾಣಿ ಚನ್ನಮ್ಮನ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿ, ತಮ್ಮ ಬೇಡಿಕೆ ಈಡೇರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
‘ಶಿವಮೊಗ್ಗ, ಮೈಸೂರು, ದಾವಣಗೆರೆ, ಬೆಂಗಳೂರಿನಲ್ಲಿದ್ದ ಹಕ್ಕಿಪಿಕ್ಕಿ ಸಮುದಾಯದವರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣಪತ್ರ ನೀಡಿ, ಮೂಲಸೌಕರ್ಯ ಕಲ್ಪಿಸಲಾಗಿದೆ. ಆದರೆ, ಖಾನಾಪುರ ತಾಲ್ಲೂಕಿನಲ್ಲಿ ಇರುವ 50ರಿಂದ 60 ಕುಟುಂಬಗಳಿಗೆ ಜಾತಿ ಪ್ರಮಾಣಪತ್ರ ಕೊಟ್ಟಿಲ್ಲ’ ಎಂದು ಆರೋಪಿಸಿದರು.
‘ವಿದ್ಯುತ್ ಮೀಟರ್‌ಗಳ ಆಧಾರದಲ್ಲಿ ಹೆಸ್ಕಾಂ ಸಿಬ್ಬಂದಿ ಸಮೀಕ್ಷೆಗೆ ಪಟ್ಟಿ ಸಿದ್ಧಪಡಿಸಿದ್ದಾರೆ. ಆದರೆ, ಕಾಡಂಚಿನ ಗ್ರಾಮಗಳಲ್ಲಿ ನಾವು ಗುಡಿಸಲಿನಲ್ಲಿ ವಾಸಿಸುತ್ತಿದ್ದು, ಸಮೀಕ್ಷೆಯಿಂದ ಹೊರಗುಳಿದಿದ್ದೇವೆ. ನಮ್ಮನ್ನು ಸಮೀಕ್ಷೆಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿದರು.
ರಾಜಶೇಖರ ಹಿಂಡಲಗಿ, ಕಾರ್ತಿಕ ತಳವಾರ, ದಯಾನಂದ ಹಕ್ಕಿಪಿಕ್ಕಿ, ರವಿ ಮಾದಾರ ಇದ್ದರು.
ಹಕ್ಕಿಪಿಕ್ಕಿ ಸಮುದಾಯದವರ ಸಮೀಕ್ಷೆಯನ್ನೂ ಮಾಡುತ್ತೇವೆ: ಡಿ.ಸಿ
‘ಹಕ್ಕಿಪಿಕ್ಕಿ ಸಮುದಾಯದವರ ಸಮಸ್ಯೆ ಗಮನಕ್ಕೆ ಬಂದಿದೆ. ಈ ಸಂಬಂಧ ಹಿಂದುಳಿದ ವರ್ಗಗಳ ಆಯೋಗದೊಂದಿಗೆ ಮಾತನಾಡಿದ್ದೇವೆ. ಹಕ್ಕಿಪಿಕ್ಕಿ ಸಮುದಾಯದವರೆನ್ನೆಲ್ಲ ಒಂದೇ ಕಡೆ ಕರೆಯಿಸಿ ಆಫ್‌ಲೈನ್ ಅಥವಾ ಕ್ಯಾಂಪ್ ಮೋಡ್ ಮೂಲಕ ಸಮೀಕ್ಷೆ ಮಾಡುತ್ತೇವೆ. ಇದಕ್ಕಾಗಿ ಅವರು ದಾಖಲೆಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸುದ್ದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.