ADVERTISEMENT

ಬೆಳಗಾವಿ | 'ಶಕ್ತಿಸೌಧದ ಬಳಿ ಮುಂದುವರಿದ ಸರಣಿ ಪ್ರತಿಭಟನೆ'

ಪ್ರತಿಭಟನಕಾರರಿಂದ ಕಿಕ್ಕಿರಿದು ತುಂಬಿದ್ದ ಸೌಧದ ಬಳಿ ಇರುವ ವೇದಿಕೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 1:59 IST
Last Updated 16 ಡಿಸೆಂಬರ್ 2025, 1:59 IST
ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿ ಇರುವ ವೇದಿಕೆಯಲ್ಲಿ ನವ ಕರ್ನಾಟಕ ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘದವರು ಪ್ರತಿಭಟಿಸಿದರು  ಪ್ರಜಾವಾಣಿ ಚಿತ್ರ
ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿ ಇರುವ ವೇದಿಕೆಯಲ್ಲಿ ನವ ಕರ್ನಾಟಕ ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘದವರು ಪ್ರತಿಭಟಿಸಿದರು  ಪ್ರಜಾವಾಣಿ ಚಿತ್ರ   

ಬೆಳಗಾವಿ: ವಿಧಾನಮಂಡಲ ಚಳಿಗಾಲದ ಅಧಿವೇಶನದ ಆರನೇ ದಿನವಾದ ಸೋಮವಾರ ಇಲ್ಲಿನ ಸುವರ್ಣ ವಿಧಾನಸೌಧ ಬಳಿ ಇರುವ ವೇದಿಕೆಯಲ್ಲಿ ಸರಣಿ ಪ್ರತಿಭಟನೆ ನಡೆದವು. ಕಳೆದೆರಡು ದಿನಗಳಿಂದ ಜನರಿಲ್ಲದೆ ಬಿಕೋ ಎನ್ನುತ್ತಿದ್ದ ಪ್ರತಿಭಟನಾ ಸ್ಥಳ ಜನರಿಂದ ಕಿಕ್ಕಿರಿದು ತುಂಬಿತ್ತು. ವಿವಿಧ ಸಂಘಟನೆಗಳ ಕಾರ್ಯಕರ್ತರು ತಮ್ಮ ಹಕ್ಕೊತ್ತಾಯ ಮಂಡಿಸಿದರು. ಸಚಿವ ಕೆ.ಎಚ್‌.ಮುನಿಯಪ್ಪ ವಿವಿಧ ಟೆಂಟುಗಳಿಗೆ ತೆರಳಿ, ಬೇಡಿಕೆ ಆಲಿಸಿದರು.

ಸೇವಾಭದ್ರತೆ ಒದಗಿಸಿ: ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು (ಎಂಆರ್‌ಡಬ್ಲ್ಯು), ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು(ವಿಆರ್‌ಡಬ್ಲ್ಯು) ಮತ್ತು ನಗರ ಪುನರ್ವಸತಿ ಕಾರ್ಯಕರ್ತರನ್ನು (ಯುಆರ್‌ಡಬ್ಲ್ಯು) ಕನಿಷ್ಠ ವೇತನ ಕಾಯ್ದೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ, ನವ ಕರ್ನಾಟಕ ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘದವರು ಪ್ರತಿಭಟಿಸಿದರು.

‘ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ರಾಜ್ಯದಲ್ಲಿ 6,860 ಕಾರ್ಯಕರ್ತರು ಗೌರವಧನ ಆಧಾರದಲ್ಲಿ ಕೆಲಸ ಮಾಡುತ್ತಿದ್ದೇವೆ. ಆದರೆ, ನಮಗೆ ಕೆಲಸಕ್ಕೆ ಸಮಾನವಾದ ವೇತನ ಸಿಗುತ್ತಿಲ್ಲ. ಸರ್ಕಾರ ನಮ್ಮನ್ನು ಕಡೆಗಣಿಸಿದೆ. ಹಾಗಾಗಿ ನಮ್ಮ ಸೇವೆ ಕಾಯಂಗೊಳಿಸಬೇಕು. ಆ ಬೇಡಿಕೆ ಈಡೇರುವವರೆಗೆ ಕನಿಷ್ಠ ವೇತನ ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಮುಖಂಡರಾದ ಫಕೀರಗೌಡ ಪಾಟೀಲ, ಅಂಬಾಜಿ ಮೇಟಿ ನೇತೃತ್ವ ವಹಿಸಿದ್ದರು.

ಗುರುತಿನ ಚೀಟಿ ಕೊಡಿ: ಸ್ವಾತಂತ್ರ್ಯ ಯೋಧರ ಉತ್ತರಾಧಿಕಾರಿಗಳ ಕುಟುಂಬದವರಿಗೆ ಸರ್ಕಾರದಿಂದ ಗುರುತಿನ ಚೀಟಿ ನೀಡಬೇಕು ಎಂದು ಆಗ್ರಹಿಸಿ ಹಳೇ ಧಾರವಾಡ ಜಿಲ್ಲಾ ಸ್ವಾತಂತ್ರ್ಯ ಯೋಧರ ಉತ್ತರಾಧಿಕಾರಿಗಳ ಕ್ಷೇಮಾಭಿವೃದ್ಧಿ ಟ್ರಸ್ಟ್‌ನವರು ಧರಣಿ ಮಾಡಿದರು.

ಸರ್ಕಾರಿ ಉದ್ಯೋಗ ಮತ್ತು ಯೋಜನೆಗಳಲ್ಲಿ ನಮಗೆ ಮೀಸಲಾತಿ ಕೊಡಬೇಕು. ಆರ್ಥಿಕವಾಗಿ ಸಹಾಯ ಮಾಡಬೇಕು ಎಂದು ಆಗ್ರಹಿಸಿದರು. ಸಂಘಟನೆ ಅಧ್ಯಕ್ಷ ಮೃತ್ಯುಂಜಯ ಕುಲಕರ್ಣಿ, ಕಾರ್ಯದರ್ಶಿ ಈರಪ್ಪ ಪರಕಾಳಿ ನೇತೃತ್ವ ವಹಿಸಿದ್ದರು.

ಏಜೆಂಟರ್‌ ಹಾವಳಿಗೆ ಕಡಿವಾಣ ಹಾಕಿ: ‘ಬೆಳಗಾವಿ ತಹಶೀಲ್ದಾರ್‌ ಕಚೇರಿಯಲ್ಲಿ ಹಿರಿಯ ನಾಗರಿಕರ ಪಿಂಚಣಿ ಸೇರಿ ಯಾವುದೇ ಕೆಲಸಕ್ಕಾಗಿ ಸಾರ್ವಜನಿಕರಿಂದ ಹಣ ಲೂಟಿ ಮಾಡುತ್ತಿದ್ದಾರೆ. ಹಾಗಾಗಿ ಅಲ್ಲಿ ಏಜೆಂಟರ ಹಾವಳಿಗೆ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಕೆ.ವಿದ್ಯಾಸಾಗರ ಪ್ರತಿಭಟಿಸಿದರು.

ಭುವನೇಶ್ವರಿ ಪ್ರತಿಮೆ ಪ್ರತಿಷ್ಠಾಪಿಸಿ: ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂದೆ ಭುವನೇಶ್ವರ ಪ್ರತಿಮೆ ಪ್ರತಿಷ್ಠಾಪಿಸಬೇಕು ಎಂದು ಆಗ್ರಹಿಸಿ ಸರ್ವೋದಯ ಸ್ವಯಂಸೇವಾ ಸಂಘದ ಕಾರ್ಯಕರ್ತರು ಪ್ರತಿಭಟಿಸಿದರು. ಮುಖಂಡ ಶ್ರೀನಿವಾಸ ತಾಳೂಕರ ನೇತೃತ್ವ ವಹಿಸಿದ್ದರು.

ಹಕ್ಕುಪತ್ರ ವಿತರಿಸಿ: ಬೆಳಗಾವಿಯಲ್ಲಿ ನಿರ್ಮಿಸಿದ 253 ವಸತಿಗೃಹಗಳಲ್ಲಿ ವಾಸಿಸುತ್ತಿರುವ ಪೌರ ಕಾರ್ಮಿಕರಿಗೆ ಹಕ್ಕುಪತ್ರ ವಿತರಣೆ ಮಾಡಬೇಕು ಎಂದು ಒತ್ತಾಯಿಸಿ ಸಫಾಯಿ ಕರ್ಮಚಾರಿ ಕಾವಲು ಸಮಿತಿ–ಕರ್ನಾಟಕ ಸಂಘಟನೆಯವರು ಪ್ರತಿಭಟಿಸಿದರು. ಮ್ಯಾನ್ಯುವಲ್‌ ಸ್ಕೇವೆಂಜರ್‌ ನಿಷೇಧ ಮತ್ತು ಪುನರ್ವಸತಿ ಕಾಯ್ದೆ 2013 ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು ಎಂದು ಆಗ್ರಹಿಸಿದರು.

ಮುಖಂಡ ದೀಪಕ ವಾಘೇಲಾ ನೇತೃತ್ವ ವಹಿಸಿದ್ದರು.

ಹಳೇ ಧಾರವಾಡ ಜಿಲ್ಲಾ ಸ್ವಾತಂತ್ರ್ಯ ಯೋಧರ ಉತ್ತರಾಧಿಕಾರಿಗಳ ಕ್ಷೇಮಾಭಿವೃದ್ಧಿ ಟ್ರಸ್ಟ್‌ನವರು ಧರಣಿ ಮಾಡಿದರು
ಕರ್ನಾಟಕ ರಾಜ್ಯ ವಿಕಲಚೇತನರ ಆರ್‌ಪಿಡಿ ಟಾಸ್ಕ್‌ಫೋರ್ಸ್‌ನವರು ಸಚಿವ ಕೆ.ಎಚ್‌.ಮುನಿಯಪ್ಪ ಅವರಿಗೆ ಮನವಿ ಸಲ್ಲಿಸಿದರು

2ಬಿ ಮೀಸಲಾತಿ ಮರುಸ್ಥಾಪನೆಗೆ ಆಗ್ರಹ

ಹಿಂದಿನ ಬಿಜೆಪಿ ಸರ್ಕಾರ ರದ್ದು ಮಾಡಿದ 2ಬಿ ಮೀಸಲಾತಿಯನ್ನು ಮರುಸ್ಥಾ‍ಪಿಸಬೇಕು ಇದರ ಪ್ರಮಾಣವನ್ನು ಶೇ 8ಕ್ಕೆ ಏರಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಸ್‌ಡಿಪಿಐ ವತಿಯಿಂದ ಇಲ್ಲಿನ ಯಡಿಯೂರಪ್ಪ ಮಾರ್ಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2.84 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕು ಒಳಮೀಸಲಾತಿಯ ವಿವಾದ ಶೀಘ್ರ ಬಗೆಹರಿಸಬೇಕು ರೈತ ವಿರೋಧಿಯಾದ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ರದ್ದು ಮಾಡಬೇಕು ಎಂದೂ ಆಗ್ರಹಿಸಿದರು.

ಅಂಗವಿಕಲರ ಕಲ್ಯಾಣಕ್ಕಾಗಿ ನಿಗಮ–ಮಂಡಳಿ ಸ್ಥಾಪಿಸಿ

ರಾಜ್ಯದಲ್ಲಿ ಅಂಗವಿಕಲರ ಕಲ್ಯಾಣಕ್ಕಾಗಿ ಪ್ರತ್ಯೇಕವಾಗಿ ನಿಗಮ–ಮಂಡಳಿ ಸ್ಥಾಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ವಿಕಲಚೇತನರ ಆರ್‌ಪಿಡಿ ಟಾಸ್ಕ್‌ಫೋರ್ಸ್‌ನವರು ಧರಣಿ ನಡೆಸಿದರು. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಅಂಗವಿಕಲರಿಗಾಗಿ ಪ್ರತ್ಯೇಕವಾಗಿ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಸುರೇಶ ಭಂಡಾರಿ ಮುದ್ಗಲ್‌ ಗಿರೀಶ ವಿಜಯನಗರ ಅಸ್ಕಿಹಾಳ ನಾಗರಾಜ ಸೈದಪ್ಪ ಹೊಸಮನಿ ನೇತೃತ್ವ ವಹಿಸಿದ್ದರು.

ಮನವಿ ಸ್ವೀಕರಿಸಿದ ಸಚಿವ ಬೈರತಿ ಸುರೇಶ್

ವಿವಿಧ ಸಂಘಟನೆಗಳ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸುವುದಾಗಿ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಭರವಸೆ ನೀಡಿದರು. ಸೋಮವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಎಲ್ಲರ ಅಹವಾಲು ಸ್ವೀಕರಿಸಿದರು. ಸುವರ್ಣಸೌಧದ ಪ್ರವೇಶ ದ್ವಾರದಲ್ಲಿ ತಾಯಿ ಭುವನೇಶ್ವರಿಯ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡುವಂತೆ ಸರ್ವೋದಯ ಸ್ವಯಂ ಸೇವಾ ಸಂಘದ ಕಾರ್ಯಕರ್ತರು ಆಗ್ರಹಿಸಿದಾಗ ಸಚಿವರು ಕನ್ನಡ ನಾಡು ನುಡಿ ಸಂಸ್ಕೃತಿ ಭಾಷೆ ನೆಲ ಜಲದ ಬಗ್ಗೆ ಗೌರವ ಹೊಂದಿರುವ ಸರ್ಕಾರ ನಮ್ಮದು ಎಂದರು. ಹಿಂದುಳಿದ ವರ್ಗಗಳ ಮತ್ತು ಪರಿಶಿಷ್ಟರಿಗೆ ಮೀಸಲಿರುವ ಎಸ್‌ಸಿಎಸ್‌ಟಿ ಟಿಎಸ್‌ಪಿ ಅನುದಾನದ ಬಳಕೆಯ ಮೇಲ್ವಿಚಾರಣೆಗೆ ತಾಲ್ಲೂಕು ಜಿಲ್ಲಾ ಮಟ್ಟದ ಸಮಿತಿ ರಚಿಸುವಂತೆ ಭೀಮ್ ಆರ್ಮಿಯ ಸದಸ್ಯರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸುರೇಶ್‌ ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ ಮಾಡುವುದಾಗಿ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.