ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಅದ್ದೂರಿ ರಾಜ್ಯೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಶನಿವಾರ ಬೆಳಗಾದರೆ ಸಾಕು ಎಂದು ಲಕ್ಷಾಂತರ ಕನ್ನಡ ಮನಸ್ಸುಗಳು ಕಾದು ಕುಳಿತಿವೆ. ಈ ಬಾರಿ ಕೂಡ ಗಡಿಯಲ್ಲಿ ಕನ್ನಡಮ್ಮನ ವೈಭವೋಪೇತ ತೇರು ಎಳೆಯಲು ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಪ್ರಮುಖ ರಸ್ತೆಗಳೆಲ್ಲ ಹಳದಿ–ಕೆಂಪು ಬಣ್ಣದ ಬಾವುಟಗಳಿಂದ ಕಂಗೊಳಿಸುತ್ತಿವೆ.
ಇಲ್ಲಿನ ರಾಣಿ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಧರ್ಮವೀರ ಸಂಭಾಜಿ ವೃತ್ತ, ಕಾಕತಿ ವೇಸ್, ಕಾಲೇಜು ರಸ್ತೆ, ಅಂಬೇಡ್ಕರ್ ಮಾರ್ಗ, ಡಾ.ರಾಜ್‌ಕುಮಾರ್ ಮಾರ್ಗ, ಜಿಲ್ಲಾಧಿಕಾರಿ ಕಚೇರಿ, ಮಹಾನಗರ ಪಾಲಿಕೆ ಕಚೇರಿ, ಕಾಂಗ್ರೆಸ್ ರಸ್ತೆ ಹೀಗೆ ಎಲ್ಲ ಕಡೆಯೂ ಕನ್ನಡನ ಹಾಸುಹೊಕ್ಕಾಗಿದೆ.
ಕಳೆದೊಂದು ವಾರದಿಂದ ತಯಾರಿ ನಡೆಸಿರುವ ಕನ್ನಡ ಯುವಜನರು ಇನ್ನಿಲ್ಲದ ಹುಮ್ಮಸ್ಸಿನಲ್ಲಿದ್ದಾರೆ. ವೃತ್ತಗಳಲ್ಲಿ ನಾಲ್ಕೂ ದಿಕ್ಕಿನ ರಸ್ತೆಗಳಿಗೆ ಭವ್ಯ ಸ್ವಾಗತ ಕಮಾನು ಹಾಕಲಾಗಿದೆ. ರಸ್ತೆಯ ವಿಭಜಗಕಳಲ್ಲಿ ಕಂಬಗಳನ್ನು ನೆಟ್ಟು ಕೆಂಪು– ಹಳದಿ ಬಾವುಗಳನ್ನು ಹಾರಿಸಲಾಗಿದೆ. ಕನ್ನಡ ಆದಿ ಕವಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಚಲನಚಿತ್ರ ನಟರು, ದಾಸರು, ಶರಣರ ಚಿತ್ರಪಟಗಳು ರಾರಾಜಿಸುತ್ತಿವೆ.
ರಾಣಿ ಚನ್ನಮ್ಮ ವೃತ್ತದ ನಾಲ್ಕೂ ದಿಕ್ಕಿನಲ್ಲಿ ಕನ್ನಡ ಸಂಘಟನೆಗಳ ಯುವಕರು, ಹಿರಿಯರು ಹಾಗೂ ಹೋರಾಟಗಾರರು ತಮ್ಮ ತಮ್ಮ ಮಂಟಪಗಳನ್ನು ಹಾಕಿದ್ದಾರೆ. ಈ ಮಂಟಪಗಳಿಗೂ ಕನ್ನಡದ ಕಂಪು ಸೂಸಿದ್ದು ಕೆಂಪು– ಹಳದಿ ಬಣ್ಣದಲ್ಲೇ ಕಂಗೊಳಿಸುತ್ತಿವೆ.
ರಸ್ತೆಯ ಇಕ್ಕೆಲಗಳಲ್ಲಿರುವ ಮಳಿಗೆ, ಮನೆಗಳಿಗೂ ದೀಪಾಲಂಕಾರ ಮಾಡಲಾಗಿದೆ. ಮಹಾನಗರ ಪಾಲಿಕೆಯಿಂದ ರಾಣಿ ಚನ್ನಮ್ಮ ವೃತ್ತ, ರಾಯಣ್ಣ ವೃತ್ತಗಳಲ್ಲಿ ವಿದ್ಯುದ್ದೀಪಾಲಂಕಾರ ಮಾಡಲಾಗಿದೆ. ನಗರದ ಪ್ರಮುಖ ರಸ್ತೆಗಳೆಲ್ಲವೂ ಈಗ ಕನ್ನಡಮಯವಾಗಿ ಕಂಗೊಳಿಸುತ್ತಿವೆ.
ಸಿಡಿಮದ್ದಿನ ಪ್ರದರ್ಶನ: ಇದೇ ಮೊದಲ ಬಾರಿಗೆ ರಾಣಿ ಚನ್ನಮ್ಮ ವೃತ್ತದಲ್ಲಿ ಸಿಡಿಮದ್ದಿನ ಪ್ರದರ್ಶನ ಆಯೋಜಿಸಿದ್ದು ಮತ್ತಷ್ಟು ಮೆರಗು ತಂದಿದೆ. ಅ.31 ರಾತ್ರಿ 12ಕ್ಕೆ ರಾಜ್ಯೋತ್ಸವಕ್ಕೆ ಚಾಲನೆ ದೊರೆಯಲಿದೆ. ಅದರ ಅಂಗವಾಗಿ ರಾತ್ರಿಯೇ ಸಿಡಿಮದ್ದಿನ ವೈಭವ ತರಲು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಸನ್ನದ್ಧವಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.