ಹುಕ್ಕೇರಿ: ‘ತಾಲ್ಲೂಕಿನ ಜನರು ಧರ್ಮಾತೀತ ಮತ್ತು ಜಾತ್ಯಾತೀತವಾಗಿ ನಮ್ಮ ಕುಟುಂಬವನ್ನು ಪ್ರೀತಿ, ವಿಶ್ವಾಸದಿಂದ ಬೆಳೆಸಿದ್ದಾರೆ. ಅವರ ಪ್ರೀತಿಗೆ ನಮ್ಮ ಕುಟುಂಬ ಋಣಬದ್ಧ. ಜನರ ಸೇವೆಗೆ ಸದಾ ಸಿದ್ಧ’ ಎಂದು ಮಾಜಿ ಸಂಸದ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ್ ಕತ್ತಿ ಹೇಳಿದರು.
ತಾಲ್ಲೂಕಿನ ಬೆಲ್ಲದ ಬಾಗೇವಾಡಿಯ ವಿಶ್ವರಾಜ ಶುಗರ್ ಕಾರ್ಖಾನೆ ಆವರಣದಲ್ಲಿ ಶನಿವಾರ ಹುಕ್ಕೇರಿ ಪಟ್ಟಣದ ಪತ್ರಕರ್ತರ ಬಳಗದಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದರು.
‘ತಾಲ್ಲೂಕಿನ ಜನರ ಬೆಂಬಲದಿಂದ ನಮ್ಮ ತಂದೆ ದಿ.ವಿಶ್ವನಾಥ ಕತ್ತಿ, ಅಣ್ಣ ದಿ.ಉಮೇಶ್ ಕತ್ತಿ, ಶಾಸಕ ನಿಖಿಲ್ ಕತ್ತಿ ಹಾಗೂ ನಮ್ಮ ಮಕ್ಕಳು ಸಮಾಜದಲ್ಲಿ ಉನ್ನತ ಸ್ಥಾನಮಾನ ಹೊಂದಿದ್ದೇವೆ. ನಮ್ಮ ತಂದೆಯ ನಿಧನದ ಬಳಿಕ ಕಿರಿಯ ವಯಸ್ಸಿನಲ್ಲಿ ಸಹಕಾರ ಕ್ಷೇತ್ರದ ಮೂಲಕ ಸಮಾಜ ಸೇವೆ ಪ್ರಾರಂಭಿಸಿದ ನಾನು ಬಿಡಿಸಿಸಿ ಬ್ಯಾಂಕಿಗೆ 28 ವರ್ಷ ಅಧ್ಯಕ್ಷನಾಗಿದ್ದು ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದನಾಗಿ ಕಾರ್ಯನಿರ್ವಹಿಸಿದ್ದು ಇದಕ್ಕೆ ನಿದರ್ಶನ’ ಎಂದರು.
‘ಈಚೆಗೆ ನಡೆದ ವಿದ್ಯುತ್ ಸಹಕಾರ ಸಂಘದ ಚುನಾವಣೆಯಲ್ಲಿ ನಮ್ಮ ವಿರೋಧಿಗಳು ಹಣ, ತೋಳ್ಬಲ ಮತ್ತು ಅಧಿಕಾರ ದುರುಪಯೋಗ ಮಾಡಿಕೊಂಡು ನಮ್ಮನ್ನು ಸೋಲಿಸಲು ಪ್ರಯತ್ನಿಸಿದರು. ಆದರೆ ತಾಲ್ಲೂಕಿನ ಜನ ನಮ್ಮ ಕೈ ಬಿಡಲಿಲ್ಲ. ಈ ಗೆಲುವು ನಮಗೆ ನೂರಾನೆ ಬಲ ತಂದುಕೊಟ್ಟಿದೆ. ಮುಂಬರುವ ದಿನಗಳಲ್ಲಿ ಜಿಲ್ಲೆಯ ಜತೆಗೆ ರಾಜ್ಯದಾದ್ಯಂತ ಸಂಚರಿಸಿ ಜನರಲ್ಲಿ ಸ್ವಾಭಿಮಾನದ ಛಲ ಹೆಚ್ಚಿಸುವುದೇ ನನ್ನ ಗುರಿ’ ಎಂದರು.
ನೂತನ ನಿರ್ದೇಶಕ, ಉದ್ಯಮಿ ಪೃಥ್ವಿ ಕತ್ತಿ ಅವರನ್ನು ಪತ್ರಕರ್ತರ ಬಳಗದ ವತಿಯಿಂದ ಸತ್ಕರಿಸಲಾಯಿತು. ಇದೇ ಸಂದರ್ಭದಲ್ಲಿ ತಾಲ್ಲೂಕಿನ ನೂರಾರು ಜನ ಮತ್ತು ಜನಪ್ರತಿನಿಧಿಗಳು ಆಗಮಿಸಿ ರಮೇಶ ಕತ್ತಿ ಅವರನ್ನು ಅಭಿನಂದಿಸಿದರು.
ವಿದ್ಯುತ್ ಸಹಕಾರ ಸಂಘದ ನಿರ್ದೇಶಕ ಪೃಥ್ವಿ ಕತ್ತಿ, ಅಜಿತ ಮುನ್ನೋಳಿ, ಎಂ.ಡಿ. ರವೀಂದ್ರ ಪಾಟೀಲ್, ರೆಸಿಡೆಂಟ್ ಎಂಜನಿಯರ್ ನೇಮಿನಾಥ ಖೇಮಲಾಪೂರೆ, ವ್ಯವಸ್ಥಾಪಕ ದುರದುಂಡಿ ನಾಯಿಕ, ಬಸವರಾಜ ವಾಜಂತ್ರಿ, ಸೆಕ್ಷನ್ ಆಫಿಸರ್ ಉದಯ ಮಗದುಮ್ಮ ಮುಖಂಡರಾದ ರಾಯಪ್ಪ ಡೂಗ, ರವೀಂದ್ರ ಕಲ್ಲಟ್ಟಿ, ಬಸವರಾಜ ನಾಗಣ್ಣವರ, ಪತ್ರಕರ್ತರಾದ ಪಿ.ಜಿ.ಕೊಣ್ಣೂರ, ಬಾಬು ಸುಂಕದ, ಸಂಜೀವ ಮುತಾಲಿಕ, ಬಸವರಾಜ ಕೊಂಡಿ, ಡಾ. ಸೋಹನ್ ವಾಗೋಜಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.