ADVERTISEMENT

ಶಾಂತಿ ಸಂದೇಶ ಸಾರುವ ಕ್ರಿಸ್‌ಮಸ್‌

ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಚರ್ಚ್‌ಗಳು

ಎಂ.ಮಹೇಶ
Published 24 ಡಿಸೆಂಬರ್ 2018, 17:30 IST
Last Updated 24 ಡಿಸೆಂಬರ್ 2018, 17:30 IST
ವಿದ್ಯುತ್‌ ದೀಪಗಳ ಅಲಂಕಾರದಿಂದ ಫಾತಿಮಾ ಚರ್ಚ್‌ ಕಂಗೊಳಿಸುತ್ತಿದೆ– ಪ್ರಜಾವಾಣಿ ಚಿತ್ರ
ವಿದ್ಯುತ್‌ ದೀಪಗಳ ಅಲಂಕಾರದಿಂದ ಫಾತಿಮಾ ಚರ್ಚ್‌ ಕಂಗೊಳಿಸುತ್ತಿದೆ– ಪ್ರಜಾವಾಣಿ ಚಿತ್ರ   

ಬೆಳಗಾವಿ: ತಾನೇ ಸುಟ್ಟುಕೊಂಡರೂ ಇತರರಿಗೆ ‘ಬೆಳಕು’ ನೀಡುವ ಮೊಂಬತ್ತಿಯಲ್ಲಿ ಪ್ರೀತಿಯ ಸಂದೇಶ ಅಡಗಿದೆ. ಅಹಂ ಬಿಟ್ಟು, ಪರೋಪಕಾರಿಯಾಗಿ ಬಾಳಬೇಕು ಎಂಬ ಅರಿವು ನೀಡುವ ಮೊಂಬತ್ತಿಗಳನ್ನು ಬೆಳಗಿಸಿ, ಪ್ರಾರ್ಥಿಸುವುದರಲ್ಲಿ ಭಕ್ತಿಯ ಪ್ರತೀಕವಿದೆ. ಇಂಥ ಹತ್ತಾರು ಸಂದೇಶ ಸಾರುವ, ಎಲ್ಲರಿಗೂ ಇಷ್ಟವಾಗುವ ಹಬ್ಬವೇ ‘ಕ್ರಿಸ್‌ಮಸ್’.

ಸರಳತೆ, ಮೌಲ್ಯ, ಪ್ರಾರ್ಥನೆ, ಸಹೋದರತ್ವ, ಪರೋಪಕಾರದ ಮಹತ್ವ ಸಾರುವ ಮತ್ತು ಶಾಂತಿ, ಸಂದೇಶದ ನಕ್ಷತ್ರವು ಪ್ರತಿಯೊಬ್ಬರ ಮನದಲ್ಲೂ ಮಿನುಗಲಿ ಎಂದು ಆಶಿಸುವ ಈ ಹಬ್ಬದ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ.

ನಗರದ ವಿವಿಧೆಡೆ ಹಾಗೂ ಕೆಲವು ಗ್ರಾಮೀಣ ಪ್ರದೇಶಗಳಲ್ಲಿರುವ ಚರ್ಚ್‌ಗಳು ವಿದ್ಯುತ್‌ ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿವೆ. ನಕ್ಷತ್ರ ಬುಟ್ಟಿಗಳು ಅವುಗಳಿಗೆ ಮೆರುಗು ನೀಡುತ್ತಿವೆ. ಚರ್ಚ್‌ ಆವರಣದಲ್ಲಿ ‘ಗೋದಲಿ’ಮಾದರಿಗಳು ಆಕರ್ಷಿಸುತ್ತಿದೆ. ಕ್ರೈಸ್ತರ ಮನೆಗಳಲ್ಲೂ ‘ನಕ್ಷತ್ರ’ಗಳು ತೂಗುತ್ತಿವೆ; ಸಂಭ್ರಮವನ್ನು ಹರಡುತ್ತಿವೆ.

ADVERTISEMENT

100ಕ್ಕೂ ಹೆಚ್ಚು ಚರ್ಚ್‌ಗಳು:

‘ಜಿಲ್ಲೆಯಲ್ಲಿ ರೋಮನ್ ಕ್ಯಾಥೋಲಿಕ್’ ಮತ್ತು ‘ಪ್ರೊಟೆಸ್ಟೆಂಟ್‌’ ಕ್ರೈಸ್ತರು ಇದ್ದಾರೆ. ‘ರೋಮನ್ ಕ್ಯಾಥೋಲಿಕ್’ಪಂಗಡಕ್ಕೆ ಸೇರಿದವರು ಸಂಪ್ರದಾಯಗಳನ್ನು ಪಾಲಿಸುತ್ತಾರೆ. ಪೋಪ್ ಧರ್ಮ ಗುರುವನ್ನು ನಂಬುತ್ತಾರೆ. ನಗರ ಹಾಗೂ ತಾಲ್ಲೂಕಿನಲ್ಲಿ 20ಕ್ಕೂ ಹೆಚ್ಚು ಹಾಗೂ ಜಿಲ್ಲೆಯಾದ್ಯಂತ 100ಕ್ಕೂ ಹೆಚ್ಚು ಚರ್ಚ್‌ಗಳಿವೆ. ಅವುಗಳಲ್ಲೀಗ ಸಂಭ್ರಮ ಮನೆ ಮಾಡಿದೆ.

ಕ್ರಿಸ್‌ಮಸ್‌ ಅಂಗವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕ್ರೈಸ್ತರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಯಾಂಪ್‌ ಪ್ರದೇಶದಲ್ಲಿ ಸಂಭ್ರಮ ಇಮ್ಮಡಿಯಾಗಿದೆ. ಫಾತಿಮಾ ಕೆಥಿಡ್ರಲ್ ಚರ್ಚ್‌, ಐ.ಸಿ. ಚರ್ಚ್‌, ಸೇಂಟ್ ಅಂಥೋನಿ ಚರ್ಚ್‌, ಮೌಂಟ್‌ಕಾರ್ಮಲ್ ಚರ್ಚ್‌, ಸೇಂಟ್ ಮೇರಿ ಚರ್ಚ್‌, ಮೆಥೋಡಿಸ್ಟ್‌ ಚರ್ಚ್‌ ಸೇರಿದಂತೆ ಹಲವು ಚರ್ಚ್‌ಗಳು ರಾತ್ರಿ ವೇಳೆ ವಿದ್ಯುತ್ ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿವೆ. ಚರ್ಚ್‌ಗಳಲ್ಲಿ ಸೋಮವಾರ ಮಧ್ಯರಾತ್ರಿಯಿಂದಲೇ ವಿಶೇಷ ಪ್ರಾರ್ಥನೆ ಆರಂಭಗೊಂಡಿದೆ. ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಕ್ರೈಸ್ತರು ಸಿಹಿ ತಿನಿಸುಗಳನ್ನು ಹಂಚಿಕೊಳ್ಳುತ್ತಾರೆ. ಕೆಲವೆಡೆ ಪಟಾಕಿ ಸಿಡಿಸಿ ಸಂಭ್ರಮಿಸುವುದೂ ಉಂಟು. ಮಂಗಳವಾರ ಬೆಳಗಿನ ಜಾವದವರೆಗೂ ನಡೆಯುವ ಸಂತೋಷ ಕೂಟದಲ್ಲಿ ವಿಶೇಷ ಗೀತಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.

ಕೇಕ್‌ಗಳಿಗೆ ಬೇಡಿಕೆ:

ಮನೆಗಳಲ್ಲಿ ಕ್ರೈಸ್ತರು ಕೇಕ್‌ಗಳು, ತಿಂಡಿಗಳನ್ನು ಸಿದ್ಧಪಡಿಸುತ್ತಾರೆ. ಖರೀದಿಸುವುದೂ ಉಂಟು. ಹೊಸ ಬಟ್ಟೆ ತೊಟ್ಟು, ಪ್ರಾರ್ಥನೆ ಸಲ್ಲಿಸುವ ಮೂಲಕ ಪಕ್ಕದ ಮನೆಯವರು, ನೆಂಟರಿಷ್ಟರು, ಸ್ನೇಹಿತರಿಗೆ ಕೇಕ್ ಹಂಚಿ ಸಂಭ್ರಮಿಸುತ್ತಾರೆ. ಸೋಮವಾರ ಬೇಕರಿಗಳಲ್ಲಿ ಬಗೆಬಗೆಯ ಕೇಕ್‌ಗಳಿಗೆ ಬೇಡಿಕೆ ಇತ್ತು.

ಚರ್ಚ್‌ನಿಂದ ಯುವಕರ ತಂಡಗಳು ಮನೆಗಳಿಗೆ ತೆರಳಿ, ಶುಭಾಶಯ ಗೀತೆ ಹಾಡುವ ಮೂಲಕ ಹಬ್ಬದ ಶುಭಾಶಯ ಕೋರುವ ಕಾರ್ಯಕ್ರಮವೂ ನಡೆಯುತ್ತದೆ. ಹಬ್ಬದಂದು, ಉಳ್ಳವರು ಬಡವರಿಗೆ ಅಕ್ಕಿ, ಬೇಳೆ, ಸಕ್ಕರೆ, ಸೀರೆ ವಿತರಿಸುತ್ತಾರೆ. ಕೇಕ್ ನೀಡಿ ಸಿಹಿ-ಸಂಭ್ರಮ ಹಂಚಿಕೊಳ್ಳುತ್ತಾರೆ. ಮಂಗಳವಾರ ವಿಶೇಷ ಪೂಜೆ- ಸಾಮೂಹಿಕ ಪ್ರಾರ್ಥನೆ ನಡೆಯುತ್ತದೆ. ಈ ವೇಳೆ, ಕ್ರೈಸ್ತರು ಮಾತ್ರವಲ್ಲದೇ ಇತರ ಧರ್ಮದವರೂ ಪಾಲ್ಗೊಳ್ಳುವುದು ವಿಶೇಷ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.