ಹುಕ್ಕೇರಿ: ಒಂದು ತಿಂಗಳ ಹಿಂದೆ ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ಮೇಲೆ ಬದಲಾವಣೆ ಕಂಡು ಬರುತ್ತಿದೆ. ಆದರೆ ಮೊದಲಿನವರು (ಅಧಿಕಾರ ಕಳೆದುಕೊಂಡವರು) ಈಗಾಗಲೇ ಗರಡಿ ಮನೆಯಲ್ಲಿ ತಾಲೀಮು ತಯಾರಿ ನಡೆಸಿದ್ದಾರೆ. ಸನಿಹದಲ್ಲಿ ಚುನಾವಣೆ ಜರುಗಲಿದ್ದು ಹೊಸ ಆಡಳಿತ ಮಂಡಳಿ (ನಮ್ಮ ಮೇಲೆ) ಮೇಲೆ ಹೆಚ್ಚಿನ ಜವಾಬ್ದಾರಿ ಇದ್ದು, ಗ್ರಾಹಕರ ಮನಸ್ಸನ್ನು ಗೆದ್ದರೆ ಮಾತ್ರ ಮುಂದೆ ಆಸನದಲ್ಲಿ ಕುಳಿತುಕೊಳ್ಳಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಯಾರ ಹೆಸರು ಹೇಳದೆ ಎರಡು ಬಣಗಳ ಕುರಿತು ಮಾರ್ಮಿಕವಾಗಿ ಮಾತನಾಡಿದರು.
ಅಂತರರಾಷ್ಟ್ರೀಯ ಸಹಕಾರ ದಿನದ ಅಂಗವಾಗಿ ರಾಜ್ಯದ ಏಕೈಕ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ 124 ಉದ್ಯೋಗಿಗಳಿಗೆ ‘ಕಾಯಂ ನೇಮಕಾತಿ ಪತ್ರ’ ವಿತರಿಸಿ ಶನಿವಾರ ಮಾತನಾಡಿದರು.
ಸಂಘವನ್ನು 17 ವರ್ಷದಿಂದ ದೂರದಿಂದ ನೋಡುತ್ತಿದ್ದೆ. ಈಗಿನ ಸದ್ಯದ ಬದಲಾವಣೆಯಿಂದ ಸಮೀಪ ಬರುವಂತೆ ಆಗಿದೆ. ಆಡಳಿತ ಮಂಡಳಿ ಜನರ ಪ್ರೀತಿಗೆ ಪಾತ್ರರಾಗಿ, ಕೆಲಸ ಮಾಡಲು ಸಲಹೆ ನೀಡಿದರು. ಸಂಘಕ್ಕೆ ಗ್ರಾಮ ಪಂಚಾಯಿತಿಯ ₹ 12 ಕೋಟಿ ಬರಬೇಕಾಗಿದ್ದರಲ್ಲಿ ₹ 4 ಕೋಟಿ ಕೊಡಿಸಿದ್ದೇನೆ ಎಂದ ಅವರು ಹಂತಹಂತವಾಗಿ ಇನ್ನುಳಿದ ಬಾಕಿಯನ್ನು ಚುಕ್ತಾ ಮಾಡುವುದಾಗಿ ತಿಳಿಸಿದರು.
ಮಾಜಿ ಸಚಿವ ಶಶಿಕಾಂತ ನಾಯಿಕ ಮತ್ತು ನಿರ್ದೇಶಕ ಶಶಿರಾಜ ಪಾಟೀಲ್ ಮಾತನಾಡಿದರು. ಅಧ್ಯಕ್ಷ ಜಯಗೌಡ ಪಾಟೀಲ್, ಉಪಾಧ್ಯಕ್ಷ ವಿಷ್ಣು ರೇಡೆಕರ್, ಇನ್ನುಳಿದ ನಿರ್ದೇಶಕರು, ಪುರಸಭೆ ಅಧ್ಯಕ್ಷ ಇಮ್ರಾನ್ ಮೊಮೀನ್, ಸಿಡಿಒ ಶಶಿಕಲಾ ಪಾಟೀಲ್, ಮುಖಂಡರಾದ ಮೌನೇಶ್ ಪೋತದಾರ, ರಿಷಬ್ ಪಾಟೀಲ್, ರವೀಂದ್ರ ಜಿಂಡ್ರಾಳಿ, ವೀರಣ್ಣ ಬಿಸಿರೊಟ್ಟಿ, ಕಿರಣಸಿಂಗ್ ರಜಪೂತ್, ಗ್ಯಾರಂಟಿ ಯೋಜನೆ ತಾಲ್ಲೂಕು ಅಧ್ಯಕ್ಷ ಶಾನೂಲ್ ತಹಸೀಲ್ದಾರ್ ಸೇರಿದಂತೆ ಸ್ಥಳೀಯ ಸಹಕಾರಿಗಳು ಇದ್ದರು.
ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಪಾಟೀಲ್ ಸ್ವಾಗತಿಸಿ ಪ್ರಾಸ್ತಾವಿಸಿದರು. ರೆಸಿಡೆಂಟ್ ಎಂಜನಿಯರ್ ನೇಮಿನಾಥ ಖೆಮಲಾಪುರೆ ನಿರೂಪಿಸಿದರು. ನಿರ್ದೇಶಕ ರವೀಂದ್ರ ಹಿಡಕಲ್ ವಂದಿಸಿದರು.
ಅಪ್ಪಣಗೌಡರ ಹೆಸರಿಡಲು ಸಲಹೆ ಈ ಭಾಗದಲ್ಲಿ ಸಹಕಾರ ವಲಯಕ್ಕೆ ಭದ್ರಬುನಾದಿ ಹಾಕಿದ ಅಪ್ಪಣಗೌಡರ ಹೆಸರನ್ನು ಸಂಘಕ್ಕೆ ನಾಮಕರಣ ಮಾಡಲು ಸಚಿವರು ಸಲಹೆ ನೀಡಿ ತಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಸಹಕಾರ ನೀಡಿ ಸಂಘವನ್ನು ಲಾಭದಲ್ಲಿ ತರಲು ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.