ADVERTISEMENT

ದೌರ್ಜನ್ಯ ಪ್ರಕರಣ: ತ್ವರಿತವಾಗಿ ವಿಲೇವಾರಿ ಮಾಡಿ

ಎಸ್‌.ಸಿ, ಎಸ್‌ಟಿ ದೌರ್ಜನ್ಯ ನಿಯಂತ್ರಣ ಜಿಲ್ಲಾಮಟ್ಟದ ಸಮಿತಿ ಸಭೆಯಲ್ಲಿ ಡಿ.ಸಿ ಸೂಚನೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 6:51 IST
Last Updated 1 ಜನವರಿ 2026, 6:51 IST
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಎಸ್.ಸಿ, ಎಸ್‌ಟಿ ದೌರ್ಜನ್ಯ ನಿಯಂತ್ರಣ ಜಿಲ್ಲಾಮಟ್ಟದ ಸಮಿತಿ ಸಭೆ ನಡೆಯಿತು
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಎಸ್.ಸಿ, ಎಸ್‌ಟಿ ದೌರ್ಜನ್ಯ ನಿಯಂತ್ರಣ ಜಿಲ್ಲಾಮಟ್ಟದ ಸಮಿತಿ ಸಭೆ ನಡೆಯಿತು   

ಬೆಳಗಾವಿ: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಬೇಕು. ಪರಿಶಿಷ್ಟರ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಗೆ ಅಗತ್ಯ ಕ್ರಮ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಎಸ್.ಸಿ, ಎಸ್‌ಟಿ ದೌರ್ಜನ್ಯ ನಿಯಂತ್ರಣ ಜಿಲ್ಲಾಮಟ್ಟದ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ತುರ್ತು ಸಂದರ್ಭ ಜಿಲ್ಲಾಸ್ಪತ್ರೆಗೆ ಬರುವ ಪರಿಶಿಷ್ಟರಿಗೆ ಜಾತಿ ಪ್ರಮಾಣಪತ್ರ ಇಲ್ಲವೆಂದು ಚಿಕಿತ್ಸೆ ವಿಳಂಬ ಮಾಡಬಾರದು. ಜಾತಿ ಪ್ರಮಾಣಪತ್ರ ಸಲ್ಲಿಕೆಗೆ ಅವಕಾಶ ನೀಡಿ ತ್ವರಿತವಾಗಿ ಚಿಕಿತ್ಸೆ ಒದಗಿಸಬೇಕು’ ಎಂದರು.

ADVERTISEMENT

‘ಬೆಳಗಾವಿಯ ರಾಣಿ ಪಾರ್ವತಿ ದೇವಿ(ಆರ್‌ಪಿಡಿ) ರಸ್ತೆಯಲ್ಲಿನ ವೃತ್ತಕ್ಕೆ ವೀರ ಮದಕರಿ ನಾಯಕರ ಹೆಸರು ನಾಮಕರಣ ಮಾಡುವ ಕುರಿತು ಸಭೆಯಲ್ಲಿ ಹಲವು ಬಾರಿ ಚರ್ಚಿಸಲಾಗಿದೆ. ಆದರೆ, ಮಹಾನಗರ ಪಾಲಿಕೆ ಪರಿಷತ್ ಸಭೆಯಲ್ಲಿ ಈ ವೃತ್ತಕ್ಕೆ ಬೇರೆ ಹೆಸರು ನಾಮಕರಣ ಮಾಡುವ ಕುರಿತು ಪ್ರಸ್ತಾಪಿಸಲಾಗಿದೆ. ಹಾಗಾಗಿ ಯಾವುದೇ ತೊಡಕು ಇಲ್ಲದಿರುವ ಬೇರೆ ವೃತ್ತಕ್ಕೆ ವೀರ ಮದಕರಿ ನಾಯಕರ ಹೆಸರು ನಾಮಕರಣ ಮಾಡಬಹುದು’ ಎಂದು ತಿಳಿಸಿದರು.

‘ಬೈಲಹೊಂಗಲ ತಾಲ್ಲೂಕಿನ ಬೆಳವಡಿ ಗ್ರಾಮದಲ್ಲಿ ಸ್ಮಶಾನಭೂಮಿ ಮಂಜೂರಾತಿಗೆ ಈಗಾಗಲೇ ಸ್ಥಳ ಗುರುತಿಸಲಾಗಿದೆ. ಸ್ಥಳೀಯರೊಂದಿಗೆ ತಹಶೀಲ್ದಾರ್‌ ಚರ್ಚಿಸಿ ವರದಿ ನೀಡಿದ ಬಳಿಕ, ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದರು.

ಸಮಿತಿ ನಾಮನಿರ್ದೇಶಿತ ಸದಸ್ಯರಾದ ಕರೆಪ್ಪ ಗುಡೆನ್ನವರ, ವಿಜಯ ತಳವಾರ, ಮುಖಂಡ ಮಲ್ಲೇಶ ಚೌಗಲೆ ಮಾತನಾಡಿದರು.

ನಗರ ಪೊಲೀಸ್ ಕಮಿಷನರ್‌ ಭೂಷಣ ಬೊರಸೆ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ.ಬಸರಗಿ, ದೌರ್ಜನ್ಯ ನಿಯಂತ್ರಣ ಸಮಿತಿ ನಾಮನಿರ್ದೇಶಿತ ಸದಸ್ಯ ಸಿದ್ರಾಯ ಮೇತ್ರಿ, ಮಹಾನಗರ ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ, ಸಮಾಜ ಕಲ್ಯಾಣ ಇಲಾಖೆ ಜಂಟಿನಿರ್ದೇಶಕ ರಾಮನಗೌಡ ಕನ್ನೋಳ್ಳಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಈಶ್ವರ ಗಡಾದ ಇತರರಿದ್ದರು.

‘ಸ್ಮಶಾನಕ್ಕಾಗಿ ಇನ್ನೊಂದು ಜಾಗ ಗುರುತಿಸಿ’

‘ಬೆಳಗಾವಿಯ ಸದಾಶಿವ ನಗರದ ಸ್ಮಶಾನಭೂಮಿ ನಿರ್ವಹಣೆಗೆ ತೊಂದರೆ ಆಗುತ್ತಿರುವ ಕಾರಣ ನಗರದ ಹೊರವಲಯದಲ್ಲಿ ಸ್ಮಶಾನಕ್ಕಾಗಿ ಹೆಚ್ಚುವರಿಯಾಗಿ ಇನ್ನೊಂದು ಜಾಗ ಗುರುತಿಸಿ. ಸ್ಥಳೀಯ ಶಾಸಕರಿಗೆ ಮಾಹಿತಿ ನೀಡಿದ ನಂತರ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಿ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ  ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.