ADVERTISEMENT

ವಡೇರಹಟ್ಟಿ: ವಿಜ್ಞಾನ ಲೋಕದ ಅನಾವರಣ

ಪುಟಾಣಿಗಳನ್ನು ಫುಳಕಗೊಳಿಸಿದ ಚಂದ್ರಯಾನ–3 ರಾಕೆಟ್‌ ಉಡಾವಣೆ ಪ್ರಾತ್ಯಕ್ಷಿಕೆ

ಬಾಲಶೇಖರ ಬಂದಿ
Published 13 ಮಾರ್ಚ್ 2024, 4:25 IST
Last Updated 13 ಮಾರ್ಚ್ 2024, 4:25 IST
ಮೂಡಲಗಿ ತಾಲ್ಲೂಕಿನ ವಡೇರಹಟ್ಟಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿಜ್ಞಾನ ಸಮಾವೇಶದಲ್ಲಿ ಚಂದ್ರಯಾನ–3 ಉಡಾವಾಣೆ ಪ್ರಾತ್ಯಕ್ಷತೆ ಗಮನಸೆಳೆಯಿತು
ಮೂಡಲಗಿ ತಾಲ್ಲೂಕಿನ ವಡೇರಹಟ್ಟಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿಜ್ಞಾನ ಸಮಾವೇಶದಲ್ಲಿ ಚಂದ್ರಯಾನ–3 ಉಡಾವಾಣೆ ಪ್ರಾತ್ಯಕ್ಷತೆ ಗಮನಸೆಳೆಯಿತು   

ಮೂಡಲಗಿ: ಅಲ್ಲಿ ವಿಜ್ಞಾನ ಲೋಕ ಅನಾವರಣಗೊಂಡಿತ್ತು. ಒಂದಕ್ಕಿಂತ ಇನ್ನೊಂದು ಮಾದರಿಗಳು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿದವು. ಬೆಂಕಿ ಚೆಲ್ಲುತ್ತ ಆಗಸದತ್ತ ಮುಖಮಾಡಿದ ‘ಚಂದ್ರಯಾನ–3’ ಪ್ರಾತ್ಯಕ್ಷಿತೆ ಸೂಜಿಗಲ್ಲಿನಂತೆ ಸೆಳೆಯಿತು. 

ತಾಲ್ಲೂಕಿನ ವಡೇರಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಜ್ಞಾನ ಸಮಾವೇಶದಲ್ಲಿ ಗಮನಸೆಳೆಯಿತು. ಶ್ರೀಹರಿಕೋಟಾದಲ್ಲಿ ಇಸ್ರೋ ತಂಡದವರು ‘ಚಂದ್ರಯಾನ–3’ ಉಡಾವಣೆ ಮಾಡಿದ ರೀತಿಯಲ್ಲೇ, ಇಲ್ಲಿಯೂ ಹಾರಿಸಿದ ಪ್ರಾತ್ಯಕ್ಷತೆ ಮಕ್ಕಳನ್ನು ಬಾಹ್ಯಾಕಾಶ ಲೋಕಕ್ಕೆ ಕರೆದೊಯ್ದಿತು. ವಡೇರಹಟ್ಟಿ ಕ್ಲಸ್ಟರ್‌ನ ಸರ್ಕಾರಿ ಪ್ರಾಥಮಿಕ ಶಾಲೆಗಳ ಮಕ್ಕಳು ಪ್ರದರ್ಶಿಸಿದ 40ಕ್ಕೂ ಅಧಿಕ ಮಾದರಿಗಳು ವಿಜ್ಞಾನದ ಮಹತ್ವ ಸಾರಿದವು.

‘ಸರ್ ಇದು ಉಪಗ್ರಹ ಒಯ್ಯುವ ರಾಕೆಟ್‌. ಇದರಲ್ಲಿ ಹೈಡ್ರೋಜನ್‌, ನೈಟ್ರೋಜನ್, ಟೆಟ್ರಾಕ್ಲೋರೈಡ್‌ ಎಂಬ ಮೂರು ವಿಭಾಗಗಳಿವೆ. ಇದರೊಂದಿಗೆ ಆಕ್ಸಿಜನ್‌ ಇರುತ್ತದೆ’ ಎಂದು ಹುಣಶ್ಯಾಳ ಪಿ.ಜಿಯ ಸರ್ಕಾರಿ ಶಾಲೆ ವಿದ್ಯಾರ್ಥಿನಿ ಅಪೂರ್ವಗೌಡ ಅಥಣಿ ವಿವರಿಸುತ್ತ, ಅಚ್ಚರಿ ಮೂಡಿಸಿದಳು.

ADVERTISEMENT

‘ಇದು ಸ್ವಯಂಚಾಲಿತವಾಗಿ ನೀರು ಎತ್ತುವ ಯಂತ್ರ. ನೀರಿನ ಒತ್ತಡಕ್ಕೆ ಚಕ್ರ ತಿರುಗುತ್ತದೆ. ಅದರಿಂದ ವಿದ್ಯುತ್‌ ಶೇಖರಣೆಯಾಗುತ್ತದೆ’ ಎಂದು ಮತ್ತೊಬ್ಬ ವಿದ್ಯಾರ್ಥಿ ನಾಗರಾಜ ಅಂಬಾಡಿ ವಿವರಿಸಿದನು.

ಕಬ್ಬು ಕತ್ತರಿಸುವ ಯಂತ್ರ, ಎಲೆಯನ್ನು ನುಣ್ಣಗೆ ಕತ್ತರಿಸಿ ಜಾನುವಾರುಗಳಿಗೆ ಮೇವು ಸಿದ್ಧಗೊಳಿಸುವ ಮಾದರಿ ರೈತರನ್ನು ಸೆಳೆಯಿತು. ಗಾಳಿಯಿಂದ ವಿದ್ಯುತ್‌ ಉತ್ಪಾದನೆ, ಮಳೆನೀರು ಸಂಗ್ರಹ, ಜ್ವಾಲಾಮುಖಿ, ಸೂಕ್ಷ್ಮದರ್ಶಕ, ಮಾನವನ ಶ್ವಾಸಕ್ರಿಯೆ, ಸೌರವ್ಯೂಹ, ನೀರು ಶುದ್ಧೀಕರಣ, ರಕ್ತ ಪರಿಚಲನೆ ಹೀಗೆ... ವಿವಿಧ ಮಾದರಿಗಳು ವಿಜ್ಞಾನ ಸಮಾವೇಶದ ಮೆರಗು ಹೆಚ್ಚಿಸಿದವು.

‘ನಿರುಪಯುಕ್ತವಾಗಿ ಬಿಸಾಡಿದ್ದ ರಟ್ಟು, ಟೂಥ್‌ಬ್ರಶ್, ನೀರಿನ ಬಾಟಲಿ, ಪ್ಲಾಸ್ಟಿಕ್‌ ಗ್ಲಾಸ್‌, ಸಿರಿಂಜ್‌ ಬಾಟಲಿ, ಪೈಪುಗಳನ್ನು ಬಳಸಿ, ಮಕ್ಕಳು ವಿಜ್ಞಾನ ಮಾದರಿ ರೂಪಿಸಿದ್ದಾರೆ. ಶಿಕ್ಷಕರು ಅವರಿಗೆ ನೀರೆರೆದು ಪ್ರೋತ್ಸಾಹಿಸಿದ್ದಾರೆ. ಎಲ್ಲ ಮಾದರಿಗಳು ಉತ್ತಮವಾಗಿವೆ’ ಎಂದು ಸಿಆರ್‌ಪಿ ಆನಂದ ಹನಮನ್ನವರ ‘ಪ್ರಜಾವಾಣಿ’ ಗೆ ಪ್ರತಿಕ್ರಿಯಿಸಿದರು.

‘ಶಿಕ್ಷಕ ಎ.ಆರ್.ಕೊಪ್ಪದ ಹಾಗೂ ವಿದ್ಯಾರ್ಥಿಗಳು ಒಂದು ವಾರ ಶ್ರಮಿಸಿ, ಚಂದ್ರಯಾನ–3ರ ಮಾದರಿ ಸಿದ್ಧಪಡಿಸಿದ್ದಾರೆ’ ಎಂದರು.

ಮೂಡಲಗಿ ತಾಲ್ಲೂಕಿನ ವಡೇರಹಟ್ಟಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಸಮಾವೇಶದಲ್ಲಿ ಹುಣಶ್ಯಾಳ ಪಿ.ಜಿಯ ವಿದ್ಯಾರ್ಥಿಗಳು ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದರು

ಗ್ರಾಮ ಪಂಚಾಯ್ತಿಯಿಂದ ಲ್ಯಾಬ್‌: ‘ವಡೇರಹಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯ್ತಿಯಿಂದ ₹2 ಲಕ್ಷ ವೆಚ್ಚದಲ್ಲಿ ಎಪಿಜೆ ಅಬ್ದುಲ್‌ ಕಲಾಂ ವಿಜ್ಞಾನ ಪ್ರಯೋಗಾಲಯ ನಿರ್ಮಿಸಲಾಗಿದೆ. ಅಂತೆಯೇ ಫುಲಗಡ್ಡಿ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಹುಣಶ್ಯಾಳ ಪಿ.ಜಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲೂ ಗ್ರಾಮ ಪಂಚಾಯ್ತಿಗಳಿಂದ ವಿಜ್ಞಾನ ಪ್ರಯೋಗಾಲಯ ತಲೆ ಎತ್ತಿದ್ದು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬಿತ್ತುತ್ತಿವೆ’ ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಪ್ರತಿಕ್ರಿಯಿಸಿದರು. ‘ವಡೇರಹಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಇತ್ತಿಚೆಗೆ ಭೇಟಿ ನೀಡಿದ್ದ ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶಕುಮಾರ ಸಿಂಗ್ ವಡೇರಹಟ್ಟಿ ಕ್ಲಸ್ಟರ್‌ನಲ್ಲಿ ವಿಜ್ಞಾನಕ್ಕೆ ನೀಡಿರುವ ಪ್ರಾಧಾನ್ಯತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.