ADVERTISEMENT

‘ಮುಂಬರುವ ಚುನಾವಣೆಗಳಲ್ಲಿ ಮರಾಠಿ ಭಾಷಿಗರು ಒಗ್ಗೂಡಬೇಕು’

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 17:29 IST
Last Updated 8 ಫೆಬ್ರುವರಿ 2021, 17:29 IST

ಬೆಳಗಾವಿ: ‘ಮರಾಠಿ ಭಾಷಿಗರಿರುವ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಶಿವಸೇನಾ ಪ್ರಮುಖ ಉದ್ಧವ್ ಠಾಕ್ರೆ ಹೇಳಿರುವುದು ಸರಿಯಾಗಿಯೇ ಇದೆ. ಇದನ್ನು ನಾವೆಲ್ಲರೂ ಬೆಂಬಲಿಸಬೇಕು’ ಎಂದು ಶಿವಸೇನಾ ಮುಖಂಡ ಪ್ರಕಾಶ ಶಿರೋಳಕರ ಹೇಳಿದರು.

ನಗರದ ರಾಮಲಿಂಗಖಿಂಡ್ ಗಲ್ಲಿಯ ಅಶೋಕ ಚೌಕದಲ್ಲಿ ಶಿವಸೇನಾದಿಂದ ಆಯೋಜಿಸಿದ್ದ, ಮರಾಠಿ ಭಾಷಿಗರ ಪರ ಹೋರಾಟದಲ್ಲಿ ಪ್ರಾಣ ಕಳೆದುಕೊಂಡವರ ಸ್ಮರಣಾರ್ಥ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈ ಬಾರಿ ಮರಾಠಿ ಭಾಷಿಗರನ್ನು ಒಗ್ಗೂಡಿಸಿ ಮುಂಬರುವ ಎಲ್ಲ ಚುನಾವಣೆಗಳನ್ನೂ ಎದುರಿಸಲು ಶಿವಸೇನಾ ಸಜ್ಜಾಗುತ್ತಿದೆ. ಜಿಲ್ಲಾ ಪಂಚಾಯ್ತಿ, ಮಹಾನಗರ ಪಾಲಿಕೆ, ವಿಧಾನಸಭೆ, ಲೋಕಸಭೆ ಹೀಗೆ ಎಲ್ಲ ಚುನಾವಣೆಗಳಲ್ಲೂ ಸ್ಪರ್ಧೆಗೆ ಇಳಿಯಲಿದೆ. ಮರಾಠಿ ಭಾಷಿಗರು ಯಾವುದೇ ಪಕ್ಷದವರೇ ಆಗಿರಲಿ ಅವರನ್ನು ಬೆಂಬಲಿಸಬೇಕು. ಮರಾಠಿ ಭಾಷೆ, ಸಂಸ್ಕೃತಿಯ ಪ್ರಶ್ನೆ ಬಂದಾಗ ಎಲ್ಲರೂ ಒಂದಾಗಬೇಕು. ಈ ವಿಚಾರದಲ್ಲಿ ಶಿವಸೇನಾ ಬೆಂಬಲಿಸಬೇಕು. ಆಗ ಮಾತ್ರ ಹುತಾತ್ಮರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದಂತೆ ಆಗುತ್ತದೆ’ ಎಂದು ಕೋರಿದರು.

ADVERTISEMENT

ಪ್ರಮುಖರು ಮತ್ತು ಕಾರ್ಯಕರ್ತರು ಪಾಲ್ಗೊಂಡು ಮರಾಠಿ ಭಾಷಿಗ ಹೋರಾಟಗಾರರ ಪರ ಘೋಷಣೆ ಕೂಗಿದರು. ಸ್ಮಾರಕಕ್ಕೆ ನಮನ ಸಲ್ಲಿಸಿದರು.

ಮುಖಂಡರಾದ ಮನೋಹರ ಕಿಣೇಕರ, ಪ್ರಕಾಶ ಮರಗಾಲೆ, ನಾಗನೂರಿ, ಮಾಲೋಜಿ ಅಷ್ಟೇಕರ, ಪ್ರವೀಣ ತೇಜಂ, ಮದನ ಬಾಮಣೆ, ದತ್ತಾ ಜಾಧವ್, ಕೃಷ್ಣ ಹುಂದ್ರೆ, ಶುಭಂ ಶೇಳಕೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.