ADVERTISEMENT

ಬೆಳಗಾವಿ: ಜಿಲ್ಲೆ ವಿಭಜನೆಯಾಗಬೇಕು: ರಮೇಶ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 10:24 IST
Last Updated 30 ನವೆಂಬರ್ 2020, 10:24 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಳಗಾವಿ: ‘ಬೆಳಗಾವಿ ಜಿಲ್ಲೆ ವಿಭಜನೆ ಮಾಡಬೇಕು ಎಂಬ ಬೇಡಿಕೆ ನಮ್ಮದು ಕೂಡ ಆಗಿದೆ. ಆದರೆ, ಅದಕ್ಕೆ ಕೆಲವು ತೊಡಕು ಮತ್ತು ಸಮಸ್ಯೆಗಳಿವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಬೆಳಗಾವಿಯೊಂದಿಗೆ ಚಿಕ್ಕೋಡಿ ಹಾಗೂ ಗೋಕಾಕ ಜಿಲ್ಲೆ ರಚನೆ ಆಗಲೇಬೇಕು. ಆದರೆ, ಗಡಿ ವ್ಯಾಜ್ಯ ಸುಪ್ರೀಂ ಕೋರ್ಟ್‌ನಲ್ಲಿದೆ. ಅದು ಇತ್ಯರ್ಥ ಆಗುವವರೆಗೂ ಜಿಲ್ಲೆ ವಿಭಜಿಸಬಾರದು ಎನ್ನುವುದು ಕನ್ನಡಪರ ಸಂಘಟನೆಗಳ ಆಗ್ರಹವಾಗಿದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕಾಗುತ್ತದೆ’ ಎಂದರು.

ಶಾಸಕ ಸತೀಶ ಜಾರಕಿಹೊಳಿ ಬೆಂಬಲಿಗ, ಜಿಲ್ಲಾ ಪಂಚಾಯಿತಿ ಸದಸ್ಯ ಕೃಷ್ಣ ಅನಗೋಳಕರ ಬಿಜೆಪಿ ಸೇರುವುದಾಗಿ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ಜಿಲ್ಲಾ ಪಂಚಾಯಿತಿಯ 25 ಮಂದಿ ಸದಸ್ಯರು ನನ್ನ ಬೆಂಬಲಿಗರೇ. ಕೃಷ್ಣ ಯಾಕೆ ರಾಜೀನಾಮೆ ಕೊಟ್ಟಿದ್ದಾರೋ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಂದಿ ರಾಜೀನಾಮೆ ನೀಡಬಹುದು. ಆದರೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡುವ ಉದ್ದೇಶವಿಲ್ಲ. ಅಧ್ಯಕ್ಷೆಯಾಗಿರುವ ಆ ಹೆಣ್ಣು ಮಗಳಿಗೆ (ಆಶಾ ಐಹೊಳೆ) ತೊಂದರೆ ಕೊಡುವುದಿಲ್ಲ’ ಎಂದು ಹೇಳಿದರು.

ADVERTISEMENT

ಆಯೋಗಗಳ ವರದಿ ಪ್ರಕಾರ ಆಗಲಿ: ಕಡಾಡಿ

ಬೆಳಗಾವಿ: ‘ಈ ಹಿಂದೆ ಸರ್ಕಾರ ನೇಮಿಸಿದ್ದ ಆಯೋಗಗಳು ಅಧ್ಯಯನ ನಡೆಸಿ ನೀಡಿರುವ ವರದಿಗಳ ಆಧಾರದ ಮೇಲೆ ಜಿಲ್ಲೆಯನ್ನು ವಿಭಜಿಸಬೇಕು’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದರು.

ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಗೋಕಾಕ ಜಿಲ್ಲೆ ರಚನೆ ಆಗಲೇಬೇಕು. ಪರಿಣಾಮಕಾರಿ ಆಡಳಿತ ಹಾಗೂ ಅಭಿವೃದ್ಧಿ ಹಿತದೃಷ್ಟಿಯಿಂದ ಸಣ್ಣ ಸಣ್ಣ ಜಿಲ್ಲೆಗಳ ಅಗತ್ಯವಿದೆ. ಈ ವಿಷಯದಲ್ಲಿ ಮುಖ್ಯಮಂತ್ರಿಗೂ ಪತ್ರ ಬರೆದಿದ್ದೇನೆ. ಜಿಲ್ಲೆಯ ಎಲ್ಲ ನಾಯಕರನ್ನೂ ಸೇರಿಸಿ ಸಮಾಲೋಚನೆ ನಡೆಸುವ ಉದ್ದೇಶವೂ ಇದೆ’ ಎಂದರು.

‘ರಾಜಕೀಯ ಕಾರಣಗಳಿಗಾಗಿ ಪ್ರತ್ಯೇಕ ಜಿಲ್ಲೆ ಮಾಡುತ್ತಾ ಹೋಗುವುದರಲ್ಲಿ ಅರ್ಥವಿಲ್ಲ. ಆಯೋಗಗಳ ವರದಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು. ಬೆಳಗಾವಿಯನ್ನು 3 ಜಿಲ್ಲೆಗಳನ್ನಾಗಿ ಮಾಡುವುದು (ಬೆಳಗಾವಿ, ಗೋಕಾಕ ಮತ್ತು ಚಿಕ್ಕೋಡಿ) ಸೂಕ್ತವಾಗಿದೆ. ಈ ವಿಷಯದಲ್ಲಿ ಜಿಲ್ಲೆಯ ನಾಯಕರು ಒಮ್ಮತಕ್ಕೆ ಬರುವುದು ಕಷ್ಟಸಾಧ್ಯವಾಗುತ್ತದೆ. ಆದ್ದರಿಂದ, ಸರ್ಕಾರವು ವಿಭಜನೆಯ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.