ADVERTISEMENT

ಬೆಳಗಾವಿ: SSLC ಪರೀಕ್ಷೆಯಲ್ಲಿ ಸಾಧನೆ ಮಾಡಿದ ರೈತನ ಮಗಳು, ಊರಿನಲ್ಲಿ ಸಂಭ್ರಮ

ಇಮಾಮ್‌ಹುಸೇನ್‌ ಗೂಡುನವರ
Published 3 ಮೇ 2025, 4:16 IST
Last Updated 3 ಮೇ 2025, 4:16 IST
ಸಾಧಕ ವಿದ್ಯಾರ್ಥಿ ರೂಪಾ ಪಾಟೀಲ ಸತ್ಕರಿಸಿದ ಶಿಕ್ಷಕರು
ಸಾಧಕ ವಿದ್ಯಾರ್ಥಿ ರೂಪಾ ಪಾಟೀಲ ಸತ್ಕರಿಸಿದ ಶಿಕ್ಷಕರು   

ದೇವಲಾಪುರ (ಬೆಳಗಾವಿ ಜಿಲ್ಲೆ): ‘ನವೋದಯ ಶಾಲೆಯಲ್ಲಿ 6ನೇ ತರಗತಿಗೆ ಪ್ರವೇಶ ಪಡೆಯಬೇಕು ಎಂಬುದು ನನ್ನ ಕನಸಾಗಿತ್ತು. ಆದರೆ, ಕೊರೊನಾ ಸಂಕಷ್ಟ ಕಾಲದಲ್ಲಿ ಅದು ಕೈಗೂಡಲಿಲ್ಲ. ಹೀಗಿದ್ದರೂ ಛಲ ಬಿಡದೆ ಓದಿದ್ದಕ್ಕೆ ಇಂದು ಫಲ ಸಿಕ್ಕಿದೆ. ಐದು ವರ್ಷಗಳ ಹಿಂದಿನ ನೋವನ್ನು ಈ ಸಾಧನೆ ಮರೆಸಿದೆ...’

ಹೀಗೆ ‘ಪ್ರಜಾವಾಣಿ’ ಜತೆ ಸಂತಸ ಹಂಚಿಕೊಂಡಿದ್ದು ಬೈಲಹೊಂಗಲ ತಾಲ್ಲೂಕಿನ ದೇವಲಾಪುರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ರೂಪಾ ಚನಗೌಡ ಪಾಟೀಲ.

ಬಾಲ್ಯದಿಂದಲೂ ಓದಿನಲ್ಲಿ ಮುಂದಿದ್ದ ರೂಪಾ, ರಾಷ್ಟ್ರೀಯ ಮೀನ್ಸ್‌ ಕಮ್‌ ಮೆರಿಟ್‌ ಸ್ಕಾಲರ್‌ಷಿಪ್ (ಎನ್‌ಎಂಎಂಎಸ್‌) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ವಿದ್ಯಾರ್ಥಿವೇತನ ಪಡೆಯುತ್ತಿದ್ದಾರೆ. ಜಿಲ್ಲಾ ಪಂಚಾಯಿತಿ ನಡೆಸಿದ ಟ್ಯಾಲೆಂಟ್‌ ಸರ್ಚ್‌ ಪರೀಕ್ಷೆಯಲ್ಲಿ ಜಿಲ್ಲೆಗೆ 6ನೇ ಸ್ಥಾನ ಗಳಿಸಿದ್ದಾರೆ. ಈಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲೂ ಸಾಧನೆ ಮೆರೆದಿದ್ದಾರೆ.

ADVERTISEMENT

‘ಶಾಲೆಯಲ್ಲಿ ಕಲಿಕೆಗೆ ಪೂರಕ ವಾತಾವರಣವಿತ್ತು. ಶಿಕ್ಷಕರು ಉತ್ತಮವಾಗಿ ಬೋಧಿಸುತ್ತಿದ್ದರು. ಶೈಕ್ಷಣಿಕ ಗೊಂದಲವಿದ್ದರೆ ಬಗೆಹರಿಸಿದರು. ಪುಸ್ತಕ ಒದಗಿಸಿದರು. ಕಳೆದ ವರ್ಷ ಬೇಸಿಗೆಯಲ್ಲಿ ಟ್ಯೂಷನ್‌ ಹೋಗಿದ್ದು ಬಿಟ್ಟರೆ ಮನೆಯಲ್ಲೇ ಓದಿದ್ದೆ. ಯೋಜನಾಬದ್ಧ ಅಭ್ಯಾಸದಿಂದ ಪೂರ್ಣ ಅಂಕ ಸಿಕ್ಕಿತು’ ಎಂದು ರೂಪಾ ಹೇಳಿದರು.

ನಾನೇ ಮೊದಲಿಗಳು: ‘ನಮ್ಮೂರಿನ ಖಾಸಗಿ ಶಾಲೆಯಲ್ಲಿ 1ರಿಂದ 2ನೇ ತರಗತಿ ಓದಿ, ಬೈಲಹೊಂಗಲದ ಖಾಸಗಿ ಶಾಲೆಯಲ್ಲಿ 3ನೇ ತರಗತಿಗೆ ಪ್ರವೇಶ ಪಡೆದಿದ್ದೆ. 4ನೇ ತರಗತಿಯಲ್ಲಿ ಸರ್ಕಾರಿ ಶಾಲೆಯಲ್ಲಿ ಪ್ರವೇಶ ಪಡೆದವಳು ಇಲ್ಲಿಯೇ ಓದು ಮುಂದುವರಿಸಿದ್ದೇನೆ. 1ನೇ ತರಗತಿಯಿಂದಲೂ ನಾನು ಪ್ರಥಮ ಸ್ಥಾನ ಯಾರಿಗೂ ಬಿಟ್ಟುಕೊಟ್ಟಿಲ್ಲ. ಈಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲೂ ನಾನೇ ಮೊದಲಿಗಳು’ ಎಂದು ಸಂತಸಪಟ್ಟರು ರೂಪಾ.

ನಿರಂತರ ಚಟುವಟಿಕೆ: ‘ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ ಗಣಿತ ಮೇಳ, ವಿಜ್ಞಾನ ವಸ್ತುಪ್ರದರ್ಶನ, ರಸಪ್ರಶ್ನೆ ಮತ್ತಿತರ ಶೈಕ್ಷಣಿಕ ಚಟುವಟಿಕೆ ನಿರಂತರವಾಗಿ ಕೈಗೊಂಡೆವು. ಎರಡು ಬಾರಿ ಸರಣಿ ಪರೀಕ್ಷೆ ನಡೆಸಿದೆವು. ಇದರಿಂದಾಗಿ ರೂಪಾ ಸೇರಿದಂತೆ ಹಲವು ವಿದ್ಯಾರ್ಥಿಗಳು ಉತ್ತಮ ಸಾಧನೆ ಮೆರೆದಿದ್ದಾರೆ’ ಎನ್ನುತ್ತಾರೆ ದೇವಲಾಪುರ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಜಿ.ಡಿ.ಮರೆನ್ನವರ.

ಶೈಕ್ಷಣಿಕ ಸಾಧನೆ ಮೆರೆಯಲು ದೊಡ್ಡ ಶಿಕ್ಷಣ ಸಂಸ್ಥೆಯಲ್ಲೇ ಓದಬೇಕು ಎಂದೇನಿಲ್ಲ. ಸಾಧಿಸುವ ಛಲ ಉತ್ತಮ ಶಿಕ್ಷಕ ಬಳಗವಿದ್ದರೆ ಸರ್ಕಾರಿ ಶಾಲೆಯಲ್ಲೂ ಮಿಂಚಬಹುದು
ರೂಪಾ ಪಾಟೀಲ ವಿದ್ಯಾರ್ಥಿನಿ
ಹಿರಿಯ ಪುತ್ರಿ ಪಿಯು ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಳು. ಈಗ ಕಿರಿಯವಳು ಎಸ್‌ಎಸ್‌ಎಲ್‌ಸಿಯಲ್ಲಿ ಸಾಧನೆಗೈದಿದ್ದು ಖುಷಿ ತಂದಿದೆ
ಚನಗೌಡ ಪಾಟೀಲ ವಿದ್ಯಾರ್ಥಿನಿ ತಂದೆ

ಹಬ್ಬದ ವಾತಾವರಣ

ಕೃಷಿ ಹಿನ್ನೆಲೆ ಹೊಂದಿರುವ ರೂಪಾ ಮನೆಯಲ್ಲಿ ಶುಕ್ರವಾರ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸಂಬಂಧಿಕರು ಶಿಕ್ಷಕರು ಮತ್ತು ಸ್ನೇಹಿತರು ತಂಡೋಪತಂಡವಾಗಿ ಮನೆಗೆ ಬಂದು ರೂಪಾಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.