ADVERTISEMENT

ಬೆಳಗಾವಿ: ಒಂದೇ ನಗರದಲ್ಲಿ 2 ಸರ್ಕಾರಿ ಮೇಳಗಳು

ಏಕಕಾಲಕ್ಕೆ ಎರಡು ಕಡೆ ಬೃಹತ್‌ ವಸ್ತು ಪ್ರದರ್ಶನ: ಮಾರಾಟ ಮೇಳಗಳ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 2:21 IST
Last Updated 14 ಡಿಸೆಂಬರ್ 2025, 2:21 IST
ಬೆಳಗಾವಿಯಲ್ಲಿ ನಡೆದ ಸರಸ್‌ ವಸ್ತು ಪ್ರದರ್ಶನದಲ್ಲಿ ‘ಚಿಕ್ಕಾಲಗುಡ್ಡಿ ಕೌದಿ’ ಪ್ರದರ್ಶಿಸಿದ ಸ್ವ ಸಹಾಯ ಸಂಘದ ಸದಸ್ಯೆಯರು ಪ್ರಜಾವಾಣಿ ಚಿತ್ರ
ಬೆಳಗಾವಿಯಲ್ಲಿ ನಡೆದ ಸರಸ್‌ ವಸ್ತು ಪ್ರದರ್ಶನದಲ್ಲಿ ‘ಚಿಕ್ಕಾಲಗುಡ್ಡಿ ಕೌದಿ’ ಪ್ರದರ್ಶಿಸಿದ ಸ್ವ ಸಹಾಯ ಸಂಘದ ಸದಸ್ಯೆಯರು ಪ್ರಜಾವಾಣಿ ಚಿತ್ರ   

ಬೆಳಗಾವಿ: ಒಂದೆಡೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಳಿಗೆಗಳು, ಇನ್ನೊಂದೆಡೆ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಮತ್ತು ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ ಹಾಕಿದ ಮಳಿಗೆಗಳು.

ನಗರದ ಸರ್ಕಾರಿ ಸರದಾರ್ಸ್‌ ಮೈದಾನ ಹಾಗೂ ಸಿ.‍‍ಪಿ.ಇಡಿ ಮೈದಾನದಲ್ಲಿ ಈ ಎರಡೂ ವಸ್ತು ಪ್ರದರ್ಶನಗಳು ನಡೆದಿವೆ. ಒಂದೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಇನ್ನೊಂದೆಡೆ ನೀರಸ ಕಂಡು ಬಂದಿದೆ. ಏಕಕಾಲಕ್ಕೆ ಸರ್ಕಾರದ ಎರಡೂ ಪ್ರದರ್ಶನಗಳನ್ನು ಆಯೋಜಿಸಿದ್ದರಿಂದ ಗ್ರಾಹಕರು ವಿಭಜನೆಗೊಂಡಿದ್ದಾರೆ.

ಪ್ರಾಧಿಕಾರದಿಂದ ಸಿ‍.ಪಿ.ಇಡಿ ಮೈದಾನದಲ್ಲಿ ಬೃಹತ್‌ ವಸ್ತು ಪ್ರದರ್ಶನ ಆರಂಭಿಸಲಾಗಿದೆ. 

ADVERTISEMENT

ಇಲ್ಲಿನ ಸರ್ಕಾರಿ ಸರದಾರ್ಸ್‌ ಪ್ರೌಢಶಾಲೆ ಮೈದಾನದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ(ಸರಸ್ ಮೇಳ) ಬೆಳಗಾವಿಗರ ಮನ ಗೆದ್ದಿದೆ. ವಿವಿಧ 15 ಇಲಾಖೆಗಳಿಗೆ ಸಂಬಂಧಿಸಿದ ಹಲವಾರು ಮಳಿಗೆಗಳು ಇಲ್ಲಿವೆ. ಅಲ್ಲದೇ ಮಹಿಳಾ ಸ್ವಸಹಾಯ ಗುಂಪುಗಳು, ದೇಸಿ ಉತ್ಪನ್ನಗಳು, ಆಹಾರ ಮಳಿಗೆಗಳಿವೆ. ಅತ್ಯಾಧುನಿಕ ತಂತ್ರಜ್ಞಾನದ ಮೋಜಿನ ಆಟಗಳನ್ನೂ ಏರ್ಪಡಿಸಿದ್ದು ಗಮನ ಸೆಳೆಯುತ್ತಿದೆ. ಇದಕ್ಕೆ ₹60 ಪ್ರವೇಶ ಶುಲ್ಕವಿರುವ ಕಾರಣ ಬಡ ಹಾಗೂ ಸಾಮಾನ್ಯ ವರ್ಗದ ಜನ ಇತ್ತ ಹೋಗುತ್ತಿಲ್ಲ. ಮೊದಲ ಐದು ದಿನ ಜನಸಂದಣಿ ಕಡಿಮೆ ಕಂಡುಬಂತು.

ಸರಸ್‌ನಲ್ಲಿ ಏನೆನಿದೆ: ಸರ್ದಾರ್ಸ್‌ ಮೈದಾನದಲ್ಲಿ ಈ ಬಾರಿ ಕಡಿಮೆ ಮಳಿಗೆ ಹಾಕಲಾಗಿದೆ. ಆದರೂ ಪ್ರತಿ ದಿನ ಸಂಜೆ ಜನಜಂಗುಳಿ ಕಂಡುಬರುತ್ತಿದೆ.

ಗ್ರಾಮೀಣ ಮತ್ತು ನಗರ ಪ್ರದೇಶದ ಸ್ವ-ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿರುವ ಚನ್ನಪಟ್ಟಣದ ಮರದ ಗೊಂಬೆಗಳು, ಕೊಪ್ಪಳದ ಕಿನ್ನಾಳ ಆಟದ ಸಾಮಾನುಗಳು, ಇಳಕಲ್ ಸೀರೆಗಳು, ಕೊಪ್ಪಳದ ಬಾಳೆ ನಾರಿನ ಉತ್ಪನ್ನಗಳು, ಉತ್ತರಕನ್ನಡದ ಚಿತ್ತಾರ ಕಲೆ ಉತ್ಪನ್ನಗಳು, ಚಿಕ್ಕಬಳ್ಳಾಪುರ ಚರ್ಮದಿಂದ ತಯಾರಿಸಿದ ವಿವಿಧ ವಿನ್ಯಾಸದ ಆಲಂಕಾರಿಕ ದೀಪಗಳು, ವಿಜಯನಗರ ಕಂಬಳಿ ಮತ್ತು ಢಮರು, ರಾಯಚೂರಿನ ಮುತ್ತಿನಹಾರ, ಶಿವಮೊಗ್ಗ ಮಣಿಸರಗಳು, ಬಿದರಿ, ಸಂಡೂರ ಲಂಬಾಣಿ ಉತ್ಪನ್ನಗಳು, ಮೈಸೂರು ಇನ್–ಲೇ, ನವಲಗುಂದ ಧರಿ ಹಾಗೂ ರೇಷ್ಮೆ ಸೀರೆಗಳು, ವಿವಿಧ ನವಾಕರ್ಷಣೆಯ ಬಟ್ಟೆಗಳು, ವಿವಿಧ ವಿನ್ಯಾಸದ ಬ್ಯಾಗ್ ಮತ್ತು ಗೃಹಾಲಂಕಾರ ವಸ್ತುಗಳು, ಪಾರಂಪರಿಕ ವಸ್ತುಗಳು, ಗೃಹೋಪಯೋಗಿ ವಸ್ತುಗಳು, ನವೀನ ವಿನ್ಯಾಸದ ಆಭರಣಗಳು, ಆಹಾರ ಉತ್ಪನ್ನಗಳು ಮುಂತಾದವುಗಳು ಸಾರ್ವಜನಿಕರಿಗೆ ಕೈಗೆಟುಕುವ ಬೆಲೆಯಲ್ಲಿವೆ.

ದೇಸಿ ಕೌದಿ, ಕಂಬಳಿಗಳು, ಬಿಹಾರ ಮತ್ತು ಉತ್ತರ ಪ್ರದೇಶ ಖಾದಿ ವಸ್ತ್ರಗಳು, ಕಾಶ್ಮೀರಿ ಸೀರೆಗಳು ಸೇರಿದಂತೆ ಮಹಿಳೆಯರನ್ನು ಆಕರ್ಷಿಸುವ ವಸ್ತುಗಳೇ ಹೆಚ್ಚಾಗಿವೆ.

ಬೆಳಗಾವಿಯಲ್ಲಿ ನಡೆದ ಸರಸ್‌ ವಸ್ತು ಪ್ರದರ್ಶನದಲ್ಲಿ ಕಿನ್ನಾಳದ ಗೊಂಬೆಗಳು ಗಮನ ಸೆಳೆಯುತ್ತಿವೆ  ಪ್ರಜಾವಾಣಿ ಚಿತ್ರ

ನೀರೂರಿಸುವ ಹುಣಸೆ ಚಿಗಳಿ

ಮಳಿಗೆಯಲ್ಲಿ ಈ ಬಾರಿ ಮೂರು ಕಡೆ ಹುಣಸೆ ಚಿಗಳಿ ಮಾರಾಟ ಮಳಿಗೆಗಳೂ ಇವೆ. ಅದರಲ್ಲೂ ಬೈಲಗಹೊಂಗಲದ ಇಮಲಿಚೋಕೊ ಚಿಗಳಿ ಗ್ರಾಹಕರನ್ನು ಹೆಚ್ಚು ಸೆಳೆಯುತ್ತಿದೆ. ಅತ್ಯಂತ ರುಚಿಕಟ್ಟಾದ ಈ ಚಿಗಳಿ ಮಳಿಗೆ ಮುಂದೆ ಹಾದು ಹೋಗುವವರ ಬಾಯಲ್ಲಿ ನೀರೂರುವಂತೆ ಮಾಡುತ್ತಿದೆ. ಇದಲ್ಲದೇ ಬೆಳಗಾವಿಯ ಖಡಕ್ ರೊಟ್ಟಿ ಚಟ್ನಿ ಹಪ್ಪಳ ಸಂಡಿಗೆ ಕುಂದಾ ಗೋಕಾಕ ಕರದಂಟು ಬಳ್ಳಾರಿ ಅಂಜೂರ ಹಣ್ಣಿನ ಉತ್ಪನ್ನ ಚಿತ್ರದುರ್ಗ ಅಡುಗೆ ಎಣ್ಣೆ ಚಾಮರಾಜನಗರ ಜೇನು ತುಪ್ಪ ಸೇರಿದಂತೆ ಮಸಾಲಾ ಉತ್ಪನ್ನಗಳು ಸಿರಿ ಧಾನ್ಯ ಉತ್ಪನ್ನಗಳು ಮೌಲ್ಯವರ್ಧಿತ ಕರಾವಳಿ ಉತ್ಪನ್ನಗಳು ಈ ಮೇಳದ ವಿಶೇಷ ಆಹಾರ ಉತ್ಪನ್ನಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.