ಬೆಳಗಾವಿ: ‘ವಾಲ್ಮೀಕಿ ಸಮುದಾಯಕ್ಕೆ ಅಶ್ಲೀಲ ಪದ ಬಳಸಿ ಅವಹೇಳನ ಮಾಡಿದ ಮಾಜಿ ಸಂಸದ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ ಕತ್ತಿ ಅವರನ್ನು ಬಂಧಿಸಬೇಕು’ ಎಂದು ಆಗ್ರಹಿಸಿ, ನಗರದಲ್ಲಿ ವಾಲ್ಮೀಕಿ ಸಮುದಾಯದವರು ಸೋಮವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ರಾಣಿ ಚನ್ನಮ್ಮನ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಕಾರರು, ರಮೇಶ ಕತ್ತಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ, ರಮೇಶ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ, ಬೆಂಕಿ ಹಚ್ಚಿದರು.
ವಾಲ್ಮೀಕಿ ಸಮುದಾಯದ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ತಳವಾರ, ‘ಜವಾಬ್ದಾರಿ ಸ್ಥಾನದಲ್ಲಿರುವ ರಮೇಶ ಕತ್ತಿ ಅವರು ವಾಲ್ಮೀಕಿ ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡಿದ್ದು ಸರಿಯಲ್ಲ. ಶೋಷಿತ ಸಮುದಾಯವನ್ನು ಹೀಯಾಳಿಸಿದ ಅವರಿಗೆ ಮುಂದೆ ಪ್ರತ್ಯುತ್ತರ ಕೊಡುತ್ತೇವೆ’ ಎಂದು ಎಚ್ಚರಿಕೆ ಕೊಟ್ಟರು.
ಮುಖಂಡರಾದ ದಿನೇಶ ಬಾಗಡೆ, ಮಹೇಶ ಶೀಗಿಹಳ್ಳಿ, ಸುರೇಶ ಗವನ್ನವರ, ಪಾಂಡುರಂಗ ನಾಯಿಕ, ಸಂಜಯ ನಾಯಿಕ, ಪರಶುರಾಮ ಢಗೆ, ಮಲಗೌಡ ಪಾಟೀಲ, ಸಿದ್ದು ಸುಣಗಾರ, ಮಂಜುನಾಥ ಚಿಕ್ಕಲದಿನ್ನಿ, ಅಂಜನಕುಮಾರ ಗಂಡಗುದರಿ ಇದ್ದರು.
ತಕ್ಷಣವೇ ಕತ್ತಿ ಬಂಧಿಸದಿದ್ದರೆ ಅ.24ಕ್ಕೆ ಬೆಳಗಾವಿ ಬಂದ್ ವಾಲ್ಮೀಕಿ ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡಿದ್ದು ಸರಿಯಲ್ಲ ಬೇರೆ ಬೇರೆ ಸಮುದಾಯಗಳ ಸಂಘರ್ಷ ತಲೆದೋರುವ ಸಾಧ್ಯತೆ: ಆತಂಕ
‘ಅ.24ಕ್ಕೆ ಬೆಳಗಾವಿ ಬಂದ್’
‘ರಮೇಶ ನೀಡಿದ ಹೇಳಿಕೆಯಿಂದ ನಮಗೆ ನೋವಾಗಿದೆ. ಬೇರೆ ಬೇರೆ ಸಮುದಾಯಗಳ ಮಧ್ಯೆ ಸಂಘರ್ಷ ತಲೆದೋರುವ ಸಾಧ್ಯತೆ ಇದೆ. ತಕ್ಷಣವೇ ಅವರನ್ನು ಬಂಧಿಸಬೇಕು. ಇಲ್ಲದಿದ್ದರೆ ವಾಲ್ಮೀಕಿ ಸಮುದಾಯ ಸೇರಿದಂತೆ ಹಿಂದುಳಿದ ವರ್ಗಗಳ ವಿವಿಧ ಸಮುದಾಯಗಳಿಂದ ಅ.24ರಂದು ಬೆಳಗಾವಿ ಬಂದ್‌ಗೆ ಕರೆ ಕೊಡಲಾಗುವುದು’ ಎಂದು ವಾಲ್ಮೀಕಿ ಸಮುದಾಯದ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ತಳವಾರ ತಿಳಿಸಿದರು.
ರಮೇಶ ಕತ್ತಿ ಪ್ರತಿಕೃತಿ ದಹಿಸಿ ದಲಿತ ಸಂಘಟನೆಗಳ ಪ್ರತಿಭಟನೆ
ಮೂಡಲಗಿ: ಮಾಜಿ ಸಂಸದ ರಮೇಶ ಕತ್ತಿ ಅವರು ವಾಲ್ಮೀಕಿ ಸಮಾಜಕ್ಕೆ ತುಚ್ಛವಾಗಿ ಮಾತನಾಡಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಮೂಡಲಗಿ ತಾಲ್ಲೂಕಿನ ದಲಿತ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ಕತ್ತಿ ಅವರ ಪ್ರತಿಕೃತಿಯನ್ನು ದಹಿಸಿ ತೀವ್ರ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ಪುರಸಭೆಯಿಂದ ಮಾಜಿ ಸಂಸದ ರಮೇಶ ಕತ್ತಿ ವಿರುದ್ದ ಘೋಷಣೆಗಳನ್ನು ಹಾಕುತ್ತಾ ಕಲ್ಮೇಶ್ವರ ವೃತ್ತಕ್ಕೆ ಬಂದು ಸಮಾವೇಶಗೊಂಡರು. ವಾದ್ಯ ಬಾರಿಸುವುದು ಮತ್ತು ಪಟಾಕಿ ಸಿಡಿಸಿ ಪ್ರತಿಭಟನೆ ಮಾಡಿದರು. ಮುಖಂಡರಾದ ರಮೇಶ ಮಾದರ ಸತ್ಯಪ್ಪ ಕರವಾಡಿ ಲಕ್ಷ್ಮಣ ತೆಳಗಡೆ ರಮೇಶ ಸಣ್ಣಕ್ಕಿ ಪರಸಪ್ಪ ಬಬಲಿ ಮಾತನಾಡಿ ‘ರಮೇಶ ಕತ್ತಿ ಅವರು ಬೇಡರ ಎಸ್‌ಟಿ ಸಮಾಜವನ್ನು ತುಚ್ಛವಾಗಿ ನಿಂದಿಸಿದ್ದಾರೆ. ಇದು ಸಂವಿಧಾನ ವಿರೋಧಿ ಅಕ್ಷಮ್ಯ ಅಪರಾಧವಾಗಿದೆ. ಜಾತಿಗಳ ಮಧ್ಯೆ ವಿಷಬೀಜ ಬಿತ್ತಿ ಅಶಾಂತಿಯ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ಕೂಡಲೇ ಅವರನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಗ್ರೇಡ್ 2 ತಹಶೀಲ್ದಾರ್ ಶಿವಾನಂದ ಬಬಲಿ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ವಾಲ್ಮೀಕಿ ಸಮಾಜದ ಯುವ ಮುಖಂಡ ಯಲ್ಲಾಲಿಂಗ ವಾಳದ ರವೀಂದ್ರ ಸಣ್ಣಕ್ಕಿ ಲಕ್ಷ್ಮಣ ತೆಳಗಡೆ ರಮೇಶ ಮಾದರ ಎಂ.ವೈ. ಮರೆಪ್ಪಗೋಳ ಶಾಬಪ್ಪ ಸಣ್ಣಕ್ಕಿ ಬಾಲೇಶ ಬನ್ನಟ್ಟಿ ವೈ.ಎಂ. ಮಂಟೂರ ಶಿವಾನಂದ ಹಳಬರ ವಿಲಾಸ ಸಣ್ಣಕ್ಕಿ ಸುಂದರ ಹವಳೆವ್ವಗೋಳ ಮಲಿಕ ಹುಣಶ್ಯಾಳ ಸುನದಾ ಭಜಂತ್ರಿ ಲಕ್ಷ್ಮೀ ಮಾದರ ಇದ್ದರು.
ಅವಹೇಳನಕಾರಿ ಮಾತು
ಪ್ರತಿಭಟನೆ ಚನ್ನಮ್ಮನ ಕಿತ್ತೂರು: ವಾಲ್ಮೀಕಿ ಸಮುದಾಯದ ಬಗ್ಗೆ ಮಾಜಿ ಸಂಸದ ರಮೇಶ ಕತ್ತಿ ಅವರು ಅವಹೇಳನಕಾರಿ ಮಾತು ಆಡಿದ್ದಾರೆಂದು ಆರೋಪಿಸಿ ವಾಲ್ಮೀಕಿ ಸಮಾಜದವರು ಇಲ್ಲಿನ ಚನ್ನಮ್ಮ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ರಮೇಶ ಕತ್ತಿ ಚಿತ್ರವಿರುವ ನಾಮಫಲಕ ಸುಟ್ಟು ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಮಾಜದ ಮುಖಂಡರು ಮಾತನಾಡಿ ಕತ್ತಿ ಅವರನ್ನು ಕೂಡಲೇ ಬಂಧಿಸಬೇಕು ಎಂದೂ ಆಗ್ರಹಿಸಿದರು. ಮುಖಂಡರಾದ ಮಲ್ಲಿಕಾರ್ಜುನ ತಳವಾರ ಸಾವಂತ ಕಿರಬನವರ ಸೋಮಶೇಖರ ಮುತ್ತೆಣ್ಣವರ ಭೀಮಣ್ಣ ದುರ್ಗಣ್ಣವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.