ADVERTISEMENT

ಬೆಳಗಾವಿ | ವಿಧಾನಮಂಡಲ ಚಳಿಗಾಲ ಅಧಿವೇಶನ: ಹರಿದುಬಂದ ಪ್ರತಿಭಟನಕಾರರ ದಂಡು

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2024, 13:16 IST
Last Updated 17 ಡಿಸೆಂಬರ್ 2024, 13:16 IST
<div class="paragraphs"><p>ಕೊಂಡಸಕೊಪ್ಪ ಗುಡ್ಡದ ಮೇಲೆ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದವರು ಪ್ರತಿಭಟನೆ&nbsp;ಮಾಡಿದ</p></div>

ಕೊಂಡಸಕೊಪ್ಪ ಗುಡ್ಡದ ಮೇಲೆ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದವರು ಪ್ರತಿಭಟನೆ ಮಾಡಿದ

   

ಬೆಳಗಾವಿ: ವಿಧಾನಮಂಡಲ ಚಳಿಗಾಲ ಅಧಿವೇಶನದ ಆರನೇ ದಿನವಾದ ಮಂಗಳವಾರ ಇಲ್ಲಿನ ಸುವರ್ಣ ವಿಧಾನಸೌಧ ಬಳಿ ಇರುವ ವೇದಿಕೆಗೆ ಪ್ರತಿಭಟನಕಾರರ ದಂಡೇ ಹರಿದುಬಂದಿತ್ತು. ಬೆಳಗಾವಿ ಜಿಲ್ಲೆ ಮಾತ್ರವಲ್ಲದೆ; ರಾಜ್ಯದ ವಿವಿಧೆಡೆಯಿಂದ ಬಂದಿದ್ದ ನಾನಾ ಸಂಘಟನೆಗಳ ಪದಾಧಿಕಾರಿಗಳು ತಮ್ಮ ಹಕ್ಕೊತ್ತಾಯ ಮಂಡಿಸಿದರು.

ಗೌರವಧನ ₹30 ಸಾವಿರಕ್ಕೆ ಹೆಚ್ಚಿಸಿ: ರಾಜ್ಯದ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಿಗೆ ನೀಡಲಾಗುವ ಮಾಸಿಕ ಗೌರವಧನವನ್ನು ₹12 ಸಾವಿರದಿಂದ ₹30 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿ, ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದವರು ಪ್ರತಿಭಟನೆ ಮಾಡಿದರು.

ADVERTISEMENT

ಪ್ರತಿವರ್ಷ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವಾಗ ಸೇವಾ ಹಿರಿತನ ಪರಿಗಣಿಸಿ, ಕಾರ್ಯನಿರತ ಅತಿಥಿ ಉಪನ್ಯಾಸಕರನ್ನೇ ಸೇವೆಯಲ್ಲಿ ಮುಂದುವರಿಸಬೇಕು. ಪದವಿಪೂರ್ವ ಶಿಕ್ಷಣ ಇಲಾಖೆ ಆದೇಶದಂತೆ, ಅವರಿಗೆ ವಾರಕ್ಕೆ 10 ಅಥವಾ 12 ತಾಸು ಕಾರ್ಯಭಾರ ನೀಡಬೇಕು. ಪದವಿ ಕಾಲೇಜಿನ ಅತಿಥಿ ಉಪನ್ಯಾಸಕಿಯರಿಗೆ ಪ್ರಸೂತಿ ಸಂದರ್ಭ ನೀಡುವ ಸೌಲಭ್ಯಗಳನ್ನು ಪದವಿಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕಿಯರಿಗೂ ಕೊಡಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಪದ್ಮಪ್ರಭಾ ಇಂದ್ರ, ರಾಜೇಶ ಭಟ್‌, ಅಲ್ಲಮಪ್ರಭು ಬೆಟ್ಟದೂರು, ವಿ.ಎನ್‌.ರಾಜಶೇಖರ, ಎಸ್‌.ಜಿ.ನಾಗರತ್ನಾ, ಎನ್‌.ಎಸ್‌.ಹಿರೇಮಠ, ಐಶ್ವರ್ಯ ಸಿ.ಎಂ ಇದ್ದರು.

ಮೈಕ್ರೋ ಫೈನಾನ್ಸ್‌ಗಳಿಂದ ಕಿರುಕುಳ ತಪ್ಪಿಸಿ: ಸಾಲ ವಸೂಲಾತಿಗಾಗಿ ಮೈಕ್ರೋ ಫೈನಾನ್ಸ್‌ಗಳು ರೈತರು, ಕಾರ್ಮಿಕರು, ಕೂಲಿಕಾರರು ಮತ್ತು ಬಡವರಿಗೆ ಕಿರುಕುಳ ನೀಡುತ್ತಿರುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ರಾಣೆಬೆನ್ನೂರು ತಾಲ್ಲೂಕು ಘಟಕದವರು ಪ್ರತಿಭಟಿಸಿದರು.

ರೈತರು, ಕಾರ್ಮಿಕರು ಮತ್ತು ಕೂಲಿಕಾರರು ಮೊದಲೇ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ. ಹೀಗಿರುವಾಗ ಮೈಕ್ರೋ ಫೈನಾನ್ಸ್‌ಗಳು ಮನಬಂದಂತೆ ತೊಂದರೆ ಕೊಡುವುದು ಸರಿಯಲ್ಲ ಎಂದು ದೂರಿದರು. ಮುಖಂಡರಾದ ಹನುಮಂತಪ್ಪ ಕಬ್ಬಾರ, ಲಲಿತಾ ಲಮಾಣಿ, ಕೊಟ್ರೆಮ್ಮ ಕಾಯಕದ, ತಾತವ್ವ ಕಮ್ಮಾರ, ನೂರಜಹಾನ್‌ ಲಕ್ಷ್ಮೇಶ್ವರ ಇದ್ದರು.

ಪ್ರವರ್ಗ ‘3ಎ’ ಪಟ್ಟಿಗೆ ಸೇರಿಸಿ: ‘ರಾಜ್ಯದ 14 ಜಿಲ್ಲೆಗಳಲ್ಲಿ ಕುಡು ಒಕ್ಕಲಿಗ ಸಮುದಾಯದವರು ನೆಲೆಸಿದ್ದೇವೆ. ನಮ್ಮ ಜನಸಂಖ್ಯೆ 25 ಲಕ್ಷದಷ್ಟಿದೆ. ಸಂವಿಧಾನದ ಆಶಯದಂತೆ ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಮೀಸಲಾತಿ, ಮತ್ತು ಪ್ರಾಧಾನ್ಯತೆ ಕೊಡಲು ನಮ್ಮನ್ನು ಪ್ರವರ್ಗ ‘3ಎ’ ಪಟ್ಟಿಗೆ ಸೇರ್ಪಡೆಗೊಳಿಸಬೇಕು’ ಎಂದು ಆಗ್ರಹಿಸಿ, ಕರ್ನಾಟಕ ರಾಜ್ಯ ಕುಡು ಒಕ್ಕಲಿಗ ಅಭಿವೃದ್ಧಿ ಸೇವಾ ಸಂಘದವರು ಪ್ರತಿಭಟನೆ ಮಾಡಿದರು. ಮುಖಂಡರಾದ ಶಿವರಾಜ ಪಾಟೀಲ ಕಲಗುರ್ತಿ, ಮಲ್ಲಣ್ಣಗೌಡ ಮಾಲಿಪಾಟೀಲ, ಶಿವಯೋಗಪ್ಪ ಚಿತ್ತಾಪುರ, ಸಂಕೇತ ಗೌಡ, ಭೀಮಶಿ ಜಿರೋಳ್ಳಿ, ಚಂದ್ರಕಾಂತ ಪಾಟೀಲ ಇತರರಿದ್ದರು.

‘ಡಿ’ ದರ್ಜೆ ನೌಕರರಾಗಿ ಪರಿಗಣಿಸಿ: ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳು ಮತ್ತು ಘಟಕಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಮಗೆ ಕನಿಷ್ಠ ವೇತನ ಜಾರಿಗೊಳಿಸಬೇಕು. ಜತೆಗೆ ‘ಡಿ’ ದರ್ಜೆ ನೌಕರರಾಗಿ ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ಜಾಡಮಾಲಿ ನೌಕರರು ಪ್ರತಿಭಟನೆ ಮಾಡಿದರು. ಎಂ.ಪಿ.ಮುಲ್ತಾನಿ, ದೀಪಕ ಗುರವ, ಎಸ್‌.ಎಲ್‌.ನಿಂಬಾಳಕರ, ಚಲವಮ್ಮ ಭದ್ರಾವತಿ, ಅನುಸೂಯಾ ಗುಲ್ಬರ್ಗ ಇತರರಿದ್ದರು.

‘ಚಮ್ಮಾರ’ ಎಂದೇ ದಾಖಲಿಸಿ: ‘ಸಮಗಾರ, ಮೋಚಿಗಾರ ಮತ್ತು ಢೋರ ಎಂಬ ಉಪನಾಮಗಳಿರುವ ಜಾತಿಗಳನ್ನು ‘ಚಮ್ಮಾರ’ ಮತ್ತು ‘ಚರ್ಮಕಾರ’ ಎಂದು ಒಂದೇ ಗುಂಪಿನಡಿ ಪರಿಗಣಿಸಬೇಕು. ಮುಂಬರುವ ಜಾತಿಗಣತಿ ವರದಿಯಲ್ಲಿ ‘ಚಮ್ಮಾರ’ ಎಂದೇ ದಾಖಲಿಸಬೇಕು’ ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಚರ್ಮಕಾರ  ಮಹಾಸಭಾದವರು ಪ್ರತಿಭಟನೆ ಮಾಡಿದರು. 

‘ಶೈಕ್ಷಣಿಕ, ಔದ್ಯೋಗಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಸಮಾಜವನ್ನು ಮುನ್ನೆಲೆಗೆ ತರಲು ಸರ್ಕಾರ ವಹಿಸಬೇಕು. ಚರ್ಮಕಾರರಿಗೆ ಖರೀದಿಸುತ್ತಿರುವ ಚರ್ಮದ ಉತ್ಪನ್ನಗಳಿಗೆ ಲಿಡ್ಕರ್‌ ನಿಗಮ ಸೂಕ್ತ ಬೆಂಬಲ ಕೊಡಬೇಕು’ ಎಂದು ಒತ್ತಾಯಿಸಿದರು. ಮುಖಂಡರಾದ ಮೋಹನ ಉಳ್ಳಿಕಾಶಿ, ಭೀಮರಾವ್‌ ಪವಾರ, ಮನೋಹರ ಮಂದೋಲಿ, ರಾಮಕೃಷ್ಣ ದೊಡಮನಿ, ಸಂಜೀವ ಲೋಕಾಪುರ ಇತರರಿದ್ದರು.

ಪ್ರವರ್ಗ ‘2ಎ’ಗೆ ಸೇರ್ಪಡೆಗೊಳಿಸಿ: ಹಡಪದ ಸಮುದಾಯವನ್ನು ಪ್ರವರ್ಗ ‘3ಬಿ’ ಪಟ್ಟಿಯಿಂದ ‘2ಎ’ಗೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜಸೇವಾ ಸಂಘದವರು ಪ್ರತಿಭಟಿಸಿದರು.

ಸರ್ಕಾರ ರಚಿಸಿದ ಕರ್ನಾಟಕ ಹಡಪದ ಅಭಿವೃದ್ಧಿ ನಿಗಮವನ್ನು ಕ್ರಿಯಾಶೀಲಗೊಳಿಸಬೇಕು. ವಿದ್ಯಾರ್ಥಿಗಳ ಶಾಲಾ ದಾಖಲಾತಿಯಲ್ಲಿ ಜಾತಿ ಹೆಸರು ತಪ್ಪಾಗಿದ್ದರೆ ತಿದ್ದುಪಡಿ ಮಾಡುವ ಕುರಿತು ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. ಕ್ಷೌರಿಕರಿಗೆ ‘ಹಜಾಮ’ ಎಂಬ ಪದ ಬಳಸುವವರ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸುವ ಕಾನೂನು ಜಾರಿಗೊಳಿಸಬೇಕು. ತಂಗಡಗಿಯಲ್ಲಿರುವ ಹಡಪದ ಅಪ್ಪಣ್ಣ ದೇವರ ಮಹಾಸಂಸ್ಥಾನ ಮಠದ ಅಭಿವೃದ್ಧಿಗಾಗಿ ₹10 ಕೋಟಿ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು. 

ಅನ್ನದಾನ ಭಾರತೀ ಅಪ್ಪಣ್ಣ ಸ್ವಾಮೀಜಿ, ಸಿದ್ದಪ್ಪ ಹಡಪದ, ಸಂತೋಷ ಹಡಪದ, ಆನಂದ ಹಂಪಣ್ಣವರ, ರಾಜು ನಾವಿ ಇತರರಿದ್ದರು.

ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿ ಇರುವ ವೇದಿಕೆಯಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದವರು ಪ್ರತಿಭಟನೆ ನಡೆಸಿದರು   ಪ್ರಜಾವಾಣಿ ಚಿತ್ರ

ಮಾಸಾಶನವನ್ನು ₹5 ಸಾವಿರಕ್ಕೆ ಹೆಚ್ಚಿಸಿ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ‘ಸಿ’ ಮತ್ತು ‘ಡಿ’ ದರ್ಜೆ ಹುದ್ದೆಗಳ ನೇಮಕಾತಿಯಲ್ಲಿ ಕಿವುಡರಿಗೆ ಆದ್ಯತೆ ಮೇರೆಗೆ ಉದ್ಯೋಗವಕಾಶ ಕಲ್ಪಿಸಬೇಕು. ಕಿವುಡರಿಗೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು 100 ಕಿ.ಮೀ ಮಿತಿ ಇದೆ. ಅದನ್ನು ಹಿಂಪಡೆದು ಇಡೀ ರಾಜ್ಯದಲ್ಲಿ ಉಚಿತವಾಗಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು. ಕಿವುಡರಿಗೆ ನೀಡುತ್ತಿರುವ ಮಾಸಾಶನವನ್ನು ₹1,400ರಿಂದ ₹5 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕಿವುಡರ ಕಲ್ಯಾಣ ಸಂಘದವರು ಪ್ರತಿಭಟನೆ ನಡೆಸಿದರು. ಮುಖಂಡರಾದ ಶಂಕರ ಕೆ.ಎಚ್‌., ಕೆ.ಎಸ್‌.ಉಮಾಶಂಕರ, ಟಿ.ಸಿ.ಶರಣಕುಮಾರ ನೇತೃತ್ವ ವಹಿಸಿದ್ದರು.

ಡ್ರಗ್ಸ್‌ ಮಾಫಿಯಾ ಮಟ್ಟಹಾಕಿ: ವಿಜಯೇಂದ್ರ 

‘ರಾಜ್ಯದಲ್ಲಿ ಡ್ರಗ್ಸ್‌ ಮಾಫಿಯಾ ಹಿಂದೆ ಇರುವ ಪ್ರಭಾವಿಗಳನ್ನು ಮಟ್ಟಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.

‘ರಾಜ್ಯದಲ್ಲಿ ಮಾದಕವಸ್ತುಗಳ ಮಾರಾಟ ತಡೆಗಟ್ಟಬೇಕು’ ಎಂದು ಒತ್ತಾಯಿಸಿ, ಬಿಜೆಪಿ ರಾಜ್ಯ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠದವರು ನಡೆಸಿದ ಹೋರಾಟಕ್ಕೆ ಬೆಂಬಲ ಸೂಚಿಸಿ ಅವರು ಮಾತನಾಡಿದರು.

‘ಸರ್ಕಾರ ಪರಿಸ್ಥಿತಿಯ ಗಂಭೀರತೆ ಅರ್ಥೈಸಿಕೊಳ್ಳಬೇಕು. ಇಂಥ ಪ್ರಕರಣದಲ್ಲಿ ಸಣ್ಣ–ಪುಟ್ಟ ವ್ಯಕ್ತಿಗಳನ್ನು ಬಂಧಿಸಿದರೆ ಸಾಲದು. ಅಕ್ರಮದಲ್ಲಿ ಭಾಗಿಯಾದ ಪ್ರಭಾವಿಗಳನ್ನು ಬಂಧಿಸಬೇಕು. ರಾಜ್ಯದ ಪ್ರತಿ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಮಾದಕವಸ್ತು ಬಳಕೆ ನಿಷೇಧದ ಕುರಿತಾಗಿ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ’ ಎಂದರು.

ಶಾಸಕರಾದ ಧೀರಜ್ ಮುನಿರಾಜು, ಹರೀಶ್ ಪೂಂಜಾ, ಪಕ್ಷದ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ, ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠದ ರಾಜ್ಯ ಘಟಕದ ಸಂಚಾಲಕ ವಿಜಯಕುಮಾರ ಕೊಡಗನೂರ, ಸಹ ಸಂಚಾಲಕ ಭವಾನಿ ಮೋರೆ, ರಾಜ್ಯ ಸಮಿತಿ ಸದಸ್ಯೆ ಜ್ಯೋತಿ ಶೆಟ್ಟಿ, ಪಿ.ಆರ್.ಸಂಜಯ, ಚನ್ನಬಸಪ್ಪ ಹೊಸೂರ, ಭರತ ಕುಲಕರ್ಣಿ  ಇದ್ದರು.

ಓ‍ಪಿಎಸ್‌ ಜಾರಿಗೊಳಿಸಿ: ರಾಜ್ಯದಲ್ಲಿ 2006ರ ಏ.1ರ ಪೂರ್ವದಲ್ಲಿ ನೇಮಕಗೊಂಡು ನಂತರ ಅನುದಾನಕ್ಕೆ ಒಳಪಟ್ಟ ಮತ್ತು 2006ರ ಏ.1ರ ನಂತರ ನೇಮಕವಾದ  ಅನುದಾನಿತ ಶಾಲಾ–ಕಾಲೇಜುಗಳ ನೌಕರರಿಗೆ ಓಪಿಎಸ್‌ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ, ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದವರು ಕೊಂಡಸಕೊಪ್ಪ ಗುಡ್ಡದ ಮೇಲೆ ಮಂಗಳವಾರ ಪ್ರತಿಭಟನೆ ನಡೆಸಿದರು.

ಅನುದಾನಿತ ನೌಕರರಿಗೂ ಸರ್ಕಾರಿ ನೌಕರರಂತೆ ಜ್ಯೋತಿ ಸಂಜೀವಿನಿ ಯೋಜನೆ ಜಾರಿಗೊಳಿಸಬೇಕು. 22 ವರ್ಷಗಳಿಂದ ಅನುದಾನಿತ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಎಂ.ಕೆ.ರಾಜು, ಧನಸಿಂಗ್ ರಾಠೋಡ, ನಾಗರಾಜಪ್ಪ ಬುಕ್ಕಾಂಬುದಿ, ಉಮೇಶ್ ಬಿ.ಎಸ್., ಸಿ.ವಿ.ವೆಂಕಟಾಚಲ, ಜಾಲಮಂಗಲ ನಾಗರಾಜ, ಕೃಷ್ಣ ಮಾಗಣಗೇರಿ, ಲಕ್ಷ್ಮಿಪುತ್ರ ಕೀರನಳ್ಳಿ, ಎಸ್.ಎಂ.ಮಾಮೂಲದಾರ ಇತರರಿದ್ದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೇಡಿಕೆ ಆಲಿಸಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ, ‘ನಿಮಗೆ ಓಪಿಎಸ್‌ ಜಾರಿಗೊಳಿಸಲು ಶೀಘ್ರ ತೀರ್ಮಾನ ಕೈಗೊಳ್ಳುತ್ತೇವೆ. ವಿಧಾನಸಭೆ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ’ ಎಂದು ಭರವಸೆ ಕೊಟ್ಟರು.

ವಸತಿ ಸೌಕರ್ಯ ಒದಗಿಸಿ ‘ವಾಜಪೇಯಿ ವಸತಿ ನಗರ ಯೋಜನೆಯಡಿ ಮನೆ ನಿರ್ಮಿಸಿಕೊಡಲು ಬೆಳಗಾವಿ ಮಹಾನಗರ ಪಾಲಿಕೆ 2012ರಲ್ಲಿ ಅರ್ಜಿ ಆಹ್ವಾನಿಸಿತ್ತು. ಸುಮಾರು 300 ಕುಟುಂಬದವರು ತಲಾ ₹50 ಸಾವಿರದಿಂದ ₹66 ಸಾವಿರ ಭರಿಸಿದ್ದೇವೆ. ಆದರೆ, ಈವರೆಗೂ ಮನೆ ನಿರ್ಮಿಸಿಕೊಟ್ಟಿಲ್ಲ. ಯೋಜನೆ ಅನುಷ್ಠಾನಕ್ಕೆ ಎದುರಾದ ತೊಡಕು ಬಗೆಹರಿಸಿ, ತ್ವರಿತವಾಗಿ ನಮಗೆ ವಸತಿ ಸೌಕರ್ಯ ಕಲ್ಪಿಸಬೇಕು’ ಎಂದು ಒತ್ತಾಯಿಸಿ, ಬೆಳಗಾವಿ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ನಿವಾಸಿಗಳು ಧರಣಿ ನಡೆಸಿದರು. ಶಂಕ್ರವ್ವ ಮಾರಗುಂಡನವರ, ಶಾರದಾ ತೋರಗಲ್ಲ, ಶ್ವೇತಾ ಕುಂಬಾರ, ಕಸ್ತೂರಿ ಇಟಗಿ ಇತರರಿದ್ದರು.

ಸುವರ್ಣ ವಿಧಾನಸೌಧ ಬಳಿಯ ವೇದಿಕೆಯಲ್ಲಿ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜಸೇವಾ ಸಂಘದವರು ಪ್ರತಿಭಟಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.