ADVERTISEMENT

ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ: ವಿವಿಧ ಸಂಘಟನೆಗಳಿಂದ ಭಾರಿ ಪ್ರತಿಭಟನೆ

ಸುವರ್ಣ ವಿಧಾನಸೌಧದ ಬಳಿ ನಾನಾ ಸಂಘಟನೆಗಳಿಂದ ಪ್ರತಿಭಟನೆ, ಹಕ್ಕೊತ್ತಾಯ ಮಂಡನೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 11:43 IST
Last Updated 9 ಡಿಸೆಂಬರ್ 2025, 11:43 IST
<div class="paragraphs"><p>ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿ ಇರುವ ವೇದಿಕೆಯಲ್ಲಿ ಆಲ್‌ ಇಂಡಿಯಾ ಯೂನೈಟೆಡ್‌ ಟ್ರೇಡ್‌ ಯೂನಿಯನ್‌ ಸೆಂಟರ್‌ನವರು ಮಂಗಳವಾರ ಪ್ರತಿಭಟನೆ ನಡೆಸಿದರು</p></div>

ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿ ಇರುವ ವೇದಿಕೆಯಲ್ಲಿ ಆಲ್‌ ಇಂಡಿಯಾ ಯೂನೈಟೆಡ್‌ ಟ್ರೇಡ್‌ ಯೂನಿಯನ್‌ ಸೆಂಟರ್‌ನವರು ಮಂಗಳವಾರ ಪ್ರತಿಭಟನೆ ನಡೆಸಿದರು

   

ಬೆಳಗಾವಿ: ವಿಧಾನಮಂಡಲ ಚಳಿಗಾಲ ಅಧಿವೇಶನದ ಎರಡನೇ ದಿನವಾದ ಮಂಗಳವಾರ ಇಲ್ಲಿನ ಸುವರ್ಣ ವಿಧಾನಸೌಧ ಬಳಿ ಇರುವ ವೇದಿಕೆಗೆ ಪ್ರತಿಭಟನಾಕಾರರ ದಂಡೇ ಹರಿದುಬಂತು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಂದಿದ್ದ ನಾನಾ ಸಂಘಟನೆಯವರು ತಮ್ಮ ಹಕ್ಕೊತ್ತಾಯ ಮಂಡಿಸಿದರು.

ಗ್ರಾಮ ‍ಪಂಚಾಯಿತಿಗೆ ಅನುದಾನ ಬಿಡುಗಡೆಗೊಳಿಸಿ

ADVERTISEMENT

2025–26ನೇ ಸಾಲಿನಲ್ಲಿ ಗ್ರಾಮ ಪಂಚಾಯಿತಿಗಳಿಗೆ 15ನೇ ಹಣಕಾಸು ಆಯೋಗದ ಅನುದಾನ ಈವರೆಗೆ ಬಿಡುಗಡೆಯಾಗಿಲ್ಲ. ಹಾಗಾಗಿ ಕೇಂದ್ರ ಸರ್ಕಾರದಿಂದ ಈ ಅನುದಾನ ತರಿಸಿಕೊಂಡು, ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆಗೊಳಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದವರು ಪ್ರತಿಭಟನೆ ಮಾಡಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳಿಗೆ ಸಾಮಗ್ರಿ ವೆಚ್ಚ ಬಿಡುಗಡೆಗೊಳಿಸಬೇಕು. ಗ್ರಾಮ ಪಂಚಾಯಿತಿ ಹಂತದ ಗ್ರಂಥಾಲಯಗಳಲ್ಲಿ ಕೆಲಸ ಮಾಡುವ ಮೇಲ್ವಿಚಾರಕರಿಗೆ ರಾಜ್ಯ ಸರ್ಕಾರದ ವತಿಯಿಂದಲೇ ಕನಿಷ್ಠ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿಗಳ ಘನತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ದುಡಿಯುವ ಸಂಜೀವಿನಿ ಸಂಘಗಳ ಮಹಿಳೆಯರಿಗೆ ಸರ್ಕಾರದ ವತಿಯಿಂದ ಮಾಸಿಕ ಗೌರವಧನ ಕೊಡಬೇಕು. ಗ್ರಾಮ ಪಂಚಾಯಿತಿಗಳ ಚುನಾವಣೆಗಳನ್ನು ಸಕಾಲಕ್ಕೆ ನಡೆಸಬೇಕು ಎಂದೂ ಆಗ್ರಹಿಸಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್‌ ನೇತೃತ್ವ ವಹಿಸಿದ್ದರು.

ಸೇವೆ ಕಾಯಂಗೊಳಿಸಲು ಒತ್ತಾಯ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ಕಾರ್ಮಿಕರು ಮತ್ತು ನೌಕರರ ಸೇವೆ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿ ಆಲ್‌ ಇಂಡಿಯಾ ಯೂನಿಟೈಡ್‌ ಟ್ರೇಡ್‌ ಯೂನಿಯನ್‌ ಸೆಂಟರ್‌ನವರು(ಎಐಯುಟಿಯುಸಿ) ಪ್ರತಿಭಟಿಸಿದರು.

ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಹಲವು ದಶಕಗಳಿಂದ ಕೆಲಸ ಮಾಡುತ್ತಿರುವ ಕಾರ್ಮಿಕರು ಮತ್ತು ನೌಕರರನ್ನು ಯಾವ ಕಾರಣಕ್ಕೂ ಕೆಲಸದಿಂದ ವಜಾಗೊಳಿಸಬಾರದು ಎಂದು ಆಗ್ರಹಿಸಿದರು.

ಮುಖಂಡರಾದ ಕೆ.ಸೋಮಶೇಖರ್‌ ಯಾದಗಿರಿ, ಮಂಜುನಾಥ ಕೈದಾಳೆ, ಗಂಗಾಧರ ಬಡಿಗೇರ, ಭುವನಾ ಬಳ್ಳಾರಿ, ಸುರೇಶ ಬಳ್ಳಾರಿ ಇತರರಿದ್ದರು.

ಭಾಷಾ ನೀತಿ ಮುಂದುವರಿಸಿ

ಕರ್ನಾಟಕ ಸರ್ಕಾರ ಜಾರಿಗೆ ತರಲು ಮುಂದಾಗಿರುವ ದ್ವಿಭಾಷಾ ನೀತಿ ಕೈಬಿಟ್ಟು, ತ್ರಿಭಾಷಾ ನೀತಿ ಮುಂದುವರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದವರು ಪ್ರತಿಭಟನೆ ನಡೆಸಿದರು.

ಖಾಲಿ ಇರುವ ತೃತೀಯ ಭಾಷಾ ಶಿಕ್ಷಕ ಹುದ್ದೆಗನ್ನು ಭರ್ತಿ ಮಾಡಬೇಕು. ಹಳೆಯ ಪಿಂಚಣಿ ಯೋಜನೆ(ಒಪಿಎಸ್‌) ಜಾರಿಗೆ ತರಬೇಕು. ಜ್ಯೋತಿ ಸಂಜೀವಿನಿ ಯೋಜನೆಯನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೂ ವಿಸ್ತರಿಸಬೇಕು. ಪ್ರೌಢಶಾಲೆಗಳ ಅರ್ಹ ಶಿಕ್ಷಕರನ್ನು ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಹುದ್ದೆಗೆ ಬಡ್ತಿ ಕೊಡಬೇಕು. 2024ರವರೆಗೆ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಅನುದಾನಕ್ಕೆ ಒಳಪಡಿಸಬೇಕು. ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ಸಾಲ ವಸೂಲಾತಿ ನಿಲ್ಲಿಸಿ

‘ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ಹಾನಿಯಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ಬ್ಯಾಂಕ್‌ಗಳು, ಸಹಕಾರಿ ಸಂಘಗಳು ಮತ್ತು ಮೈಕ್ರೊ ಫೈನಾನ್ಸ್‌ಗಳಿಂದ ಮುಂದಿನ ಸುಗ್ಗಿಯವರೆಗೆ ಸಾಲ ವಸೂಲಾತಿ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದವರು ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಕೃಷಿಕರಿಗೆ ಮಾರಕವಾದ ಮೂರು ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು. ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕವಾಗಿ ಸ್ಥಿರವಾದ ಬೆಲೆ ನಿಗದಿಪಡಿಸಲು ವ್ಯವಸ್ಥೆ ಮಾಡಬೇಕು. ಇದಲ್ಲದೆ, ಪ್ರತಿ ಹೋಬಳಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಿತಲೀಕರಣ ಘಟಕ ಸ್ಥಾಪಿಸಿ, ನಷ್ಟದಿಂದ ರೈತರನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಘಟಕದ ಅಧ್ಯಕ್ಷ ಜೋಗನಹಳ್ಳಿ ಗುರುಮೂರ್ತಿ ನೇತೃತ್ವ ವಹಿಸಿದ್ದರು.

ಎಸ್‌ಸಿ ಪಟ್ಟಿಗೆ ಸೇರಿಸಿ

ರಾಜ್ಯದಲ್ಲಿ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದವರು ಪ್ರತಿಭಟಿಸಿದರು.

‘ಈ ಅಧಿವೇಶನದಲ್ಲಿ ಚರ್ಚಿಸಿ, ನಮ್ಮ ಬೇಡಿಕೆ ಈಡೇರಿಕೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಕೆ ಕೊಟ್ಟರು.

ಮುಖಂಡರಾದ ಕೆ.ಮಲ್ಲೇಶ, ಎಂ.ಕೆ.ಹನುಮಂತಪ್ಪ, ದುರ್ಗೇಶ ಮಡಿವಾಳರ, ಬಸವರಾಜ ಮಡಿವಾಳರ, ಹನುಮಂತಪ್ಪ ಮಡಿವಾಳರ, ರಾಮಣ್ಣ ಮಡಿವಾಳರ ಇತರರಿದ್ದರು.

ಸರ್ಕಾರದಿಂದಲೇ ರೈತ ದಿನ ಆಚರಿಸಿ

‘ಪ್ರತಿವರ್ಷ ಡಿಸೆಂಬರ್‌ 23ರಂದು ರಾಜ್ಯ ಸರ್ಕಾರದ ವತಿಯಿಂದಲೇ ರೈತ ದಿನ ಆಚರಿಸುವ ಕುರಿತು ಸರ್ಕಾರ ಇದೇ ಅಧಿವೇಶನದಲ್ಲಿ ಆದೇಶ ಹೊರಡಿಸಬೇಕು’ ಎಂದು ಆಗ್ರಹಿಸಿ ಸೊರಬದ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಟ್ರಸ್ಟ್‌ನವರು ಒತ್ತಾಯಿಸಿದರು.

‘ರೈತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಗ್ರಾಮೀಣ ಭಾಗದಲ್ಲಿ ಇರುವ ಪಶು ಆಸ್ಪತ್ರೆಗಳು 24x7 ಮಾದರಿಯಲ್ಲಿ ಕಾರ್ಯನಿರ್ವಹಿಸಬೇಕು’ ಎಂದು ಆಗ್ರಹಿಸಿದರು. ಮುಖಂಡರಾದ ದತ್ತಾತ್ರೇಯ ಕೆ.ವಿ., ಕೆ.ಪ್ರಭಾಕರ ರಾಯ್ಕರ, ಜೆ.ಎಸ್‌.ಚಿದಾನಂದಗೌಡ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.