ADVERTISEMENT

ಬೆಳಗಾವಿ: ಮರದ ಕೆಳಗೆ ಕುಳಿತು ರೀಲ್ಸ್ ನೋಡುವಾಗ ಅಣ್ಣನ ಕೊಲೆ ಮಾಡಿದ್ದ ತಮ್ಮನ ಬಂಧನ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 9:30 IST
Last Updated 14 ಜೂನ್ 2025, 9:30 IST
<div class="paragraphs"><p>ಬಂಧಿತ ಬಸವರಾಜ ಕಮತಿ</p></div>

ಬಂಧಿತ ಬಸವರಾಜ ಕಮತಿ

   

ಬೆಳಗಾವಿ: ಹುಕ್ಕೇರಿ ತಾಲ್ಲೂಕಿನ ಪಾಶ್ಚಾಪುರದ ಬಳಿ ಇರುವ ಜಮೀನಿನಲ್ಲಿ ಅಣ್ಣನನ್ನು ಕೊಲೆ ಮಾಡಿದ ತಮ್ಮ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಹುಕ್ಕೇರಿ ತಾಲ್ಲೂಕಿನ ಹಟ್ಟಿಆಲೂರಿನ ರಾಯಪ್ಪ ಸುರೇಶ ಕಮತಿ(28) ಕೊಲೆಯಾದವರು. ಬಸವರಾಜ ಕಮತಿ(24) ಬಂಧಿತ ಆರೋಪಿ.

ADVERTISEMENT

‘ಕುರಿಗಾಹಿಯಾಗಿದ್ದ ರಾಯಪ್ಪ ಮೇ 8ರಂದು ಕುರಿ ಮೇಯಿಸಲು ಪಾಶ್ಚಾಪುರ ಬಳಿಯ ಜಮೀನಿಗೆ ತೆರಳಿದ್ದರು. ಅಂದು ಸಂಜೆ ಕುರಿಗಳು ಮನೆಗೆ ಮರಳಿದವು. ಆದರೆ, ರಾಯಪ್ಪ ಬಾರದ್ದರಿಂದ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದರು. ಮಾರನೇ ದಿನ ಹತ್ಯೆಗೀಡಾದ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದರು. ಕೆಲ ಸುಳಿವು ಆಧರಿಸಿ, ಯಮಕನಮರಡಿ ಠಾಣೆ ಪೊಲೀಸರು ತನಿಖೆ ಕೈಗೊಂಡಾಗ ಬಸವರಾಜನೇ ಕೊಲೆ ಮಾಡಿರುವುದು ದೃಢಪಟ್ಟಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕುವೈತ್‌ನ ನ್ಯಾಷನಲ್‌ ಪೆಟ್ರೋಲಿಯಂ ಕಂಪನಿಯಲ್ಲಿ ವಾಲ್ ಆಪರೇಟರ್ ಆಗಿ ಕೆಲಸ ಮಾಡಿದ್ದ ಬಸವರಾಜನು ಹಟ್ಟಿಆಲೂರಿಗೆ ಮರಳಿದ್ದ. ಸದ್ಯ ಯಾವ ಕೆಲಸ ಮಾಡದೆ ಮನೆಯಲ್ಲೇ ಉಳಿದಿದ್ದ. ಇದರಿಂದ ರಾಯಪ್ಪ ಮತ್ತು ಮತ್ತೊಬ್ಬ ಸಹೋದರ ದುಂಡಪ್ಪ ಸಿಟ್ಟಾಗಿದ್ದರು. ಕೆಲಸದ ವಿಚಾರವಾಗಿಯೇ ಪರಸ್ಪರರ ಮಧ್ಯೆ ಜಗಳವಾಗುತ್ತಿತ್ತು. ಕೊಲೆ ನಡೆದ ದಿನ ಮತ್ತು ಹಿಂದಿನ ದಿನವೂ ಮನೆಯಲ್ಲಿ ಗಲಾಟೆಯಾಗಿತ್ತು. ಇದರಿಂದ ಆಕ್ರೋಶಗೊಂಡ ಬಸವರಾಜನು ಕುರಿ ಮೇಯಿಸಲು ಹೋಗಿದ್ದ ಅಣ್ಣನ ಹತ್ಯೆ ಮಾಡಿದ್ದಾನೆ’ ಎಂದರು.

ಯಮಕನಮರಡಿ ಇನ್‌ಸ್ಪೆಕ್ಟರ್‌ ಜಾವೀದ ಮುಶಾಪುರಿ ನೇತೃತ್ವದ ತಂಡ ಈ ಪ್ರಕರಣ ಭೇದಿಸಿದೆ.

‘ಕಲ್ಲೆಸೆದು ಕೊಲೆ ಮಾಡಿದ್ದ’

‘ಮನೆಯಿಂದ ಖಾರದ ಪುಡಿ ತೆಗೆದುಕೊಂಡು ಹೋಗಿದ್ದ ಬಸವರಾಜ, ಮರದ ಕೆಳಗೆ ಮೊಬೈಲ್‌ನಲ್ಲಿ ರೀಲ್ಸ್‌ ನೋಡುತ್ತ ಕುಳಿತಿದ್ದ ರಾಯಪ್ಪನಿಗೆ ಎರಚಿದ್ದ. ನಂತರ ತಲೆ ಮೇಲೆ ಕಲ್ಲೆಸೆದು ಕೊಲೆ ಮಾಡಿದ್ದ. ಘಟನೆ ನಡೆದ ನಂತರ ಮನೆಗೆ ಮರಳಿ, ಕುಟುಂಬದವರೊಂದಿಗೆ ರಾಯಪ್ಪ ಹುಡುಕಾಡಲು ಪ್ರಯತ್ನಿಸುತ್ತಿರುವುದಾಗಿ ಬಿಂಬಿಸಿದ್ದ’ ಎಂದು ಭೀಮಾಶಂಕರ ಗುಳೇದ ವಿವರಿಸಿದರು.

ಕೊಲೆಯಾದ ರಾಯಪ್ಪ ಸುರೇಶ ಕಮತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.