ADVERTISEMENT

ಬೆಳಗಾವಿ ಜಿಲ್ಲೆ ವಿಭಜನೆಗೆ ಸಿಎಂ ಜೊತೆ ಚರ್ಚಿಸುವೆ: ಸಚಿವ ರಮೇಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 11:43 IST
Last Updated 4 ಡಿಸೆಂಬರ್ 2020, 11:43 IST
ಚಿಕ್ಕೋಡಿ ಜಿಲ್ಲೆ ರಚನೆಗೆ ಒತ್ತಾಯಿಸಿ ಚಿಕ್ಕೋಡಿ ಮತ್ತು ಚಿಂಚಣಿ ಶ್ರೀಗಳ ನೇತೃತ್ವದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಚಿಕ್ಕೋಡಿಯಲ್ಲಿ ಶುಕ್ರವಾರ ಮನವಿ ಸಲ್ಲಿಸಲಾಯಿತು
ಚಿಕ್ಕೋಡಿ ಜಿಲ್ಲೆ ರಚನೆಗೆ ಒತ್ತಾಯಿಸಿ ಚಿಕ್ಕೋಡಿ ಮತ್ತು ಚಿಂಚಣಿ ಶ್ರೀಗಳ ನೇತೃತ್ವದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಚಿಕ್ಕೋಡಿಯಲ್ಲಿ ಶುಕ್ರವಾರ ಮನವಿ ಸಲ್ಲಿಸಲಾಯಿತು   

ಚಿಕ್ಕೋಡಿ (ಬೆಳಗಾವಿ): ‘ವಿಸ್ತಾರವಾಗಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಮತ್ತು ಗೋಕಾಕ ಎರಡು ಹೊಸ ಜಿಲ್ಲೆಗಳ ರಚನೆ ಅತ್ಯಗತ್ಯವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಜಿಲ್ಲಾ ವಿಭಜನೆಗೆ ಪ್ರಯತ್ನ ಮಾಡುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಭರವಸೆ ನೀಡಿದರು.

ಪಟ್ಟಣದಲ್ಲಿ ಶುಕ್ರವಾರ ಚಿಂಚಣಿಯ ಅಲ್ಲಮಪ್ರಭು ಸ್ವಾಮೀಜಿ ಮತ್ತು ಚಿಕ್ಕೋಡಿಯ ಸಂಪಾದನ ಸ್ವಾಮೀಜಿ ಅವರ ನೇತೃತ್ವದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಚಿಕ್ಕೋಡಿ ಜಿಲ್ಲಾ ರಚನೆಗೆ ಒತ್ತಾಯಿಸಿ ಶುಕ್ರವಾರ ಸಲ್ಲಿಸಿದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

‘ಚಿಕ್ಕೋಡಿ ಮತ್ತು ಗೋಕಾಕ ಜಿಲ್ಲೆ ಆಗಬೇಕು ಎಂಬುದು ಬಹು ವರ್ಷಗಳ ಬೇಡಿಕೆ. ಆದರೆ, ಅಧಿಕಾರಿಗಳು ತಾಂತ್ರಿಕ ತೊಂದರೆ ಮುಂದಿಡುತ್ತಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನಾನು, ಆಗಿನ ಸಂಸದ ಪ್ರಕಾಶ ಹುಕ್ಕೇರಿ, ಇನಾಂದಾರ ಅವರು ಚಿಕ್ಕೋಡಿ ಜಿಲ್ಲೆ ರಚನೆಗೆ ಪ್ರಯತ್ನಪಟ್ಟಿದ್ದೇವೆ. ಜಿಲ್ಲಾ ಘೋಷಣೆ ಬಹುತೇಕ ಖಚಿತವೂ ಆಗಿತ್ತು. ಅಷ್ಟರಲ್ಲಿ ಚುನಾವಣೆ ಬಂದಿದ್ದರಿಂದ ನನೆಗುದಿಗೆ ಬಿದ್ದಿದೆ. ನನಗೆ ಸುಳ್ಳು ಹೇಳುವ ಚಟವಿಲ್ಲ. ಜಿಲ್ಲೆ ಆಗುವುದು, ಬಿಡುವುದು ದೇವರೇ ಬಲ್ಲ’ ಎಂದರು.

ADVERTISEMENT

‘ಸರ್ಕಾರ ಉರುಳಿಸುವಮತ್ತು ರಚಿಸುವ ತಾಕತ್ತು ಬೆಳಗಾವಿ ಜಿಲ್ಲೆ ಜನ ಪ್ರತಿನಿಧಿಗಳಿಗಿದೆ. ಜಿಲ್ಲಾ ವಿಭಜನೆಗೆ ಏಕೆ ಇಚ್ಛಾಶಕ್ತಿ ತೋರುತ್ತಿಲ್ಲ?’ ಎಂಬ ಪ್ರಶ್ನೆಗೆ ‘ತಾಕತ್ತು ಇದೆ ಎಂದು ಕಲ್ಲಿಗೆ ತಲೆ ಚಚ್ಚಿಕೊಳ್ಳಲು ಸಾಧ್ಯವೇ’ ಎಂದು ಮರು ಪ್ರಶ್ನಿಸಿದರು.

ಹೋರಾಟ ಸಮಿತಿ ಮುಖಂಡ ಬಿ.ಆರ್.ಸಂಗಪ್ಪಗೋಳ, ಎಸ್.ವೈ.ಹಂಜಿ, ಉತ್ತಮ ಪಾಟೀಲ, ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ, ಉಪಾಧ್ಯಕ್ಷ ಸಂಜಯ ಕವಟಗಿಮಠ, ಶಾಮ ರೇವಡೆ, ರಾಮಾ ಮಾನೆ, ಅಶೋಕಕುಮಾರ ಅಸೋದೆ, ಬಿ.ಆರ್.ಅಜೂರೆ, ತುಕಾರಾಮ ಕೋಳಿ, ಸುರೇಶ ಬ್ಯಾಕುಡೆ, ಸಂಜು ಬಡಿಗೇರ, ಬಸವರಾಜ ಢಾಕೆ, ತ್ಯಾಗರಾಜ ಕದಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.