ADVERTISEMENT

ಬೆಳಗಾವಿ: ಹು–ಧಾ ಕೈಗಾರಿಕೆಗಳಿಗೆ ಹಿಡಕಲ್‌ ಜಲಾಶಯ ನೀರು

​ಪ್ರಜಾವಾಣಿ ವಾರ್ತೆ
Published 16 ಜನವರಿ 2025, 15:57 IST
Last Updated 16 ಜನವರಿ 2025, 15:57 IST
ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯದಿಂದ ಹುಬ್ಬಳ್ಳಿ– ಧಾರವಾಡ ಕೈಗಾರಿಕಾ ಪ್ರದೇಶಗಳಿಗೆ ನೀರು ಪೂರೈಸಲು ನಡೆದ ಕಾಮಗಾರಿ
ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯದಿಂದ ಹುಬ್ಬಳ್ಳಿ– ಧಾರವಾಡ ಕೈಗಾರಿಕಾ ಪ್ರದೇಶಗಳಿಗೆ ನೀರು ಪೂರೈಸಲು ನಡೆದ ಕಾಮಗಾರಿ   

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನಲ್ಲಿರುವ ಹಿಡಕಲ್ ಜಲಾಶಯದಿಂದ ಹುಬ್ಬಳ್ಳಿ– ಧಾರವಾಡ ಭಾಗದ ಕೈಗಾರಿಕಾ ಪ್ರದೇಶಗಳಿಗೆ ನೀರು ‍ಪೂರೈಕೆ ಮಾಡುವ ಯೋಜನೆಯನ್ನು ಸದ್ದಿಲ್ಲದೇ ಕೈಗೆತ್ತಿಕೊಳ್ಳಲಾಗಿದೆ. ಒಂದೂವರೆ ತಿಂಗಳ ಹಿಂದೆಯೇ ಕಾಮಗಾರಿ ಆರಂಭವಾಗಿದ್ದರೂ ಇದರ ಮಾಹಿತಿ ಎಲ್ಲಿಯೂ ಬಹಿರಂಗವಾಗಿಲ್ಲ. ಹೋರಾಟಗಾರರು, ರೈತರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಧಾರವಾಡದ ಕೆಐಎಡಿಬಿ ವತಿಯಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಪ್ರತಿ ದಿನ 45 ಎಂಎಲ್‌ಡಿ ನೀರು ಪೂರೈಕೆ ಮಾಡಲು ಪೈಪ್‌ಲೈನ್‌ ಅಳವಡಿಸಲಾಗುತ್ತಿದೆ. ಒಟ್ಟು ₹313 ಕೋಟಿ ವೆಚ್ಚದ ಕಾಮಗಾರಿನ್ನು ‘ಎಡಿಯು ಇನ್ರಾ’ ಎಂಬ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಒಟ್ಟು 80 ಕಿ.ಮೀವರೆಗೆ ಪೈಪ್‌ಲೈನ್‌ ಅಳವಡಿಸಲಾಗುತ್ತಿದೆ ಎಂದು ಕೆಐಎಡಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಕಾಮಗಾರಿಗೆ ಯಾವಾಗ ಅನುಮೋದನೆ ಸಿಕ್ಕಿದೆ, ಯಾವಾಗ ಆರಂಭಿಸಿದ್ದಾರೆ ಎಂಬ ಬಗ್ಗೆಯೂ ಬೆಳಗಾವಿಯ ಕೆಐಎಡಿಬಿ ಅಧಿಕಾರಿಗಳಿಗೆ ಮಾಹಿತಿ ಇಲ್ಲ ಎನ್ನುತ್ತಾರೆ.

ADVERTISEMENT

ಗೋಕಾಕ, ಬೈಲಹೊಂಗಲ, ಕಿತ್ತೂರು ತಾಲ್ಲೂಕುಗಳಲ್ಲಿ ರೈತರ ಜಮೀನುಗಳಲ್ಲಿ ಪೈಪ್‌ಲೈನ್‌ ಅಳವಡಿಕೆ ನಡೆದಿದೆ. ಪ್ರತಿ ಗುಂಟೆ ವಾಣಿಜ್ಯ ಬೆಳೆಗೆ ₹4,000, ತರಕಾರಿ ಬೆಳೆಗೆ ₹4,500 ಪರಿಹಾರ ಕೂಡ ಘೋಷಣೆ ಮಾಡಲಾಗಿದೆ.

ರೈತರು, ಹೋರಾಟಗಾರರ ವಿರೋಧ:

‘ಸವದತ್ತಿ ಬಳಿ ಮಲಪ್ರಭಾ ನದಿಗೆ ನಿರ್ಮಿಸಿದ ನವಿಲುತೀರ್ಥ ಜಲಾಶಯದಿಂದ ಹುಬ್ಬಳ್ಳಿ– ಧಾರವಾಡ ಅವಳಿ ನಗರಗಳಿಗೆ 2.5 ಟಿಎಂಸಿ ಅಡಿ ನೀರು ಪೂರೈಕೆ ಮಾಡುವುದು ಮೊದಲಿನಿಂದಲೂ ಇದೆ. ಈಗ ಘಟಪ್ರಭೆಯ ನೀರನ್ನೂ ಹುಬ್ಬಳ್ಳಿ– ಧಾರವಾಡದ ಕೈಗಾರಿಕಾ ಪ್ರದೇಶಕ್ಕೆ ಪೂರೈಕೆ ಮಾಡಲಾಗುತ್ತಿದೆ. ಪ್ರತಿ ಬೇಸಿಗೆಯಲ್ಲೂ ಜಿಲ್ಲೆಯ ಜನ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ಇದೆ. ಇಂಥದರಲ್ಲಿ ಕುಡಿಯುವ ನೀರನ್ನು ಕೈಗಾರಿಕೆಗಳಿಗೆ ಸರಬರಾಜು ಮಾಡುವುದು ಸರಿಯಲ್ಲ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಕಿಡಿ ಕಾರಿದ್ದಾರೆ.

ಈ ಕಾಮಗಾರಿ ನಿಲ್ಲಿಸಬೇಕು ಎಂದು ಆಗ್ರಹಿಸಿ ಅವರು, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಸಂಸದ ಜಗದೀಶ ಶೆಟ್ಟರ್‌ ಹಾಗೂ ಮೇಯರ್‌ ಸವಿತಾ ಕಾಂಬಳೆ ಅವರಿಗೂ ಮನವಿ ನೀಡಿದ್ದಾರೆ.

‘ರೈತರ ಗಮನಕ್ಕೆ ತರದೇ, ನಿರಾಕ್ಷೇಪಣಾ ವರದಿ ಕೂಡ ಪಡೆಯದೇ ಕಾಮಗಾರಿ ಮಾಡಲಾಗುತ್ತಿದೆ. ತಕ್ಷಣ ಇದನ್ನು ಕೈಬಿಡಬೇಕು’ ಎಂದು ಆಗ್ರಹಿಸಿ ರೈತ ಸಂಘದ ಮುಖಂಡ ಚೂಣಪ್ಪ ಪೂಜಾರಿ ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

‘ಹೊಲಕ್ಕೆ ಹೋದಾಗಲೇ ಗೊತ್ತಾಗಿದೆ’

‘ನಮ್ಮ ಹೊಲದಲ್ಲಿ ಕಾಮಗಾರಿ ನಡೆದಾಗಲೇ ಈ ಯೋಜನೆಯ ವಿಚಾರ ಗೊತ್ತಾಗಿದೆ. ಜಿಲ್ಲೆಯ ಯಾವುದೇ ಜನಪ್ರತಿನಿಧಿ ಅಥವಾ ಅಧಿಕಾರಿಗಳಿಗೆ ಇದರ ಮಾಹಿತಿ ನೀಡದೇ ಕೆಲಸ ಆರಂಭಿಸಿದ್ದು ಅಚ್ಚರಿ ತಂದಿದೆ. ಬೆಳಗಾವಿ ನಗರದಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟು ಇದೆ. ಹಿಡಕಲ್‌ ಜಲಾಶಯದ ನೀರನ್ನೂ ಕೈಗಾರಿಕೆಗೆ ಬಳಸುವುದು ಅವೈಜ್ಞಾನಿಕ’ ಎಂದು ಮಾಜಿ ಮೇಯರ್‌ ಎನ್‌.ಬಿ.ನಿರ್ವಾಣಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.