ಬೆಳಗಾವಿ: ಬೆಳಗಾವಿಯ 22ನೇ ಅವಧಿಯ ಮೇಯರ್ ಆಗುವ ಅವಕಾಶ ಲಕ್ಷ್ಮೀ ರಾಠೋಡ ಹಾಗೂ ಸವಿತಾ ಕಾಂಬಳೆ ಅವರಿಗೆ ಒಲಿದು ಬಂದಿದೆ. ಈ ಬಾರಿಯ ಮೇಯರ್ ಪಟ್ಟ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದು, ಬಿಜೆಪಿಯಲ್ಲಿ ಈ ಇಬ್ಬರು ಮಾತ್ರ ಅರ್ಹತೆ ಹೊಂದಿದ್ದಾರೆ.
2023ರ ಫೆಬ್ರುವರಿ 6ರಂದು ಮೇಯರ್ ಆಗಿ ಶೋಭಾ ಸೋಮನಾಚೆ ಹಾಗೂ ಉಪಮೇಯರ್ ಆಗಿ ರೇಷ್ಮಾ ಪಾಟೀಲ ಆಯ್ಕೆಯಾಗಿದ್ದರು. ಇದೇ ಫೆ.5ಕ್ಕೆ ಅವರ ಅವಧಿ ಪೂರ್ಣಗೊಳ್ಳಲಿದೆ. ಫೆ.6ರಿಂದ ಹೊಸ ಮೇಯರ್ ಪ್ರಕ್ರಿಯೆ ಆರಂಭವಾಗಲಿದೆ.
2024ನೇ ಸಾಲಿನ ಮೇಯರ್ ಹಾಗೂ ಉಪಮೇಯರ್ ಹುದ್ದೆಗಳ ಮೀಸಲಾತಿ ಮೂರು ವರ್ಷಗಳ ಹಿಂದೆ ಪ್ರಕಟವಾಗಿದೆ. 35ನೇ ವಾರ್ಡಿನ ಸದಸ್ಯೆ ಲಕ್ಷ್ಮೀ ರಾಠೋಡ ಹಾಗೂ 17ನೇ ವಾರ್ಡಿನ ಸದಸ್ಯೆ ಸವಿತಾ ಕಾಂಬಳೆ ಮಾತ್ರ ಎಸ್.ಸಿ (ಮಹಿಳೆ) ಅರ್ಹತೆ ಹೊಂದಿದ್ದಾರೆ. ಬಿಜೆಪಿಯೇ ಅಧಿಕಾರಾರೂಢ ಪಕ್ಷವಾದ ಕಾರಣ ಮೇಯರ್ ಆಯ್ಕೆ ಸುಲಭವಾಗಲಿದೆ ಎಂಬುದು ಲೆಕ್ಕಾಚಾರ. ಮೇಲಾಗಿ, ಕಾಂಗ್ರೆಸ್‌ನಲ್ಲಿ ಯಾವೊಬ್ಬ ಸದಸ್ಯರೂ ಎಸ್.ಸಿ ಮಹಿಳೆ ಇಲ್ಲ. ಹೀಗಾಗಿ, ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಕನ್ನಡ ಮೇಯರ್ ಅನಿವಾರ್ಯ: ವರ್ಷದ ಹಿಂದೆ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹಾಗೂ ಉತ್ತರ ಕ್ಷೇತ್ರದ ಶಾಸಕರಾಗಿದ್ದ ಅನಿಲ ಬೆನಕೆ ಅವರ ತಂತ್ರದಿಂದಾಗಿ ಮಹಾನಗರ ಪಾಲಿಕೆ ಮರಾಠಿ ಭಾಷಿಗರ ಪರವಾಗಿತ್ತು. ವಿಧಾನಸಭಾ ಚುನಾವಣೆಯಲ್ಲಿ ಮರಾಠಿ ಮತಗಳನ್ನು ಸೆಳೆಯುವ ಉದ್ದೇಶದಿಂದ ಎರಡೂ ಸ್ಥಾನಗಳನ್ನು ಮರಾಠಿಗರಿಗೆ ‘ಉಡುಗೊರೆ’ ನೀಡಲಾಗಿತ್ತು.
ಮೇಯರ್ ಹುದ್ದೆ ಸಾಮಾನ್ಯ ಇತ್ತು. ಕನ್ನಡತಿಯರಾದ ವಾಣಿ ವಿಲಾಸ ಜೋಶಿ, ಸವಿತಾ ಮರುಘೇಂದ್ರ ಪಾಟೀಲ, ದೀಪಾಲಿ ಟೊಪ್ಪಿಗೆ, ಸವಿತಾ ಕಾಂಬಳೆ, ಲಕ್ಷ್ಮೀ ರಾಠೋಡ, ವೀಣಾ ವಿಜಾಪುರ, ರೇಖಾ ಹೂಗಾರ, ರೂಪಾ ಚಿಕ್ಕಲದಿನ್ನಿ ಇನ್ನಿಲ್ಲದ ಕಸರತ್ತು ನಡೆಸಿದ್ದರು. ಆದರೆ, ಮರಾಠಿ ಭಾಷಿಗರನ್ನು ಓಲೈಸಲು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಮೇಯರ್ ಹಾಗೂ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಉಪಮೇಯರ್ ಸ್ಥಾನಗಳನ್ನು ಹಂಚಲಾಗಿತ್ತು.
ಆದರೆ, ಈ ಬಾರಿ ಮೇಯರ್ ಹುದ್ದೆಗೆ ಅರ್ಹತೆ ಹೊಂದಿರುವ ಇಬ್ಬರೂ ವನಿತೆಯರು ಕನ್ನಡ ಭಾಷಿಗರಾಗಿದ್ದಾರೆ. ಅನಿವಾರ್ಯವಾಗಿ ಕನ್ನಡಿಗರೇ ಪಟ್ಟಕ್ಕೇರಲಿದ್ದಾರೆ.
2021ರಲ್ಲಿ ಮೊದಲ ಬಾರಿಗೆ ಪಕ್ಷದ ಚಿಹ್ನೆ ಅಡಿ ಚುನಾವಣೆ ನಡೆದಿದೆ. ಕನ್ನಡ ಹಾಗೂ ಮರಾಠಿ ಭಾಷಿಗರು ಬಿಜೆಪಿ, ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಹೀಗಾಗಿ, ಯಾವ ಭಾಷಿಗರು ಮೇಯರ್ ಆಗುತ್ತಾರೆ ಎಂಬುದು ಪಕ್ಷಗಳಿಗೆ ಲೆಕ್ಕಕ್ಕೆ ಇಲ್ಲ.
ಫೆಬ್ರುವರಿ ಮೊದಲ ವಾರದಲ್ಲಿ ಮೇಯರ್ ಚುನಾವಣೆಯ ನೋಟಿಸ್ ನೀಡಲಾಗುವುದು. ಏಳು ದಿನಗಳ ಕಾಲಾವಕಾಶದ ಬಳಿಕ ಚುನಾವಣೆ ನಡೆಸಲಾಗುವುದುಸಂಜಯ ಶೆಟ್ಟೆಣ್ಣವರ ಪ್ರಾದೇಶಿಕ ಆಯುಕ್ತ
ಮೇಯರ್ ಸ್ಥಾನಕ್ಕೆ ನಾನೂ ಆಕಾಂಕ್ಷಿ. ಆದರೆ ನಮ್ಮ ಪಕ್ಷದ ಹಿರಿಯರೇ ನಿರ್ಧಾರ ಕೊನೆಯ ಮಾಡುತ್ತಾರೆ. ಪರಸ್ಪರ ಸ್ಪರ್ಧೆ ಮಾಡುವ ಇರಾದೆ ನಮ್ಮಲ್ಲಿ ಇಲ್ಲಲಕ್ಷ್ಮೀ ಮಹಾದೇವ ರಾಠೋಡ 35ನೇ ವಾರ್ಡಿನ ಸದಸ್ಯೆ
ಮೇಯರ್ ಮೀಸಲಾತಿ ಒಲಿದು ಬಂದಿದ್ದು ಅದೃಷ್ಟ. ಬಿಜೆಪಿ ಕೈಯಲ್ಲೇ ಪಾಲಿಕೆ ಇದೆ. ಮುಖಂಡರು ಯಾರನ್ನು ಮೇಯರ್ ಮಾಡುತ್ತಾರೋ ಅವರನ್ನು ಒಪ್ಪುತ್ತೇನೆಸವಿತಾ ಕಾಂಬಳೆ 17ನೇ ವಾರ್ಡಿನ ಸದಸ್ಯೆ
ಪಾಲಿಕೆ ಸದಸ್ಯರ ಮಾಹಿತಿ 58 ಪಾಲಿಕೆಯ ಒಟ್ಟು ವಾರ್ಡ್‌ಗಳು 35 ಬಿಜೆಪಿಯಿಂದ ಆಯ್ಕೆಯಾದವರು 12 ಪಕ್ಷೇತರರು (ನಾಲ್ಕು ಎಂಇಎಸ್ ಸೇರಿ) 10 ಕಾಂಗ್ರೆಸ್ ಸದಸ್ಯರು 1 ಎಂಎಂಐಎಂ ಸ್ಥಾನ
ಉಪಮೇಯರ್‌ಗೆ ಜಿದ್ದಾಜಿದ್ದಿ ಈ ಬಾರಿ ಉಪಮೇಯರ್ ಪಟ್ಟ ಸಾಮಾನ್ಯ ವರ್ಗವಿದೆ. ಹೀಗಾಗಿ ಬಿಜೆಪಿಯಲ್ಲಿನ ಹಿರಿಯ ಸದಸ್ಯರು ಪ್ರಭಾವಿಗಳು ಮಹಿಳಾ ಮಣಿಗಳು ಕೂಡ ಈ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ. ಮೇಯರ್‌ಗಿಂತ ಹೆಚ್ಚಿನ ಸ್ಪರ್ಧೆ ಉಪ ಮೇಯರ್‌ಗಾಗಿಯೇ ನಡೆಯುವುದು ನಿಚ್ಚಳವಾಗಿದೆ.
‘ಉಸ್ತುವಾರಿ’ ಇರಲಿದ್ದಾರೆ ಶೋಭಾ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಆ್ಯಕ್ಟ್–1976 ಅನ್ನು 2012ರಲ್ಲಿ ತಿದ್ದುಪಡಿ ಮಾಡಲಾಗಿದೆ. ಇದರ ಪ್ರಕಾರ ಹೊಸ ಮೇಯರ್ ಆಯ್ಕೆ ಆಗುವವರೆಗೆ ಹಿಂದಿನ ಮೇಯರ್ ‘ಉಸ್ತುವಾರಿ’ ಆಗಿರುತ್ತಾರೆ. ಮೇಯರ್ ಚುನಾವಣೆಗೆ ನೋಟಿಸ್ ನೀಡಿದ ಬಳಿಕ ಏಳು ದಿನಗಳ ಕಾಲಾವಕಾಶ ಕೊಡಬೇಕು ಎಂಬುದು ನಿಯಮ. ಆದರೆ ಈ ಬಾರಿ ತುಸು ತಡವಾಗಲಿದೆ. ಹೀಗಾಗಿ ಶೋಭಾ ಅವರು ಕೆಲ ದಿನಗಳವರೆಗೆ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. ಅವರಿಗೆ ಯಾವುದೇ ಕಡತ ವಿಲೇವಾರಿ ಮಾಡುವ ಗೊತ್ತುವಳಿ ಮಂಡಿಸುವ ಅನುದಾನಕ್ಕೆ ಸಹಿ ಮಾಡುವ ಅಧಿಕಾರ ಇರುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.